ಶುಕ್ರವಾರ, ಜುಲೈ 30, 2021
21 °C
ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹ: ಅಭಿವೃದ್ಧಿ ಯೋಜನೆಗಳಿಗೂ ಬಳಕೆ

ನರೇಗಾ: ಮನೆಮನೆ ಸರ್ವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಜನರಿಗೆ ಅನುಕೂಲವಾಗಿಸುವ ಉದ್ದೇಶದಿಂದ ರಾಮನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಮೊಬೈಲ್ ಆ್ಯಪ್‌ ಆಧಾರಿತ ಮನೆ ಮನೆ ಸಮೀಕ್ಷೆ ಆರಂಭಗೊಂಡಿದೆ.

ನರೇಗಾ ಯೋಜನೆಯಡಿಯಲ್ಲಿರುವ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಕಾಮಗಾರಿಗಳ ಬೇಡಿಕೆಯ ಅವಶ್ಯಕತೆಗನುಗುಣವಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಉದ್ದೇಶದಿಂದ ಈ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.

‘ಗ್ರಾಮೀಣ ಭಾಗದ ಅರ್ಹ ಪ್ರತಿ ಕುಟುಂಬಗಳನ್ನು ಯೋಜನೆಯಡಿ ತೊಡಗಿಸಿಕೊಳ್ಳುವಂತೆ ಮಾಡಲು ಈ ಮೊಬೈಲ್ ಆ್ಯಪ್ ಅನ್ನು ರೂಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ಪ್ರತ್ಯೇಕವಾದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗಿರುತ್ತದೆ. ಇದನ್ನು ಬಳಸಿಕೊಂಡು ಪ್ರತಿ ಮನೆಯ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಸಮೀಕ್ಷೆ ನಡೆದಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಪ್ರತಿ ಮನೆ ಮುಂದೆ ಒಂದು ಕ್ಯೂಆರ್ ಕೋಡ್ ಹೊಂದಿರುವ ಸ್ಟಿಕ್ಕರ್ ಅನ್ನು ಅಂಟಿಸಲಾಗುವುದು’ ಎಂದು ಅವರು ವಿವರಿಸಿದರು.

‘ಗ್ರಾಮೀಣ ಕುಟುಂಬಗಳು ಹಾಗೂ ಗ್ರಾಮಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಸಮೀಕ್ಷೆಯನ್ನು ಗಣಕೀಕರಣ ಮಾಡುವುದರ ಮೂಲಕ ಪ್ರತಿ ಕುಟುಂಬದ ಅಗತ್ಯತೆಯ ಮಾಹಿತಿಯನ್ನು ಕ್ರೋಢೀಕರಿಸಿ ಅಭಿವದ್ಧಿಯ ಯೋಜನೆಗಳಿಗೆ ಒಳಪಡಿಸಲು ಯೋಜಿಸಲಾಗಿದೆ. ಸರ್ವೆ ಅರ್ಜಿಯು ಕುಟುಂಬದ ಮುಖ್ಯಸ್ಥರ ಹೆಸರು, ಉದ್ಯೋಗ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ದೂರವಾಣಿ ಸಂಖ್ಯೆ, ಯೋಜನೆಯಡಿ ಪ್ರತಿ ದಿನದ ದೊರೆಯುವ ಕೂಲಿ ಮೊತ್ತವಾದ 275 ಬಗ್ಗೆ ತಿಳುವಳಿಕೆ, ರೇಷನ್ ಕಾರ್ಡ್ ಬಗೆ, ಭೂಮಿಯ ಒಡೆತನದ ವಿವರ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳನ್ನು ಈ ಒಳಗೊಂಡಿರುತ್ತದೆ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುವವರು ಕನಿಷ್ಠ ದಿನವೊಂದಕ್ಕೆ 50 ಕುಟುಂಬಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ.

ಜಿಲ್ಲೆಯಲ್ಲಿ ನಡೆಸಲಾಗುವ ಈ ಸಮೀಕ್ಷೆಗಾಗಿ ಶಿಕ್ಷಣ ಫೌಂಡೇಷನ್ ಮತ್ತು ಯಲ್ಲೋ ಅಂಡ್ ರೆಡ್ ಫೌಂಡೇಷನ್ ಮೊಬೈಲ್ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿಕೊಟ್ಟಿದೆ.

ಕಾರ್ಯನಿರ್ವಹಣೆ ಹೇಗೆ?

‘ಸಮೀಕ್ಷೆ ನಡೆಸುವ ಸಿಬ್ಬಂದಿ ಪ್ರತಿ ಮನೆ ಭೇಟಿ ನೀಡಿ ಅರ್ಜಿಯಲ್ಲಿರುವ ಮಾಹಿತಿಗಳನ್ನು ಪಡೆದುಕೊಂಡು ಅದನ್ನು ಕ್ಯೂಆರ್ ಕೋಡ್ ರೂಪದಲ್ಲಿ ಪರಿವರ್ತಿಸಿ ಮನೆಯ ಮುಂದೆ ಅಂಟಿಸಿರುತ್ತಾರೆ. ಇದನ್ನು ಮೊಬೈಲ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿದಾಗ ಸಮೀಕ್ಷೆ ನಡೆಸಿರುವ ಮನೆಯವರ ಸಂಪೂರ್ಣ ಮಾಹಿತಿಗಳು ಲಭ್ಯವಾಗುತ್ತದೆ. ಅಲ್ಲದೆ, ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಂಡಿರುವುದು ಹಾಗೂ ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವ ಕಾಮಗಾರಿಗಳ ಮಾಹಿತಿಯನ್ನು ಸಹ ಇದರ ಮೂಲಕವೇ ಪಡೆಯಲು ಅನುಕೂಲಕರವಾಗುವಂತೆ ಇದನ್ನು ರೂಪಿಸಲಾಗಿದೆ’ ಎಂದು ಇಕ್ರಂ ತಿಳಿಸಿದರು.

ಅಂಕಿ–ಅಂಶ
-2.20 ಲಕ್ಷ–ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಕುಟುಂಬಗಳು
-1.90 ಲಕ್ಷ–ನರೇಗಾ ಯೋಜನೆ ಅಡಿ ನೋಂದಣಿ ಮಾಡಿಕೊಂಡಿರುವ ಕುಟುಂಬಗಳು

***

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಈ ಸಮೀಕ್ಷೆಗಾಗಿ ಜನರು ಮನೆಬಾಗಿಲಿಗೆ ಬರುವ ಸಮೀಕ್ಷೆದಾರರಿಗೆ ಕುಟುಂಬದ ಮಾಹಿತಿಗಳನ್ನು ನೀಡಬೇಕು

- ಇಕ್ರಂ, ಸಿಇಒ, ರಾಮನಗರ ಜಿ.ಪಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು