ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಏಕೆ?: ಡಿ.ಕೆ. ಶಿವಕುಮಾರ್

ಆಸ್ಪತ್ರೆಗೆ ಶೀಘ್ರ ಅಗತ್ಯ ಸೌಕರ್ಯ: ಸಚಿವ ಡಾ.ಕೆ. ಸುಧಾಕರ್
Last Updated 13 ಫೆಬ್ರುವರಿ 2023, 4:47 IST
ಅಕ್ಷರ ಗಾತ್ರ

ಕನಕಪುರ: ನಗರದ ಎಂ. ಜಿ ರಸ್ತೆಯಲ್ಲಿ ತಾಲ್ಲೂಕಿನ ಜನತೆಗಾಗಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ₹ 56 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭಾನುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಸಮಾಜ ಸುಧಾರಣೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಸರ್ಕಾರದ ಜತೆ ಜನರೂ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಸುಧಾಮೂರ್ತಿ ಅವರು ಭವ್ಯವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಅವರ ಸೇವಾ ಕಾರ್ಯಕ್ಕೆ ಅಭಾರಿಯಾಗಿದ್ದೇನೆ’ ಎಂದರು.

ಶಿಕ್ಷಣ ಮತ್ತು ಆರೋಗ್ಯದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದ್ದು, ಕಟ್ಟಡಗಳ ನಿರ್ಮಾಣದಿಂದ ಪೂರ್ಣ ಮಟ್ಟದಲ್ಲಿ ಪ್ರಗತಿ ಸಾಧಿಸದಂತೆ ಆಗದು. ಅದಕ್ಕೆ ಬೇಕಾದ ಎಲ್ಲ ಅಗತ್ಯ ಮೂಲ ಸೌಕರ್ಯಗಳು, ಸವಲತ್ತುಗಳು, ವೈದ್ಯರು, ಅಗತ್ಯ ಸಿಬ್ಬಂದಿಯನ್ನು ಒಂದು ತಿಂಗಳಿನೊಳಗೆ ನಿಯೋಜಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವೈದ್ಯರು ಮತ್ತು ಸಿಬ್ಬಂದಿ ತಂಡವು ಕಾಳಜಿ ಮತ್ತು ಪ್ರೀತಿಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಈ ಆಸ್ಪತ್ರೆಯ ಉದ್ದೇಶ ಈಡೇರುತ್ತದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ದೊರೆಯುತ್ತದೆ ಎಂದರು.

ಆರೋಗ್ಯ ಕ್ಷೇತ್ರ ಮೊದಲಿಗಿಂತ ಹೆಚ್ಚು ಸುಧಾರಿಸಿದೆ. ಸರ್ಕಾರವು ಎಲ್ಲ ಕ್ಷೇತ್ರಗಳಿಗಿಂತ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ಕೋವಿಡ್‌ ಬಂದ ಮೇಲೆ ಪ್ರತಿ ತಾಲ್ಲೂಕು ಕೇಂದ್ರಕ್ಕೆ ಆಕ್ಸಿಜನ್‌ ಬೆಡ್‌ ವ್ಯವಸ್ಥೆಯನ್ನು ನೀಡಲಾಗಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್‌ ಮಾತನಾಡಿ, ಇನ್ಪೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ ಅವರು ಕನಕಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿಕೊಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ ಎಂದರು.

ಖಾಸಗಿಯಾಗಿ ಇಂತಹ ಆಸ್ಪತ್ರೆ ನಿರ್ಮಿಸಿ ಕೊಟ್ಟಿರುವುದು ಇದೇ ಮೊದಲು. ಹೀಗಾಗಿ ಆಸ್ಪತ್ರೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಶೀಘ್ರವಾಗಿ ಕಲ್ಪಿಸಿ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಸದ ಡಿಕೆ ಸುರೇಶ್ ವಿಧಾನ ಪರಿಷತ್ ಸದಸ್ಯ ಎಸ್ ರವಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ತಹಸಿಲ್ದಾರ್, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ
ಈ ಹಿಂದೆ ರಾಮನಗರದಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆಯಲ್ಲಿ ಗಲಾಟೆ ಆಗಿತ್ತು. ಇಂಥದ್ದೇ ಘಟನೆ ಆಸ್ಪತ್ರೆ ಉದ್ಘಾಟನೆ ವೇಳೆ ಮರಳುಕಳಿಸಬಹುದು ಎಂಬ ಕಾರಣಕ್ಕೆ ಮುಂದಾಲೋಚನೆ ಕ್ರಮವಾಗಿ ರಾಮನಗರ ಜಿಲ್ಲಾ ಎಸ್‌.ಪಿ ಕಾರ್ತಿಕ್‌ ರೆಡ್ಡಿ ಅವರು ಹೆಚ್ಚಿನ ಭದ್ರತೆ ಒದಗಿಸಿದ್ದರು. ಆದರೆ, ಕಾರ್ಯಕ್ರಮಕ್ಕೆ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಗೈರಾಗಿದ್ದರು.

ಕನಕಪುರ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಏಕೆ?
‘ನಮ್ಮ ತಾಲ್ಲೂಕಿಗೆ ಮಂಜೂರು ಆಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ತಮ್ಮ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವ ಮೂಲಕ ನಮಗೆ ಅನ್ಯಾಯ ಮಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಡಾ.ಕೆ. ಸುಧಾಕರ್ ಅವರನ್ನು ಕೆಣಕಿದರು.

‘ಅವರ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು ಮಾಡಲು ನಮ್ಮದೇನೂ ತಕರಾರು ಇಲ್ಲ. ಆದರೆ ನಮ್ಮ ತಾಲ್ಲೂಕಿನ ಹೌಸಿಂಗ್ ಬೋರ್ಡ್‌ನಲ್ಲಿ 20 ಎಕರೆ ಜಾಗ ನಿಗದಿ ಮಾಡಿ ಪ್ರಾರಂಭಕ್ಕೆ ಸಿದ್ಧಗೊಂಡು, ಸರ್ಕಾರದ ಅನುಮೋದನೆ ಪಡೆದು ಹಣ ಬಿಡುಗಡೆ ಆಗಿದ್ದ ಮೆಡಿಕಲ್ ಕಾಲೇಜನ್ನು ಅಲ್ಲಿಗೆ ತೆಗೆದುಕೊಂಡು ಹೋಗಿದ್ದು ನೋವುಂಟು ಮಾಡಿದೆ. ಆದರೆ, ಅದೇ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮತ್ತೆ
ಅದೇ ಜಾಗದಲ್ಲಿ ಪ್ರಾರಂಭಿಸಿ ಸುಧಾಕರ್ ಅವರಿಂದಲೇ ನಾವು ನೆರವೇರಿಸುತ್ತೇವೆ’ ಎಂದು ಹೇಳುವ ಮೂಲಕ ಸುಧಾಕರ್‌ಗೆ ಟಾಂಗ್ ನೀಡಿದರು.

ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಸರ್ಕಾರ ಇನ್ನೂ 50 ದಿನ ಇರಲಿದೆ. ಈಗ ನಿಮ್ಮ ಕೈಯಲ್ಲಿ ಅಧಿಕಾರವಿದೆ. ಮುಖ್ಯಮಂತ್ರಿಗಳು ನಿಮ್ಮ ಮಾತನ್ನು ಚೆನ್ನಾಗಿ ಕೇಳುತ್ತಾರೆ. ಹೀಗಾಗಿ ಸುಧಾಕರ್ ಕನಕಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

‘ಇಡೀ ರಾಜ್ಯದ ಅಭಿವೃದ್ಧಿ ನನ್ನ ಗುರಿ’
‘ನಾನು ಕನಕಪುರದಲ್ಲಿ ಆಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿಲ್ಲ. ಇಡೀ ರಾಜ್ಯವೇ ಅಭಿವೃದ್ಧಿ ಆಗಬೇಕು ಎಂದು ಬಯಸುವವನು ನಾನು. ಆದರೆ, 2016ರಲ್ಲಿ ಸಚಿವರಾಗಿದ್ದ ಡಿ.ಕೆ. ಶಿವ ಕುಮಾರ್ ಅವರೇ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು’ ಎಂದರು.

ಜಿಲ್ಲಾ ಕೇಂದ್ರಕ್ಕೆ ಒಂದು ಸರ್ಕಾರಿ ಮೆಡಿಕಲ್‌ ಕಾಲೇಜು ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇಲ್ಲ. ಕನಕಪುರದಲ್ಲಿ ದಯಾನಂದ ಸಾಗರ್‌ ಖಾಸಗಿ ವೈದ್ಯಕೀಯ ಕಾಲೇಜು ಇದೆ. ಆದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಿದ್ದೇವೆ ಎಂದರು. ಶಿವಕುಮಾರ್‌, ಸುರೇಶ್‌ ಕೋರಿಕೆಯಂತೆ ಮುಂದಿನ ದಿನಗಳಲ್ಲಿ ಇಲ್ಲಿಯೂ ಸರ್ಕಾರಿ ಮೆಡಿಕಲ್‌ ಕಾಲೇಜು ಬರಲಿ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT