ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಎಂಯಿಂದ ವೈದ್ಯಕೀಯ ಸಾಮಗ್ರಿ: ಅಶ್ವತ್ಥನಾರಾಯಣ ಮಾತುಕತೆ

Last Updated 2 ಮೇ 2021, 5:07 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ರಾಜ್ಯ ಸರ್ಕಾರಕ್ಕೆ ₹ 1 ಕೋಟಿ ಮೌಲ್ಯದ ವೈದ್ಯಕೀಯ ಸಾಮಗ್ರಿಯನ್ನು ನೀಡಲಿದೆ.

ಈ ಕುರಿತು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ವರ್ಚುಯಲ್‌ ಸಭೆ ಮೂಲಕ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಜತೆ ಶುಕ್ರವಾರ ಸಂಜೆ ಸಭೆ ನಡೆಸಿದರು. ರಾಮನಗರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯವಾದ ನೆರವನ್ನು ಕಂಪನಿ ವತಿಯಿಂದ ನೀಡುವಂತೆ ಕೋರಿದರು.

ಇದಕ್ಕೆ ಸ್ಪಂದಿಸಿದ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್, ವೈದ್ಯಕೀಯ ಸಾಮಗ್ರಿ ನೆರವು ನೀಡುವುದಾಗಿ ಒಪ್ಪಿದರು. ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ, ‘ಕೋವಿಡ್ ನಿರ್ವಹಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಟೊಯೊಟಾ ಕಿರ್ಲೋಸ್ಕರ್ ಕಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಅವರ ನೆರವು ಕೇಳಿದ್ದೇವೆ’ ಎಂದರು.

ಮಾಗಡಿ ಮತ್ತು ಕನಕಪುರದಲ್ಲಿ ಆರ್‌ಟಿಪಿಸಿಆರ್ ಪರೀಕ್ಷಾ ಘಟಕಗಳ ಸ್ಥಾಪನೆ, ರಾಮನಗರ ಜಿಲ್ಲೆಗೆ 50 ವೆಂಟಿಲೇಟರ್‌ಗಳು ಮತ್ತು 50 ಪ್ಯಾರಾ ಮಲ್ಟಿ ಮಾನಿಟರ್‌ಗಳು, ಆಕ್ಸಿಜನ್ ಜನರೇಟರ್‌ಗಳು, 200 ಆಕ್ಸಿಜನ್ ಬೆಡ್‌ಗಳು ಬೇಕೆಂದು ನಾವು ಮನವಿ ಮಾಡಿದ್ದೇವೆ. ಈ ಎಲ್ಲ ಬೇಡಿಕೆಗಳಿಗೆ ಕಂಪನಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.

ಬೆಂಗಳೂರಿನ ಎಂ.ಎಸ್. ರಾಮಯ್ಯ, ಮೈಸೂರು ರಸ್ತೆಯ ರಾಜರಾಜೇಶ್ವರಿ ಮತ್ತು ಕನಕಪುರದ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಿಗೆ ತುರ್ತಾಗಿ ಆಕ್ಸಿಜನ್ ಬೆಡ್‌ಗಳ ಅಗತ್ಯವಿದೆ. ಈ ಆಸ್ಪತ್ರೆಗಳಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಇದ್ದು, ಇಂಥ ಹಾಸಿಗೆಗಳ ಮೇಲೆ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರಿಗೇ ಇಂಥ ಕಡೆ ಉತ್ತಮ ಚಿಕಿತ್ಸೆ ಕೊಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.

ಟಿಕೆಎಂ ಅಧಿಕಾರಿ ಸಂದೀಪ್ ಶಾಂತಾರಾಮ ದಲ್ವಿ, ಬಿಡದಿ ಕೈಗಾರಿಕಾ ಸಂಘದ ರಾಜೇಂದ್ರ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT