ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಕಂಡ ಮೀಮ್ಸ್‌

ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್‌ನಾರಾಯಣ ವಿರುದ್ಧ ಮುಗಿಬಿದ್ದ ವಿರೋಧಿಗಳು
Last Updated 24 ಏಪ್ರಿಲ್ 2020, 15:14 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳ ಸ್ಥಳಾಂತರ ವಿಷಯವು ನಗೆಪಾಟಲಿಗೆ ಈಡಾಗಿದ್ದು, ರಾಜ್ಯ ಸರ್ಕಾರಕ್ಕೆ ಮುಜುಗರ ಆದಂತೆ ಆಗಿದೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ವರ್ಚಸ್ಸಿಗೆ ಪೆಟ್ಟು ಬಿದ್ದಿದೆ.

ರಾಮನಗರ ಕಾರಾಗೃಹಕ್ಕೆ ಪಾದರಾಯನಪುರ ಆರೋಪಿಗಳ ಸ್ಥಳಾಂತರದ ಸುದ್ದಿ ಹೊರಬೀಳುತ್ತಲೇ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿನ ವಿರೋಧ ಪಕ್ಷಗಳ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‍ ಇದನ್ನು ಖಂಡಿಸಿದ್ದು, ಮುಂದಿನ ಅನಾಹುತಕ್ಕೆ ಸರ್ಕಾರ ಹಾಗೂ ಅಧಿಕಾರಿಗಳನ್ನೇ ಹೊಣೆ ಯಯಾಗಿಸುವುದಾಗಿ ಎಚ್ಚರಿಸಿದರು. ಆದಾಗ್ಯೂ ಸರ್ಕಾರ ಎಚ್ಚರಿಕೆ ನಡೆ ಇಡದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ರಾಮನಗರಕ್ಕೆ ಕೊರಾನಾ ಸೋಂಕಿನ ಕಳಂಕ ಅಂಟಿಕೊಂಡಿದೆ.

ಕಾರ್ಯಕ್ರಮಗಳು ರದ್ದು: ಜೈಲಿನ ಸಂಗತಿ ವಿವಾದದ ರೂಪ ಪಡೆದಿರುವುದು ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೂ ಇರಿಸು-ಮುರಿಸಿನ ಸಂಗತಿಯಾಗಿದೆ. ಇದೇ ಕಾರಣಕ್ಕೆ ಶುಕ್ರವಾರ ನಡೆಯಬೇಕಿದ್ದ ಪಕ್ಷದ ಕಾರ್ಯಕ್ರಮವೊಂದು ರದ್ದಾಗಿದೆ. ಪಕ್ಷದ ಕಾರ್ಯಕರ್ತರೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಜಾಲತಾಣಗಳಲ್ಲಿ ಟ್ರೋಲ್‌: ಜೈಲಿನ ಕೈದಿಗಳಲ್ಲಿ ಸೋಂಕು ಹರಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರೋಧಿಗಳಿಗೆ ಅಸ್ತ್ರವಾಗಿದೆ. ಇದನ್ನೇ ಬಳಸಿಕೊಂಡು ಜಾಲತಾಣ ಬಳಕೆದಾರರು ಸರ್ಕಾರ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ’ರಾಮನಗರಕ್ಕೆ ಸೋಂಕು ಹರಡಿಸಿದ ಕೀರ್ತಿ ಬಿಜೆಪಿ ಸರ್ಕಾರದ್ದು’ ಎಂದೆಲ್ಲ ಟ್ರೋಲ್ ಮಾಡಲಾಗುತ್ತಿದೆ.

ಏನಂತಾರೆ ಡಿಕೆಶಿ: ಪ್ರಕರಣ ಕುರಿತು ಸಚಿವ ಡಿ.ಕೆ. ಶಿವಕುಮಾರ್‍ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ’ನಮ್ಮ ಮೇಲೆ, ನಮ್ಮ ಜನರ ಮೇಲೆ ಸಿಟ್ಟು ಇದ್ದರೆ ಅದನ್ನು ಬೇರೆ ರೀತಿಯಲ್ಲಿ ತೀರಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಬೆಂಗಳೂರಿನಲ್ಲಿನ ಕೊರೊನಾ ಸೋಂಕಿತರನ್ನು ರಾಮನಗರಕ್ಕೆ ಕರೆ ತಂದು ಇಲ್ಲಿನ ಜನರ ನೆಮ್ಮದಿ ಕೆಡಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಮುಂದೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಂಸದ ಡಿ.ಕೆ. ಸುರೇಶ್ ಇದಕ್ಕೆ ಧ್ವನಿಗೂಡಿಸಿದ್ದು, ’ಕರೆದುಕೊಂಡು ಬರುವ ಮುನ್ನವೇ ಅವರಿಗೆ ಕೊರೊನಾ ಪರೀಕ್ಷೆ ನಡೆಸಿ ಸೋಂಕು ಇಲ್ಲ ಎಂದು ಧೃಡಪಟ್ಟ ನಂತರವಷ್ಟೇ ಕರೆತರಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸ್ವತಃ ವೈದ್ಯರು. ಅಂತಹವರು ಆರೋಪಿಗಳನ್ನು ಏಕಾಏಕಿ ಇಲ್ಲಿಗೆ ಕಳುಹಿಸಿದ್ದು ಏಕೆ’ ಎಂದು ಪ್ರಶ್ನಿಸಿದ್ದಾರೆ.

’ರಾಮನಗರ ಜಿಲ್ಲೆ ಹಸಿರು ವಲಯದಲ್ಲಿ ಇದ್ದದ್ದಕ್ಕೆ ನಾವೆಲ್ಲ ಹೆಮ್ಮೆ ಪಡುತ್ತಿದ್ದೆವು. ಆದರೆ ಸರ್ಕಾರದ ದುಡುಕಿನ ನಿರ್ಧಾರದಿಂದ ಎಲ್ಲರಿಗೂ ತೊಂದರೆ ಆಗಿದೆ. ಗೃಹ ಸಚಿವರು ನಮಗೆ ಸಹಾಯ ಮಾಡಲಿಲ್ಲ’ ಎಂದು ಅವರು ಬೇಸರಿಸುತ್ತಾರೆ.

ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಸರ್ಕಾರದ ನಡೆಯನ್ನು ಖಂಡಿಸಿದ್ದು, ಇದೇ ಧೋರಣೆ ಮುಂದುವರಿದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

**
ಪಾದರಾಯನಪುರ ಆರೋಪಿಗಳ ಸ್ಥಳಾಂತರದ ಹಿಂದೆ ಸರ್ಕಾರದ ವ್ಯವಸ್ಥಿತ ಪಿತೂರಿ ಇದೆ. ರಾಮನಗರದ ಈ ಕಳಂಕಕ್ಕೆ ಇಲ್ಲಿನ ಸಚಿವರೇ ಕಾರಣ
-ಡಿ.ಕೆ.ಸುರೇಶ್, ಸಂಸದ

**
ಬಿಜೆಪಿಯವರಿಗೆ ರಾಮನಗರದ ಮೇಲೆ ಸಿಟ್ಟು ಇದ್ದರೆ ಬೇರೆ ರೀತಿ ತೀರಿಸಿಕೊಳ್ಳಬಹುದಿತ್ತು. ಕೊರೊನಾ ಸೋಂಕಿತರನ್ನು ಇಲ್ಲಿ ತಂದುಬಿಟ್ಟಿದ್ದು ಸರಿಯಲ್ಲ.
-ಡಿ.ಕೆ.ಶಿವಕುಮಾರ್, ಶಾಸಕ

**
ಜಿಲ್ಲಾ ಉಸ್ತುವಾರಿ ಸಚಿವರು ಹುಡುಗಾಟಿಕೆಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ತಪ್ಪು ಸರಿಪಡಿಸಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
-ಎಚ್‌.ಡಿ.ಕುಮಾರಸ್ವಾಮಿ, ಶಾಸಕ

*
ರಾಮನಗರ ಕಾರಾಗೃಹ ಚಿಕ್ಕದು ಎಂಬ ಕಾರಣಕ್ಕೆ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ವಹಿಸಲಾಗಿತ್ತು.
-ಡಾ.ಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT