ಸೋಮವಾರ, ಮೇ 17, 2021
31 °C

ಮಾಗಡಿ: ಪರಿಷೆಯಲ್ಲಿ ಹೋರಿಕರುಗಳ ಕಾರುಬಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ರಂಗನಾಥ ಸ್ವಾಮಿ ದನಗಳ ಪರಿಷೆಯಲ್ಲಿ ಈ ಬಾರಿ ಹೋರಿ ಕರುಗಳದ್ದೇ ಕಾರುಬಾರು. ಇವುಗಳ ಖರೀದಿಗೆ ರಾಜ್ಯದ ವಿವಿಧ ಜಿಲ್ಲೆಯ ಹಾಗೂ ಹೊರರಾಜ್ಯದ ಖರೀದಿದಾರರು ಇಲ್ಲಿಗೆ ಬಂದಿದ್ದಾರೆ.

ರೈತರು ಸಾಲಿನಲ್ಲಿ ಜಾನುವಾರುಗಳನ್ನು ಕಟ್ಟಿ ಮಾರಾಟ ಮಾಡುತ್ತಿದ್ದಾರೆ. ದಲ್ಲಾಳಿಗಳ ತಂತ್ರಗಾರಿಕೆಯೂ ನಡೆದಿದೆ. ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ.   

‘ಮಾಗಡಿ ರಂಗಯ್ಯನ ದನಗಳ ಪರಿಷೆ ನಾಡಿನಲ್ಲಿಯೇ ದೊಡ್ಡ ಜಾತ್ರೆ. ಹಿಂದೆ 10 ಕಿ.ಮೀ ವ್ಯಾಪ್ತಿಯ ಗ್ರಾಮಗಳ ಲಕ್ಷಾಂತರ ರಾಸುಗಳು ಬಂದು ಸೇರುತ್ತಿದ್ದವು. 10ರಿಂದ 13 ದಿನಗಳ ಕಾಲ ಪರಿಷೆ ನಡೆಯುತ್ತಿತ್ತು. ಪರಿಷೆ ಸೇರುತ್ತಿದ್ದ ಪ್ರದೇಶ ಈಗ ಬಡಾವಣೆಗಳಾಗಿವೆ. ರಂಗನಾಥ ಸ್ವಾಮಿ ದನಗಳ ಜಾತ್ರೆ ಮುಂದುವರಿಸಲು ಜಾತ್ರಾ ಬಯಲು ಉಳಿಸಬೇಕು’ ಎಂದು ಪಶುಪಾಲಕ ಪೂಜಾರಿ ಚಿತ್ತಯ್ಯ ಒತ್ತಾಯಿಸಿದರು. 

‘ಗುಂಡುತೋಪು, ಕಲ್ಯಾಣಿ, ಕೆರೆ, ಕಟ್ಟೆಗಳು ಒತ್ತುವರಿಯಾಗಿವೆ. ದನಗಳನ್ನು ರಸ್ತೆ ಬದಿ ಕಟ್ಟಿ ಹಾಕಲಾಗುತ್ತಿದೆ. ಕೆರೆ, ಗೋಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಕುಡಿಯುವ ನೀರಿಗೆ ತತ್ವಾರ ಪಡಬೇಕಿದೆ. ಮುಜರಾಯಿ ಇಲಾಖೆಯ ಅಧಿಕಾರಿಗಳು ಗಮನಹರಿಸಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿರುವ ಅರವಟಿಕೆಗಳ ಬಯಲು ಉಳಿಸಬೇಕು’ ಎಂದು ಆಗ್ರಹಿಸಿದರು.

ಮತ್ತಿಕೆರೆ ಕಾಡುಗೊಲ್ಲರಹಟ್ಟಿ ಗಂಗಮಾರಯ್ಯ ಮಾತನಾಡಿ, ‘ಮಾಗಡಿ ದನಗಳ ಪರಿಷೆಯಲ್ಲಿ ಸಿನಿಮಾ ಟೆಂಟ್‌ಗಳು, ಕುಸ್ತಿ ಪಂದ್ಯಾವಳಿ, ಸರ್ಕಸ್‌, ಗರಡಿ ಗಮ್ಮತ್ತು ಇತ್ತು. ನೂರಾರು ಅರವಟಿಕೆಗಳಲ್ಲಿ ರಾಸುಗಳನ್ನು ಕಟ್ಟಿರುವ ರೈತರಿಗೆ ಅನ್ನದಾನ ನಡೆಯುತ್ತಿತ್ತು. ದಕ್ಷಿಣ ಮೈಸೂರು ಪ್ರಾಂತ್ಯದವರು ಸಾಕಿರುವ ನಾಟಿ ಹಸು, ಕರು, ಬೀಜದ ಹೋರಿಗಳನ್ನು ಖರೀದಿಸಲು ಉತ್ತರ ಕರ್ನಾಟಕದ ರೈತರು ಆಗಮಿಸುತ್ತಿದ್ದರು’ ಎಂದು ಸ್ಮರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು