ಶುಕ್ರವಾರ, ಆಗಸ್ಟ್ 12, 2022
26 °C
ರಾಮನಗರ ಮಾರುಕಟ್ಟೆಗೆ ಭೇಟಿ; ಅಧಿಕಾರಿಗಳೊಂದಿಗೆ ಚರ್ಚೆ

ರೇಷ್ಮೆ ಬೆಳೆಗಾರರ ಸಮಸ್ಯೆ ಆಲಿಸಿದ ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್‌. ಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಹಿಪ್ಪುನೇರಳೆಗೆ ನುಸಿಪೀಡೆ ಜಾಸ್ತಿಯಾಗಿದ್ದು, ಅದಕ್ಕೆ ಹಾಕುವ ಔಷಧವೂ ದುಬಾರಿಯಾಗಿದೆ. ಹೀಗಾಗಿ ದರ ಕಡಿಮೆ ಮಾಡಿಸಿ. ರೇಷ್ಮೆಹುಳು ಮನೆ ನಿರ್ಮಿಸಿ ಎರಡು ವರ್ಷವಾದರೂ ಸರ್ಕಾರದಿಂದ ಅನುದಾನ ಬಂದಿಲ್ಲ, ಈಗಲಾದರೂ ಕೊಡಿಸಿ’ ಹೀಗೆಂದು ರೈತರು ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್‌. ಶಂಕರ್ ಎದುರು ಅಲವತ್ತುಕೊಂಡರು.

ಶುಕ್ರವಾರ ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ ಸಚಿವರು, ಮಾರುಕಟ್ಟೆಯಲ್ಲಿದ್ದ ಬೆರಳೆಣಿಕೆಯ ರೈತರ ಸಮಸ್ಯೆ ಆಲಿಸಿದರು.

ಹೆಚ್ಚಿನ ರೈತರು ಸರ್ಕಾರದಿಂದ ತಮಗೆ ವಿವಿಧ ಯೋಜನೆಗಳ ಅಡಿ ಬರಬೇಕಾದ ಬಾಕಿ ಅನುದಾನದ ಕುರಿತು ಗಮನ ಸೆಳೆದರು.

‘ರೇಷ್ಮೆಸೊಪ್ಪಿಗೆ ನುಸಿರೋಗ ಹೆಚ್ಚಾಗುತ್ತಿದ್ದು, ಈ ಹಿಂದೆ ಬಳಕೆಯಲ್ಲಿದ್ದ ಔಷಧಗಳು ದುಬಾರಿ ಆಗಿವೆ. ಹೀಗಾಗಿ ಸರ್ಕಾರ ದರ ನಿಯಂತ್ರಣದ ಕುರಿತು ಗಮನ ಹರಿಸಬೇಕು’ ಎಂದು ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಸದಸ್ಯರು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಪರಿಶೀಲಿಸಿ ದರ ಇಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರೀಲರ್‌ಗಳ ಸಂಘದ ಸದಸ್ಯರೂ ಸಚಿವರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದರು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಶಂಕರ್ ‘ರಾಮನಗರ ಮಾರುಕಟ್ಟೆಯಲ್ಲಿ ನಡೆದ ₹2 ಕೋಟಿ ದುರ್ಬಳಕೆ ಸಂಬಂಧ ಮಾರುಕಟ್ಟೆ ಉಪನಿರ್ದೇಶಕ ಮುನ್ಶಿಬಸಯ್ಯ ಹಾಗೂ ಜಂಟಿ ನಿರ್ದೇಶಕ ಕುಮಾರ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ರೈತರಿಗೆ ತಲುಪಬೇಕಾದ ಹಣವನ್ನು ಅವರ ಖಾತೆಗಳಿಗೆ ಸಂದಾಯ ಮಾಡಲಾಗಿದೆ’ ಎಂದರು.

ಮಾರುಕಟ್ಟೆ ಉಪನಿರ್ದೇಶಕ ವೆಂಕಟೇಶ್‌, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್, ಕಾರ್ಯದರ್ಶಿ ರವಿ, ಹುಲುವಾಡಿ ದೇವರಾಜು, ನರೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು