ಶುಕ್ರವಾರ, ಸೆಪ್ಟೆಂಬರ್ 17, 2021
24 °C
ಜಾನಪದ ಲೋಕದ ಮುಂಭಾಗ ಮಳಿಗೆಗಳ ವ್ಯವಸ್ಥೆ

ಮಾವು ಮಾರಾಟ ಮೇಳ 10ರಿಂದ, ಕಾರ್ಬೈಡ್‌ ಮುಕ್ತ ಹಣ್ಣುಗಳ ಖರೀದಿ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕಿ–ಅಂಶ
ಕಳೆದ ವರ್ಷದ ಮೇಳದಲ್ಲಿನ ವಹಿವಾಟು

* 8–ದಿನಗಳ ಕಾಲ ನಡೆದ ಮೇಳ
* 20–ಮೇಳದಲ್ಲಿ ಪಾಲ್ಗೊಂಡ ರೈತರು
* 13,855 ಕೆ.ಜಿ–ಮಾರಾಟವಾದ ಹಣ್ಣಿನ ಪ್ರಮಾಣ
* ₹10.32 ಲಕ್ಷ–ಮೇಳದಲ್ಲಿನ ವಹಿವಾಟಿನ ಮೊತ್ತ

ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದ ಮುಂಭಾಗದಲ್ಲಿ ಇದೇ 10ರಿಂದ 14ರವರೆಗೆ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವು ನಡೆಯಲಿದೆ. ಈ ವರ್ಷ 15 ಟನ್‌ ಹಣ್ಣು ಮಾರಾಟದ ಗುರಿ ಹೊಂದಲಾಗಿದೆ.

ಮೇಳದ ಸಿದ್ಧತೆಗಳ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಜಿಲ್ಲೆಯಲ್ಲಿ ಮಾವು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದು, 23,350 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ವರ್ಷ 2 ಲಕ್ಷ ಟನ್‌ನಷ್ಟು ಇಳುವರಿ ನಿರೀಕ್ಷೆ ಇದೆ. ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಡೆಯಲಿರುವ ಮೇಳದಲ್ಲಿ ಸುಮಾರು 50ಕ್ಕೂ ಹೆಚ್ಚು ತಳಿಯ ಮಾವಿನ ಪ್ರದರ್ಶನದ ಜೊತೆಗೆ ಮಾರಾಟವೂ ನಡೆಯಲಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ಕಾರ್ಬೈಡ್‌ಮುಕ್ತ , ನೈಸರ್ಗಿಕ ವಿಧಾನದಿಂದ ಮಾಗಿಸುವ ಹಣ್ಣುಗಳು ಸಿಗಲಿವೆ. ಹಾಪ್‌ಕಾಮ್ಸ್‌ ನಿಗದಿಪಡಿಸಿದ ದರದಲ್ಲಿ ಹಣ್ಣಿನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ’ ಎಂದರು.

ಕಳೆದ 9 ವರ್ಷಗಳಿಂದ ತೋಟಗಾರಿಕೆ ಇಲಾಖೆಯು ಈ ಮೇಳವನ್ನು ಆಯೋಜಿಸುತ್ತಾ ಬಂದಿದೆ. ಇದೇ 10ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ವಿ. ವೆಂಕಟೇಶ್‌ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ವರ್ಷ ಈಗಾಗಲೇ 25ಕ್ಕೂ ಹೆಚ್ಚು ರೈತರು ಮಳಿಗೆ ಆರಂಭಕ್ಕೆ ನೋಂದಾಯಿಸಿಕೊಂಡಿದ್ದಾರೆ. ಅಗತ್ಯ ಬಿದ್ದಲ್ಲಿ ಮತ್ತೊಂದು ಕಡೆಯೂ ಮಳಿಗೆ ತೆರೆಯಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ರಾಜ್ಯದ ಮಾವು ಮಾರಾಟಕ್ಕೆ ಅನುಕೂಲವಾಗುವಂತೆ ಮಾವು ಅಭಿವೃದ್ಧಿ ನಿಗಮವು ‘ಕರಸಿರಿ’ ಎನ್ನುವ ಪ್ರತ್ಯೇಕ ಬ್ರಾಂಡ್‌ ಅನ್ನು ಒದಗಿಸಿದೆ. ಇದರಿಂದ ಜಿಲ್ಲೆಯ ರೈತರು ಹೊರ ರಾಜ್ಯ, ಹೊರ ದೇಶಗಳಿಗೆ ಹಣ್ಣು ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಪ್ಯಾಕಿಂಗ್‌ ಸಾಮಗ್ರಿಗಳು ಶೇ 50ರ ರಿಯಾಯಿತಿ ದರದಲ್ಲಿ ಸಿಗಲಿವೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಹುಳು ಬಾಧೆ ಹಾಗೂ ನಿಫಾ ವೈರಸ್‌ ಭೀತಿಯಿಂದಾಗಿ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದರು. ಈ ವರ್ಷ ಮಾವು ಪುನಶ್ಚೇತನಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೋಹಕ ಬಲೆ, ಪ್ಲಾಸ್ಟಿಕ್‌ ಕ್ರೇಟ್‌ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ ಎಂದರು.

ಐ.ಟಿ. ಕಂಪನಿಗಳಲ್ಲಿ ಮಾರಾಟ: ಬೆಂಗಳೂರಿನ ಪ್ರಮುಖ ಐ.ಟಿ. ಕಂಪನಿಗಳು, ಮೆಟ್ರೊ ನಿಲ್ದಾಣ ಸಹಿತ ವಿವಿಧೆಡೆ ರೈತರು ಮಾವು ಮಾರಾಟ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು. ‘ಮ್ಯಾಂಗೊ ಪಿಕ್ಕಿಂಗ್‌’ ಯೋಜನೆಯ ಅಡಿ ಗ್ರಾಹಕರೇ ತೋಟದಲ್ಲಿ ಬಂದು ಹಣ್ಣು ಕೊಯ್ಯುವ ವ್ಯವಸ್ಥೆ ಇದ್ದು, ಈಗಾಗಲೇ ತೋಟಗಳನ್ನು ಗುರುತಿಸಲಾಗಿದೆ. ತಿಂಗಳಾಂತ್ಯ ಈ ಕಾರ್ಯಕ್ರಮ ನಡೆಸಲಾಗುವುದು. ನಿಗಮವು ವೆಬ್‌ಸೈಟ್‌ ಮೂಲಕ ರೈತರಿಂದ ಗ್ರಾಹಕರಿಗೆ ನೇರವಾಗಿ ಹಣ್ಣು ಮಾರಾಟಕ್ಕೂ ಅನುಕೂಲ ಕಲ್ಪಿಸಿದೆ. ಎನ್‌ಇಎಂಎಲ್‌ ಮೂಲಕ ದೊಡ್ಡ ಮಟ್ಟದ ವಹಿವಾಟಿಗೂ ಅವಕಾಶವಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ, ಪ್ರಗತಿಪರ ಮಾವು ಬೆಳೆಗಾರರು ಇದ್ದರು.

ಸಸ್ಯ ಸಂತೆ ಆಯೋಜನೆ

ಮೇಳ ನಡೆಯಲಿರುವ ಸ್ಥಳದಲ್ಲಿ ತೋಟಗಾರಿಕೆ ಇಲಾಖೆಯು ಸಸ್ಯ ಸಂತೆಯನ್ನೂ ಹಮ್ಮಿಕೊಂಡಿದೆ. ಮಾವು, ತೆಂಗು, ಸಪೋಟ, ಸೀಬೆ, ಪಪ್ಪಾಯ ಸಹಿತ 14 ಬಗೆಯ ಸಸ್ಯಗಳು ರಿಯಾಯಿತಿ ದರದಲ್ಲಿ ಮಾರಾಟ ಆಗಲಿವೆ. ಒಟ್ಟು 1.5 ಲಕ್ಷ ಸಸಿಗಳನ್ನು ಮಾರಾಟಕ್ಕೆ ಇಡಲಾಗುವುದು ಎಂದು ಮುಲ್ಲೈ ಮುಹಿಲನ್‌ ತಿಳಿಸಿದರು.

ಕಣ್ವ ಬಳಿ ಮಾವು ಸಂಸ್ಕರಣಾ ಘಟಕ ಆರಂಭಕ್ಕೆ ಸಿದ್ಧತೆ ನಡೆದಿದ್ದು, 3 ಕಂಪನಿಗಳು ಆಸಕ್ತಿ ತೋರಿವೆ. ಜಮೀನು ಹಸ್ತಾಂತರ ಮಾಡುವಂತೆ ಇಲಾಖೆಯ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಗುಣವಂತ ತಿಳಿಸಿದರು.

ಕಾರ್ಬೈಡ್‌: ಕ್ರಮದ ಎಚ್ಚರಿಕೆ

ಕಾರ್ಬೈಡ್‌ ಬಳಕೆಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿಷೇಧಿಸಿದೆ. ಅದನ್ನು ಬಳಸಿ ಹಣ್ಣನ್ನು ಕೃತಕವಾಗಿ ಮಾಗಿಸುವುದು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಹಿಲನ್‌ ಎಚ್ಚರಿಸಿದರು.

‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಮಾತನಾಡಿದ ಅವರು, ಕಾರ್ಬೈಡ್‌ ಬಳಕೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಈ ಕಾರಣಕ್ಕೆ ಸರ್ಕಾರ ಆ ರಾಸಾಯನಿಕ ಬಳಕೆಯನ್ನು ವರ್ಷಗಳ ಹಿಂದೆಯೇ ನಿಷೇಧಿಸಿದೆ. ಕೆಲ ವರ್ತಕರು ಲಾಭದ ಕಾರಣಕ್ಕೆ ಇದರ ಬಳಕೆ ಮಾಡುವುದು ಸರಿಯಲ್ಲ. ಅಂತಹವರು ಸಿಕ್ಕಿ ಬಿದ್ದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು