ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಪಿ. ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆ ಪ್ರಕರಣ: ಮತ್ತಿಬ್ಬರು ಪೊಲೀಸ್ ವಶಕ್ಕೆ

ಹಾವು ಕಚ್ಚಿರುವ ಕಾರಣ ಮುಖ್ಯ ಆರೋಪಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
Published 16 ಡಿಸೆಂಬರ್ 2023, 21:12 IST
Last Updated 16 ಡಿಸೆಂಬರ್ 2023, 21:12 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ವಡ್ಡರದೊಡ್ಡಿಯಲ್ಲಿ ನಡೆದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಭಾವ ಮಹದೇವಯ್ಯ ಪಿ. ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ಪೊಲೀಸರು ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ಹುಡುಕಾಟ ಮುಂದುವರೆದಿದೆ.

ಪೊಲೀಸರು ಬಂಧಿಸುವ ಮೊದಲೇ ಹಾವು ಕಡಿದು ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯ ಆರೋಪಿ ಮುರುಗೇಶ್‌ಗೆ (42) ಚನ್ನಪಟ್ಟಣದಲ್ಲಿ ಚಿಕಿತ್ಸೆ ಕೊಡಿಸಿದ ಪೊಲೀಸರು, ಶನಿವಾರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತನ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ರಾಮನಗರ ಕಾರಾಗೃಹದಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಮುರುಗೇಶ್‌ ಪತ್ನಿ ಮತ್ತು ಆತನ ಮಲ ಸಹೋದರನನ್ನು ಸಹ ವಶಕ್ಕೆ ಪಡೆಯಲಾಗಿದೆ. ಆರೋಪಿ ಸೇರಿದಂತೆ ಇವರಿಬ್ಬರೂ ಧರ್ಮಪುರಿ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಪೆನ್ನಾಗ್ರಂ ಗ್ರಾಮದವರಾಗಿದ್ದಾರೆ.

ಈ ಪೈಕಿ, ಆತನ ಮಲ ಸಹೋದರ ಕೂಡ ಮುರುಗೇಶ್‌ ಜೊತೆ ಕೃತ್ಯದಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ. ಕೊಲೆಗೆ ಆತನ ಪತ್ನಿಯೂ ಸಹಕರಿಸಿರುವ ಶಂಕೆ ಇರುವುದರಿಂದ ಆಕೆಯನ್ನೂ ಸಹ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿ. 1ರಂದು ರಾತ್ರಿ 11 ಗಂಟೆ ಸುಮಾರಿಗೆ ವಡ್ಡರದೊಡ್ಡಿಯ ತೋಟದ ಮನೆಗೆ ಬಂದಿದ್ದ ಆರೋಪಿಗಳು ಮತ್ತು ಮಹದೇವಯ್ಯ ಅವರ ನಡುವೆ ಮಾತಿನ ಚಕಮಕಿ ನಡೆದು, ಹಲ್ಲೆ ಮಟ್ಟಕ್ಕೆ ಹೋಗಿದೆ. ಮಹದೇವಯ್ಯ ಸಹ ಮುರುಗೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ, ಉಳಿದವರು ರಾಡ್‌ನಿಂದ ಮಹದೇವಯ್ಯ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಹನೂರು ತಾಲ್ಲೂಕಿನ ರಾಮಾಪುರ ಬಳಿ ಎಸೆದು ಹೋಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶವ ಮತ್ತು ಕಾರು ಯಾರಿಗೂ ಸಿಗದಿದ್ದರೆ ತಮ್ಮ ಸುಳಿವು ಸಿಗುವುದಿಲ್ಲ ಎಂದು ಭಾವಿಸಿದ್ದ ಆರೋಪಿಗಳು, ಕಾರಿನಲ್ಲೇ ತಮ್ಮೂರಿಗೆ ಹೋಗಲು ನಿರ್ಧರಿಸಿದ್ದರು. ಆದರೆ, ಶವ ಸಾಗಿಸುವಾಗ ಮಾರ್ಗಮಧ್ಯೆ ಕಾರು ಒಂದೆರಡು ಸಲ ತೊಂದರೆ ಕೊಟ್ಟಿದೆ. ಜೊತೆಗೆ, ಇಂಧನ ಕೂಡ ತಗ್ಗಿದ್ದರಿಂದ ರಾಮಾಪುರ ಬಳಿ ಕಾರು ನಿಲ್ಲಿಸಿ ಬಸ್ ಹತ್ತಿಕೊಂಡು ತಮ್ಮೂರಿಗೆ ಹೋಗಿದ್ದರು.

ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಕರಣದ ಮುಖ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹಾವು ಕಚ್ಚಿರುವ ಕಾರಣ ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ

–ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನ

ಬೆನ್ನಟ್ಟಿ ಬಂಧನ ವಿವಿಧೆಡೆ ಸಿಕ್ಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಮುರುಗೇಶ್‌ ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತವಾಯಿತು. ತಮಿಳುನಾಡಿನ ಧರ್ಮಪುರಿಯಲ್ಲಿರುವ ಅವರ ವಿಳಾಸ ಪತ್ತೆ ಹಚ್ಚಿದ ತಂಡ ಆತನ ಬಂಧಿಸಲು ಊರಿಗೆ ತೆರಳಿತ್ತು. ಆತನ ಮನೆ ಬಾಗಿಲು ಹಾಕಿತ್ತು. ಹಾವು ಕಚ್ಚಿದ್ದರಿಂದ ಆತ ಧರ್ಮಪುರಿಯ ಆಸ್ಪತ್ರೆಗೆ ದಾಖಲಾಗಿದ್ದ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಆಸ್ಪತ್ರೆಯಲ್ಲಿರುವ ವಿಷಯ ತಿಳಿಸಿದರು. ಅಲ್ಲಿಂದ ತಂಡ ಆಸ್ಪತ್ರೆಗೆ ಹೋಗಿತು. ಅಷ್ಟೊತ್ತಿಗಾಗಲೇ ಗ್ರಾಮದವರು ಮುರುಗೇಶ್‌ಗೆ ‘ಕರ್ನಾಟಕದಿಂದ ಯಾರೊ ನಿನ್ನನ್ನು ಹುಡುಕಿಕೊಂಡು ಬಂದಿದ್ದರು’ ಎಂದು ವಿಷಯ ತಿಳಿಸಿದ್ದರು. ‘ತನ್ನನ್ನು ಹಿಡಿಯಲು ಪೊಲೀಸರೇ ಬಂದಿದ್ದಾರೆ ಎಂದು ಅನುಮಾನಗೊಂಡ ಆತ ತನಗೆ ಹಾಕಿದ್ದ ಡ್ರಿಪ್‌ ಕಿತ್ತು ಹಾಕಿ ಆಸ್ಪತ್ರೆಯವರಿಗೂ ಹೇಳದೆ ಅಲ್ಲಿಂದ ವಾಹನದಲ್ಲಿ ಪರಾರಿಯಾಗುತ್ತಿದ್ದ. ಅಷ್ಟೊತ್ತಿಗಾಗಲೇ ನಮ್ಮ ತಂಡ ಆಸ್ಪತ್ರೆಗೆ ಹೋಗಿತ್ತು. ವಾಹನ ಬೆನ್ನಟ್ಟಿ ಹಿಡಿಯಲಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತೋಟದ ಮನೆಗೆ ಕಾರಲ್ಲಿ ಬಂದಿದ್ದರು

ಮಹದೇವಯ್ಯ ಅವರನ್ನು ಕೊಲೆ ಮಾಡಲು ಕಾರಿನಲ್ಲಿ ಬಂದಿದ್ದ ಹಂತಕರು ತೋಟದ ಮನೆಯಿಂದ ದೂರದಲ್ಲೇ ಕಾರು ನಿಲ್ಲಿಸಿ ಮನೆಗೆ ನಡೆದುಕೊಂಡು ಬಂದಿದ್ದರು. ಕೃತ್ಯದ ಬಳಿಕ ರಾಮಾಪುರದ ಅರಣ್ಯ ಪ್ರದೇಶದಲ್ಲಿ ಶವ ಎಸೆದಿರುವ ಆರೋಪಿಗಳು ಕಾರನ್ನು ಅಲ್ಲಿನ ಆಸ್ಪತ್ರೆ ಬಳಿ ನಿಲ್ಲಿಸಿ ಮಾದೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲೊಬ್ಬ ಆರೋಪಿ ಮುಡಿ ಕೊಟ್ಟಿದ್ದ. ನಂತರ ಇಬ್ಬರು ತಮಿಳುನಾಡಿಗೆ ತೆರಳಿದರೆ ಮತ್ತೊಬ್ಬ ಕಾರು ತೆಗೆದುಕೊಂಡು ಹೋಗಲು ಚನ್ನಪಟ್ಟಣಕ್ಕೆ ವಾಪಸ್ ಬಂದಿದ್ದ. ಕಾರನ್ನು ತೆಗೆದುಕೊಂಡು ಸಾತನೂರು ಹಲಗೂರು ಮಾರ್ಗವಾಗಿ ತಮಿಳುನಾಡಿಗೆ ಹೋಗುತ್ತಿದ್ದಾಗ ಮಹದೇವಯ್ಯ ಅವರ ಮೊಬೈಲ್ ಅನ್ನು ಸ್ವಿಚ್ ಆನ್ ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಬಂದ ಕರೆ ಸಹ ಸ್ವೀಕರಿಸಿರುವ ಆತ ಒಂದೆರಡು ಮಾತನಾಡಿ ನಂತರ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆರೋಪಿ ಮುರುಗೇಶ್ ಚನ್ನಪಟ್ಟಣದಲ್ಲಿ 20 ವರ್ಷಗಳಿಂದ ನೆಲೆಸಿದ್ದ. ವಿವಿಧೆಡೆ ತೋಟ ಕಾಯುವ ಕೆಲಸ ಮಾಡಿಕೊಂಡಿದ್ದ ಆತ ಯೋಗೇಶ್ವರ್ ಅವರ ಸೋದರನ ತೋಟದಲ್ಲಿ ಸಹ ಕೆಲಸ ಮಾಡಿದ್ದ. ತನ್ನ ಪುತ್ರನನ್ನು ಚಕ್ಕೆರೆಯ ಶಾಲೆಯೊಂದಕ್ಕೆ ಸೇರಿಸಿದ್ದ ಮುರುಗೇಶ್ ಮಗನನ್ನು ಶಾಲೆ ಬಿಡಿಸಿ ತಮಿಳುನಾಡಿಗೆ ಹೋಗಿ ನೆಲೆಸಲು ನಿರ್ಧರಿಸಿದ್ದ. ಅದಕ್ಕಾಗಿ ಮಗನ ದಾಖಲೆಗಳನ್ನು ನೀಡುವಂತೆ ಶಾಲೆಗೆ ಮನವಿ ಮಾಡಿದ್ದ ಎಂದು ಮೂಲಗಳು ಹೇಳಿವೆ.

ಕೊಲೆಗೆ ನಿಖರ ಕಾರಣ ಇನ್ನೂ ಅಸ್ಪಷ್ಟ

‘ಮಹದೇವಯ್ಯ ಅವರು ನಮಗೆ ಮೋಸ ಮಾಡಿದರು. ಹಾಗಾಗಿ ಕೊಲೆ ಮಾಡಿದೆವು’ ಎಂದಷ್ಟೇ ಮುರುಗೇಶ್‌ ಬಾಯ್ಬಿಟ್ಟಿದ್ದಾನೆ. ಆದರೆ ಕೊಲೆಗೆ ಅದೊಂದೇ ಅಂಶ ಕಾರಣವಲ್ಲ ಎಂಬುದು ಸ್ಪಷ್ಟ. ಈ ನಡುವೆ ಮಹಿಳೆಯೊಬ್ಬರ ಪಾತ್ರವೂ ಕೃತ್ಯದಲ್ಲಿ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಎಲ್ಲಾ ಆಯಾಮದಿಂದಲೂ ತನಿಖೆ ನಡೆಯಬೇಕಿದೆ. ಆರೋಪಿ ಆಸ್ಪತ್ರೆಯಲ್ಲಿರುವುದರಿಂದ ಆತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಿದೆ. ಜೊತೆಗೆ ಮತ್ತೊಬ್ಬನ ಬಂಧನವಾಗಬೇಕಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT