ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ ಪುರಸಭೆ: ಮೀಸಲಾತಿ ಪುನರಾವರ್ತನೆ

ಈ ಬಾರಿಯೂ ಮಹಿಳೆಯರ ಆಡಳಿತ : 15 ತಿಂಗಳ ನಂತರ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಕಾಣುವ ಯೋಗ
ಸುಧೀಂದ್ರ ಸಿ.ಕೆ.
Published 7 ಆಗಸ್ಟ್ 2024, 5:01 IST
Last Updated 7 ಆಗಸ್ಟ್ 2024, 5:01 IST
ಅಕ್ಷರ ಗಾತ್ರ

ಮಾಗಡಿ: ಕಳೆದ 15 ತಿಂಗಳಿಂದ ಜನಪ್ರತಿನಿಧಿಗಳ ಅಧಿಕಾರ ಕಾಣದೆ ಆಡಳಿತ ಅಧಿಕಾರಿ ಉಸ್ತುವಾರಿಯಲ್ಲಿದ್ದ ಮಾಗಡಿ ಪುರಸಭೆಗೆ ಕೊನೆಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಕಾಣುವ ಯೋಗ ಕೂಡಿ ಬಂದಿದೆ. 

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಸೋಮವಾರ ಮೀಸಲಾತಿ ಪ್ರಕಟಣೆ ಮಾಡಿದ್ದು, ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 

ಮಾಗಡಿ ಪುರಸಭೆಗೆ ಕಳೆದ ಅವಧಿಯಲ್ಲಿ ನಿಗದಿಯಾಗಿದ್ದ ಮೀಸಲಾತಿಯೇ ಈ ಬಾರಿಯೂ ಪುನರಾವರ್ತನೆಯಾಗಿದೆ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇದರಿಂದಾಗಿ ಅಧ್ಯಕ್ಷ ಸ್ಥಾನದ ಮೇಲೆ ಆಸೆ ಇಟ್ಟುಕೊಂಡಿದ್ದ ಪುರುಷ ಸದಸ್ಯರಿಗೆ ಹೊಸ ಮೀಸಲಾತಿ ನಿರಾಸೆ ತಂದಿದೆ.  

ಬಿಜೆಪಿ ಸರ್ಕಾರದಲ್ಲಿ ನಿಗದಿ ಮಾಡಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯಲ್ಲಿ ಆಗಿದ್ದ ಲೋಪ ಹಾಗೂ ಪುನರಾವರ್ತನೆ ಪ್ರಶ್ನಿಸಿ ತಡೆಯಾಜ್ಞೆ ತರಲಾಗಿತ್ತು. ಹಾಗಾಗಿ ಮಾಗಡಿ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಆಗಿರಲಿಲ್ಲ.

ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಕ ಮಾಡಿತ್ತು. ಐದು ವರ್ಷದ ಅವಧಿಯಲ್ಲಿ 15 ತಿಂಗಳು ಆಡಳಿತವನ್ನು ಆಡಳಿತ ಅಧಿಕಾರಿಯೇ ನಡೆಸಿದ್ದಾರೆ. ಹಾಗಾಗಿ ಬಾಕಿ ಉಳಿದಿರುವ 15 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾಗಬೇಕಿದೆ. 

ರಾಜ್ಯ ಸರ್ಕಾರ ತಾನು ನಿಗದಿ ಮಾಡಿದ್ದ ಮೀಸಲಾತಿ ಪಟ್ಟಿಯನ್ನು 2022ರ ಸೆಪ್ಟೆಂಬರ್ ನಲ್ಲಿ ಪ್ರಮಾಣ ಪತ್ರದ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಮೂಲಕ ಮೀಸಲಾತಿ ಪಟ್ಟಿ ಸಿದ್ಧಪಡಿಸಲಾಗಿದೆ. ಮೀಸಲಾತಿ ಪುನರಾವರ್ತನೆಗೆ ಅವಕಾಶ ಇಲ್ಲದಂತೆ ನಿಯಮಾನುಸಾರ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು.

ಹೊಸಬರ ಎದುರು ಬೆಟ್ಟದಷ್ಟು ಸಮಸ್ಯೆ 

15 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲದ ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳು  ಹೊಸ ಅಧ್ಯಕ್ಷ ಉಪಾಧ್ಯಕ್ಷರನ್ನು ಸ್ವಾಗತಿಸಲು ಕಾದಿವೆ. ಒಳಚರಂಡಿ ಕುಡಿಯುವ ನೀರು ಕಂದಾಯ ವಸೂಲಿ ಡಂಪಿಂಗ್ ಹಾರ್ಡ್ ನಿರ್ವಹಣೆ ಇ-ಖಾತೆ ಪುರಸಭೆ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಇಲ್ಲದ ಕಾರಣ ಜನನ ಮರಣ ಪತ್ರ ವಿತರಣೆ ವಿಳಂಬ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳ ಸರಮಾಲೆಯೇ ಇದೆ.  

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲು ಪುನರಾವರ್ತನೆ ಆಗಿರುವುದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದೆ. ಕಳೆದ ಬಾರಿ ಕೂಡ ಈಗ ಪ್ರಕಟವಾಗಿರುವ ಮೀಸಲಾತಿಯೇ ಇತ್ತು. ಮತ್ತೇ ಯಥಾವತ್ತಾಗಿ ಅದೇ ಮೀಸಲಾತಿ ಪುನರಾವರ್ತನೆ ಆಗಿರುವುದರಿಂದ ಹಿಂದುಳಿದ ವರ್ಗದವರಿಗೆ ಸರ್ಕಾರ ಅನ್ಯಾಯ ಮಾಡಿದೆ.
ಅಶ್ವಥ್, ಮಾಗಡಿ ಪುರಸಭಾ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT