ಕನಕಪುರ: ಕ್ರೆಡಿಟ್ ಕಾರ್ಡ್ ಹಣ ವಸೂಲಿ ಮಾಡುವ ಏಜೆನ್ಸಿಯೊಂದರ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಎನ್ಎಸ್ ವೃತ್ತದಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಬಸವೇಶ್ವರ ನಗರದ ನಿವಾಸಿ ಸಂತೋಷ್ (41) ಆತ್ಮಹತ್ಯೆಗೆ ಶರಣಾದವರು.
ಹಲವು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಲ ಪಡೆದಿದ್ದ ಸಂತೋಷ್ ಅವರಿಗೆ ಹಣ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ವಸೂಲಿ ಏಜೆನ್ಸಿಯವರು ಮನೆಗೆ ಬಂದು ಗಲಾಟೆ ಮಾಡಿದ್ದರು. ಶೀಘ್ರ ಹಣ ಪಾವತಿಸುವಂತೆ ಎಚ್ಚರಿಕೆ ನೀಡಿ ಹೋಗಿದ್ದರು ಎಂದು ಸಂತೋಷ್ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ.
‘ಭಾನುವಾರ ಮನೆಗೆ ಬರುತ್ತೇವೆ. ಅಂದು ಸಾಲ ಪಡೆದ ಪೂರ್ಣ ಹಣವನ್ನು ಮರುಪಾವತಿಸದಿದ್ದರೆ ಕತೆಯೇ ಬೇರೆ ಆಗುತ್ತದೆ’ ಎಂದು ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಇದರಿಂದ ಹೆದರಿದ್ದ ಸಂತೋಷ್ ಭಾನುವಾರ ಡೆತ್ ನೋಟು ಬರೆದಿಟ್ಟು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಾನುವಾರ ಸಂತೋಷ್ ಮನೆಗೆ ಬಂದ ರಿಕವರಿ ಏಜೆನ್ಸಿ ಸಿಬ್ಬಂದಿ ಕೊಠಡಿ ಬಾಗಿಲು ಒಡೆದು ನೋಡಿದಾಗ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸಾಲ ವಸೂಲಾತಿಗೆ ಬಂದವರು ಪರಾರಿಯಾಗಿದ್ದಾರೆ.
‘ನನ್ನ ಗಂಡನ ಸಾವಿಗೆ ಸಾಲ ವಸೂಲಿ ಏಜೆನ್ಸಿ ಸಿಬ್ಬಂದಿ ಕಾರಣ. ಅವರ ಕಿರುಕುಳದಿಂದಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಸಂತೋಷ್ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.