ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆರೋಗ್ಯ ಕಾಳಜಿಗೆ ಒತ್ತು ನೀಡಿ: ಇಕ್ಬಾಲ್ ಹುಸೇನ್

ಜಿಲ್ಲಾಸ್ಪತ್ರೆಯಲ್ಲಿ ಮಿಷನ್ ಇಂಧ್ರಧನುಷ್ ಅಭಿಯಾನಕ್ಕೆ ಶಾಸಕ ಚಾಲನೆ
Published 7 ಆಗಸ್ಟ್ 2023, 13:41 IST
Last Updated 7 ಆಗಸ್ಟ್ 2023, 13:41 IST
ಅಕ್ಷರ ಗಾತ್ರ

ರಾಮನಗರ: ‘ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ. ಎಲ್ಲಾ ಇದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ, ಇರುವುದೆಲ್ಲವೂ ವ್ಯರ್ಥವಾಗಲಿದೆ. ಆ ನಿಟ್ಟಿನಲ್ಲಿ ತಾಯಂದಿರು ತಮ್ಮ ಮಕ್ಕಳ ಆರೋಗ್ಯ ಕಾಳಜಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಲಹೆ ನೀಡಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪರಿಣಾಮಕಾರಿ ಮಿಷನ್ ಇಂಧ್ರಧನುಷ್ ಅಭಿಯಾನ 5.0 ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಆರೋಗ್ಯ ಅತ್ಯಂತ ಸೂಕ್ಷ್ಮವಾದುದು. ಅವರ ಕಾಳಜಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ, ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಪೊಲಿಯೊ, ಇಂಧ್ರಧನುಷ್ ಸೇರಿದಂತೆ ವಯಸ್ಸಿಗೆ ಅನುಗುಣವಾಗಿ ವಿವಿಧ ರೀತಿಯ ಲಸಿಕೆಗಳನ್ನು ಉಚಿತವಾಗಿ ನೀಡುವ ಅಭಿಯಾನ ನಡೆಸುತ್ತಿದೆ. ಅದರ ಪ್ರಯೋಜನವನ್ನು ತಾಯಂದಿರು ಪಡೆಯಬೇಕು’ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಪದ್ಮ ಬಿ.ಎಲ್. ಮಾತನಾಡಿ, ‘ಕ್ಷೇತ್ರ ಭೇಟಿ ಸಂದರ್ಭದಲ್ಲಿ ಇಂಧ್ರಧನುಷ್ ಲಸಿಕೆ ಕುರಿತು ಕೆಲವರಿಗೆ ತಪ್ಪು ಕಲ್ಪನೆಗಳಿರುವುದು ಕಂಡುಬಂದಿದೆ.‌ ಲಸಿಕೆ ಕೊಡಿಸಲು ನಿರಾಕರಿಸಿರುವ ಪ್ರಕರಣಗಳು ಸಹ ವರದಿಯಾಗಿವೆ. ಹಾಗಾಗಿ, ದೇವಸ್ಥಾನ ಮತ್ತು ಮಸೀದಿಗಳ ಮೈಕ್‌ಗಳಲ್ಲಿ ಲಸಿಕೆ ಕುರಿತು ಜಾಗೃತಿ ಸಂದೇಶ ಸಾರಬೇಕು. ಲಸಿಕೆ ಪಡೆದವರು ತಮ್ಮ ನೆರೆಯವರಿಗೆ ತಿಳಿಸಸಬೇಕು’ ಎಂದು ಮನವಿ ಮಾಡಿದರು.

‘ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ಉಚಿತವಾಗಿ ಜಿಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರಗಳು, ಅಂಗನವಾಡಿಗಳಲ್ಲಿ ಲಸಿಕೆ ನೀಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಾಕಿಸಿಕೊಂಡರೆ, ಎರಡ್ಮೂರು ಸಾವಿರ ಶುಲ್ಕ ಪಡೆಯುತ್ತಾರೆ. ಹಾಗಾಗಿ, ಮಕ್ಕಳಿಗೆ ನಿಗದಿತ ವಯಸ್ಸಿನಲ್ಲಿ ಕೊಡುವ ಲಸಿಕೆಗಳನ್ನು ತಪ್ಪದೆ ಪಡೆಯಬೇಕು. ಇಲ್ಲದಿದ್ದರೆ, ಮುಂದೆ ಅವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

ರೋಗಿಗಳ ಭೇಟಿ: ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿದ್ದ ರೋಗಿಗಳನ್ನು ಮಾತನಾಡಿಸಿದ ಶಾಸಕ ಹುಸೇನ್, ಆಸ್ಪತ್ರೆ ಸೌಲಭ್ಯಗಳ ಕುರಿತು ವಿಚಾರಿಸಿದರು. ಹೊರಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಅವರು, ಗುಣಮಟ್ಟದ ವಿಷಯದಲ್ಲಿ ರಾಜಿಯಾಗದೆ ಕೆಲಸ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ನಗರಸಭೆ ಪ್ರಭಾರ ಅಧ್ಯಕ್ಷ ಸಿ. ಸೋಮಶೇಖರ್, ಜಿಲ್ಲಾ ಆರ್‌ಸಿಎಚ್ ರಾಜು ವಿ, ತಾಲ್ಲೂಕು ಆರೋಗ್ಯಾಧಿಕಾರಿ ಶಶಿಕಲಾ, ಡಿಎಲ್‌ಓ ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್, ಡಿಟಿಒ ಡಾ. ಕುಮಾರ್ ಹಾಗೂ ವಿನಯ್ ಕುಮಾರ್ ಇದ್ದರು.

‘ಸಿಬ್ಬಂದಿ ಕೊರತೆ ನೀಗಿಲು ಒತ್ತು’
‘ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದರೂ ಇರುವವರನ್ನು ಬಳಸಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಲಾಗುತ್ತಿದೆ. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ರೋಗಿಗಳು ಇಲ್ಲಿಗೆ ಬರುವುದರಿಂದ ಹಿಂದಿಗಿಂತ ದಟ್ಟಣೆ ಹೆಚ್ಚಾಗಿದೆ. ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿ ಕುರಿತು ಸಂಬಂಧಪಟ್ಟ ನಮ್ಮ ಸಂಸದರು ಉಪ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಕೊರತೆ ನೀಗಿಸಲಾಗುವುದು’ ಎಂದು ಇಕ್ಬಾಲ್ ಹುಸೇನ್ ಭರವಸೆ ನೀಡಿದರು. ‘ಮೂರ್ನಾಲ್ಕು ತಿಂಗಳೊಳಗೆ ಪರಿಹಾರ’ ‘ನಗರದಲ್ಲಿ ಕುಡಿಯುವ ನೀರು ರಸ್ತೆ ಅವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮೂರ್ನಾಲ್ಕು ತಿಂಗಳೊಳಗೆ ಪರಿಹಾರ ಸಿಗಲಿದೆ. ನಿರಂತರ ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ರಸ್ತೆಗಳನ್ನು ಅಗೆಯಲಾಗಿದ್ದು ಜನರಿಗೆ ತೊಂದರೆಯಾಗಿದೆ. ಕಾಮಗಾರಿ ಮುಗಿದ ಬಳಿಕ ನೀರು ಮತ್ತು ರಸ್ತೆ ಸಮಸ್ಯೆ ಬಗೆಹರಿಯಲಿದೆ’ ಎಂದು ಶಾಸಕರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರ ಅಧೀನ ಕಾರ್ಯದರ್ಶಿಗೆ ಅಧಿಕಾರಿಗಳು ಪತ್ರ ಬರೆದಿರುವ ಕುರಿತು ನನಗೆ ಗೊತ್ತಿಲ್ಲ. ಹಿರಿಯ ರಾಜಕಾರಣಿಯಾಗಿರುವ ಅವರಿಗೆ ಆ ರೀತಿ ಹಣ ಮಾಡುವ ಅಗತ್ಯವೂ ಇಲ್ಲ. ಪತ್ರವನ್ನು ನಿಜಕ್ಕೂ ಬರೆದಿದ್ದಾರೊ ಅಥವಾ ಬರೆಸಿದ್ದಾರೊ’ ಎಂದು ಅನುಮಾನ ವ್ಯಕ್ತಪಡಿಸಿದರು.
ರಾಮನಗರದ ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಆಸ್ಪತ್ರೆಗೆ ಬಂದಿದ್ದ ರೋಗಿಗಳೊಂದಿಗೆ ಮಾತನಾಡಿದರು
ರಾಮನಗರದ ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಆಸ್ಪತ್ರೆಗೆ ಬಂದಿದ್ದ ರೋಗಿಗಳೊಂದಿಗೆ ಮಾತನಾಡಿದರು
ಸಮೀಕ್ಷೆ ನಡೆಸಿ ಲಸಿಕೆಯಿಂದ ವಂಚಿತರಾದವರನ್ನು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ ಸುಮಾರು 515 ಕೇಂದ್ರಗಳಲ್ಲಿ ಮೂರು ಸುತ್ತಿನಲ್ಲಿ ಲಸಿಕೆ ಹಾಕಲಾಗುವುದು
– ಕೆ.ಪಿ. ಕಾಂತರಾಜ್ ಜಿಲ್ಲಾ ಆರೋಗ್ಯಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT