ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಮೋದಿ ಮುಖ: ಪಶು ಚಿಕಿತ್ಸಾಲಯ ವಾಹನ ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

Published 3 ಜನವರಿ 2024, 7:31 IST
Last Updated 3 ಜನವರಿ 2024, 7:31 IST
ಅಕ್ಷರ ಗಾತ್ರ

ರಾಮನಗರ: ಸಂಚಾರಿ ಪಶು ಚಿಕಿತ್ಸಾಲಯ ವಾಹನದ ಮೇಲಿನ ಪೋಸ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಕಾಣದಂತೆ ಅಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ನಗರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಬುಧವಾರ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ವಾಹನದ ಮುಂದೆ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಪಶುಪಾಲನೆ ಇಲಾಖೆ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ವಾಹನದ ಮೇಲೆ ಹತ್ತಿದ ಕೆಲವರು ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಬರಬೇಕು ಎಂದು ಪಟ್ಟು ಹಿಡಿದರು.

ಮಹಿಳಾ ಕಾರ್ಯಕರ್ತೆಯೊಬ್ಬರು ವಾಹನಕ್ಕೆ ಅಂಟಿಸಿದ್ದ ಪೋಸ್ಟರ್ ನಲ್ಲಿದ್ದ ಸಿದ್ದರಾಮಯ್ಯ ಭಾವಚಿತ್ರಕ್ಕೆ ಮಸಿ ಬಳಿದರು‌‌. ನಮ್ಮ ಪ್ರಧಾನಿ ಮುಖ ಕಾಣದಂತೆ ಮಾಡಿದರೆ, ನಾವು ನಿಮ್ಮ ಮುಖ್ಯಮಂತ್ರಿ ಮುಖ ಕಾಣದಂತೆ ಮಸಿ ಬಳಿಯುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.

ಹುಬ್ಬಳ್ಳಿಯಲ್ಲಿ ಕರಸೇವಕನನ್ನು ಹಳೆ ಪ್ರಕರಣದಲ್ಲಿ ಬಂಧಿಸಿರುವುದನ್ನು ಖಂಡಿಸಿ, ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ವೃತ್ತದ ಪಕ್ಕ ಹಾದು ಹೋಗುತ್ತಿದ್ದ ವಾಹನದ ಪೋಸ್ಟರ್ ನಲ್ಲಿ ಮೋದಿ ಮುಖ ಅಳಿಸಿರುವುದನ್ನು ಗಮನಿಸಿದ ಕೆಲವರು ವಾಹನದ ಹಿಂದೆ ಓಡಿ ಹೋದರು. ಅನತಿ ದೂರದ ಹೂ ಮಾರುಕಟ್ಟೆ ಬಳಿ ವಾಹನ ತಡೆದು ಪ್ರತಿಭಟಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ, ಮುಖಂಡರಾದ ಗೌತಮ್ ಗೌಡ ಹಾಗೂ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT