ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸಂಭ್ರಮದ ಮಹಿಷ ದಸರಾ

Published 25 ಅಕ್ಟೋಬರ್ 2023, 6:41 IST
Last Updated 25 ಅಕ್ಟೋಬರ್ 2023, 6:41 IST
ಅಕ್ಷರ ಗಾತ್ರ

ರಾಮನಗರ: ನಗರದ ಜೂನಿಯರ್‌ ಕಾಲೇಜು ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ‌ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅ. 22ರಂದು 9ನೇ ವರ್ಷದ ಮಹಿಷ ದಸರಾ ಕಾರ್ಯಕ್ರಮ ಜರುಗಿತು. ಸಂಜೆ ವೃತ್ತದಲ್ಲಿ ಜಮಾಯಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಹಿಷಾಸುರನ ಚಿತ್ರದ ದೊಡ್ಡ ಫ್ಲೆಕ್ಸ್‌ಗೆ ಪುಷ್ಪನಮನ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಜಗದೀಶ್, ‘ನಾಡಿನ ದೊರೆಗಳಲ್ಲಿ ಒಬ್ಬನಾಗಿರುವ ಮಹಿಷಾಸುರನ ಬಗ್ಗೆ ಹೆಚ್ಚಿನ‌ ಸಂಶೋಧನೆ ನಡೆಯಬೇಕಿದೆ. ಮೈಸೂರಿನ ಇತಿಹಾಸದಲ್ಲಿ ಚಾಮುಂಡೇಶ್ವರಿ‌ ಮತ್ತು ಮಹಿಷಾಸುರ ಇಬ್ಬರೂ ಸಮಕಾಲೀನರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಇಬ್ಬರು ಸಮಕಾಲೀನರಾಗಿದ್ದರೂ ಈ ಪೈಕಿ, ಮಹಿಷಾ ರಾಕ್ಷಸನಾಗಿದ್ದ. ಎಲ್ಲರಿಗೂ ತೊಂದರೆ ಕೊಡುತ್ತಿದ್ದ. ಹಾಗಾಗಿ, ಚಾಮುಂಡೇಶ್ವರಿ ಆತನನ್ನು ಕೊಂದಳು ಎಂದು ಹೇಳುವ ಮನುವಾದಿಗಳು, ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವ ಅನೇಕ ದಾಖಲೆಗಳಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ’ ಎಂದರು.

ಕೆಪಿಸಿಸಿ ಸದ್ಯಸ ಶಿವಲಿಂಗಯ್ಯ ಮಾತನಾಡಿ, ‘ಚಾಮುಂಡಿ ಬೆಟ್ಟ ಎನ್ನುವುದಕ್ಕೆ ಚರಿತ್ರೆಯಲ್ಲಿ ಯಾವುದೇ ಕುರುಹುಗಳಿಲ್ಲ. ಮಹಿಷಾ ಮಂಡಲ, ಮಹಿಷಾ ಬೆಟ್ಟ ಎನ್ನುವ ಕುರುವು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಮಹಿಷಾಸುರ ಮೈಸೂರ ದೊರೆಯಾಗಿ ರಾಜ್ಯವನ್ನು ಆಳಿದವನು. ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೂ ಮಹಿಷಾ ಎಂಬ ದೇವಸ್ಥಾನಗಳು, ಆತನ ಕುರುಹುಗಳು ಸಿಗುತ್ತವೆ’ ಎಂದು ಹೇಳಿದರು.

‘ಚಾಮುಂಡೇಶ್ವರ ಬಗ್ಗೆ ಯಾವುದೇ ಗುರುತುಗಳು ಇಲ್ಲ. ಆದರೆ, ಮನುವಾದಿಗಳು ಮಹಿಷಾ ಒಬ್ಬ ರಾಕ್ಷಸ ಆತನನ್ನು ಕೊಲ್ಲಲು ಅವತಾರವೆತ್ತಿ ಬಂದವಳು ಚಾಮುಂಡೇಶ್ವರಿ ಎಂದು, ಇತಿಹಾಸವನ್ನು ತಿರುಚಿ ಈ‌ ದೇಶದ ಶೂದ್ರ ಜನಾಂಗದ ನೈಜ ಇತಿಹಾಸವನ್ನು ನಾಶಪಡಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಛಲವಾದಿ ಸಂಘದ ಅಧ್ಯಕ್ಷ ಗೋಪಿ, ಪುರಸಭೆ ಮಾಜಿ ಸದಸ್ಯ ಶಿವಕುಮಾರ್, ಎಸ್‌ಡಿಪಿಐ ಉಪಾಧ್ಯಕ್ಷ ಅಮ್ಜದ್ ಪಾಷಾ, ಬಿ.ಎಸ್.ಐ ಜಿಲ್ಲಾಧ್ಯಕ್ಷ ಚಿಕ್ಕವೆಂಕಟಯ್ಯ, ಜೆಡಿಎಸ್ ಹಿರಿಯ ಮುಖಂಡ ಕೆಂಗಲಯ್ಯ, ಉದ್ಯಮಿ ಜನಾರ್ಧನ್, ಮುಖಂಡರಾದ ಗುರುಮಲ್ಲಯ್ಯ, ರವಿ, ನವೀನ್, ಗುರು, ಲೋಕೇಶ್, ಶಂಕರ್ ಸಿದ್ದರಾಜು ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT