ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಕಲಿಕಾ ಆಂದೋಲನ

Published 22 ಡಿಸೆಂಬರ್ 2023, 7:34 IST
Last Updated 22 ಡಿಸೆಂಬರ್ 2023, 7:34 IST
ಅಕ್ಷರ ಗಾತ್ರ

ಚನ್ನಪಟ್ಟಣ: ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸಾಹ ಹೆಚ್ಚಳವಾಗಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿಯಾಗಲು ನೆರವಾಗುತ್ತದೆ ಎಂದು ಸಿಂಗರಾಜಿಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬೀರೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿಂಗರಾಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಿಂಗರಾಜಿಪುರ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ. ತರಗತಿಗಳಲ್ಲಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಬೋಧಿಸುವ ಕುರಿತು ಶಿಕ್ಷಕರಿಂದ ನಿರಂತರ ಪ್ರಯತ್ನಗಳು ನಡೆಯಬೇಕು. ಇಂತಹ ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜನವಾಗಲಿದೆ ಎಂದರು.

ನೋಡಲ್ ಅಧಿಕಾರಿ ಯೋಗೇಶ್ ಚಕ್ಕೆರೆ ಮಾತನಾಡಿ, ಮಕ್ಕಳಲ್ಲಿ ಗಣಿತದ ವಿಷಯದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಸರ್ಕಾರ, ಸ್ಥಳೀಯ ಆಡಳಿತ, ಸರ್ಕಾರೇತರ ಸಂಘ ಸಂಸ್ಥೆಗಳು ಜಂಟಿಯಾಗಿ ಗಣಿತ ಕಲಿಕಾ ಆಂದೋಲನ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಆ ಮೂಲಕ ವಿದ್ಯಾರ್ಥಿಗಳು ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯಲು ಪ್ರೇರೇಪಿಸಲಾಗುತ್ತಿದೆ ಎಂದರು.

ಸಿಂಗರಾಜಿಪುರ ಗ್ರಾ.ಪಂ. ಪಿಡಿಒ ರಾಮಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾ.ಪಂ. ಸದಸ್ಯರಾದ ಮಾಯಿಗಯ್ಯ, ನೀಲಮ್ಮ, ಶಿವಲಿಂಗಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣ, ಬೈರಶೆಟ್ಟಿಹಳ್ಳಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಚನ್ನಪ್ಪ, ಸಿಂಗರಾಜಿಪುರ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲ, ಬೈರಶೆಟ್ಟಿಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ, ಶಿಕ್ಷಕರಾದ ಸುಮಾ, ನಿಜಗುಣಸ್ವಾಮಿ, ಮಾನಸ, ರೇಣುಕಾನಂದ, ಗ್ರಾಮಸ್ಥರಾದ ಮರಿಸ್ವಾಮಿ, ರವಿ, ರಾಜು, ಲತಾ, ಅನುಸೂಯ, ಅಪ್ಪಾಜಿ, ಇತರರು ಭಾಗವಹಿಸಿದ್ದರು.

ಗ್ರಾ.ಪಂ. ವ್ಯಾಪ್ತಿಯ ಸಿಂಗರಾಜಿಪುರ, ಹನಿಯೂರು, ಬೈರಶೆಟ್ಟಹಳ್ಳಿ, ಕೊಡಿಹೊಸಹಳ್ಳಿ, ರಾಮೇಗೌಡನದೊಡ್ಡಿ ಶಾಲೆಗಳ ಮಕ್ಕಳು ಗಣಿತ ಪರೀಕ್ಷಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ₹ 1 ಸಾವಿರ (ಪ್ರಥಮ), ₹ 600 (ದ್ವಿತೀಯ) ಮತ್ತು ₹ 500 (ತೃತೀಯ) ನಗದು ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT