ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಕ್ಷೇತ್ರ ಅಭಿವೃದ್ಧಿ ಮಾಡದ ಸಂಸದ ಡಿ.ಕೆ. ಸುರೇಶ್: ಆರೋಪ

Published 8 ಫೆಬ್ರುವರಿ 2024, 16:23 IST
Last Updated 8 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಮೂರು ಸಲ ಪ್ರತಿನಿಧಿಸಿರುವ ಸಂಸದ ಡಿ.ಕೆ. ಸುರೇಶ್ ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಯಾವುದೇ ಕೊಡುಗೆ ನೀಡಿಲ್ಲ’ ಎಂದು ಬಿಎಸ್‌ಪಿ ಟಿಕೆಟ್ ಆಕಾಂಕ್ಷಿ ಡಾ. ಚಿನ್ನಪ್ಪ ವೈ. ಚಿಕ್ಕಹಾಗಡೆ ಆರೋಪಿಸಿದರು.

‘ಸುರೇಶ್ ಅವರಿಗೆ ನಿಜವಾಗಿಯೂ ಕ್ಷೇತ್ರದ ಬಗ್ಗೆ ಕಳಕಳಿ ಇದ್ದಿದ್ದರೆ, ಕೇಂದ್ರದ ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿತ್ತು. ಅದ್ಯಾವುದನ್ನೂ ಮಾಡದೆ, ಚುನಾವಣೆ ಹತ್ತಿರ ಬಂದಾಗ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆಗಳನ್ನು ಮಾಡುತ್ತಿದ್ದಾರೆ’ ಎಂದು ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜಕೀಯವಾಗಿ ಪ್ರಬಲವಾಗಿರುವ ಸುರೇಶ್ ಅವರಿಗೆ ಅಭಿವೃದ್ಧಿ ಕೆಲಸಗಳು ಬೇಕಿಲ್ಲ. ಚುನಾವಣೆ ಬಂದಾಗ ಜನರನ್ನು ನೆನಪಿಸಿಕೊಳ್ಳುತ್ತಾರಷ್ಟೆ. ಅವರು ಸಂಸದರಾಗಿರುವುದು ತಾವು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ರಕ್ಷಿಸಿಕೊಳ್ಳಲು ಮಾತ್ರ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪರ್ಯಾಯವಾಗಿ, ರಾಜ್ಯದಲ್ಲಿ ಬಿಎಸ್‌ಪಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಸಂವಿಧಾನದ ಆಶಯಗಳ ಜಾರಿಯ ಉದ್ದೇಶ ಹೊಂದಿರುವ ಪಕ್ಷವನ್ನು ಮತದಾರರು ಬೆಂಬಲಿಸಬೇಕು. ಸಮಬಾಳು–ಸಮಪಾಲು ಹಾಗೂ ಸಾಮಾಜಿಕ ನ್ಯಾಯದ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ವಲಯ ಉಸ್ತುವಾರಿ ಎಂ. ನಾಗೇಶ್ ಮಾತನಾಡಿ, ‘ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿವೆ. ಇವರಿಂದ ಸೌಹಾರ್ದ ಮತ್ತು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಜನ ಇಂತಹವರನ್ನು ದೂರವಿಟ್ಟು ಪರ್ಯಾಯ ರಾಜಕೀಯಕ್ಕೆ ಶಕ್ತಿ ತುಂಬಬೇಕಿದೆ’ ಎಂದರು.

‘ಸುರೇಶ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆಯನ್ನು ತಂದಿಲ್ಲ. ನರೇಗಾದಡಿ ತಮ್ಮ ಹಿಂಬಾಲಕರಿಗೆ ಕೆಲಸ‌ ಕೊಡಿಸಿ ಬೋಗಸ್ ಕೆಲಸ ಮಾಡಿಸುತ್ತಿದ್ದಾರೆ. ಬಡವರಿಗೆ ಮನೆ ಹಂಚಿಕೆ, ಭೂಮಿ ಹಂಚಿಕೆ ಸೇರಿದಂತೆ ಯಾವುದನ್ನು ಸಹ ಮಾಡಿಲ್ಲ. ಜೆಡಿಎಸ್ ಈಗಾಗಲೇ ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ವಂಚಿಸಿದೆ. ಇದೀಗ, ಕೋಮು ಸೌಹಾರ್ದ ಕದಡುವ ಬಿಜೆಪಿ ಜೊತೆ ಮತ್ತೆ ಕೈ ಜೋಡಿಸಿದೆ’ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ಕೃಷ್ಣಪ್ಪ, ಮುನಿಯಲ್ಲಪ್ಪ, ಅಬ್ದುಲ್ ರಹೀಂ, ಗೌರಿಶಂಕರ್, ಬೈರಪ್ಪ, ಮುರುಗೇಶ್, ಕಿರಣ್, ಕೃಷ್ಣಮೂರ್ತಿ, ಕುಮಾರ್ ಆಚಾರ್, ಪುಟ್ಟಸ್ವಾಮಿ, ಪರಮೇಶ್ ಇದ್ದರು.

ಚುನಾವಣೆ ಬಂದಾಗಷ್ಟೇ ನೆನಪಾಗುವ ಮತದಾರರು ಕ್ಷೇತ್ರಕ್ಕೆ ಶಾಶ್ವತ ಯೋಜನೆ ತರದ ಸಂಸದ ಸುರೇಶ್ ಪರ್ಯಾಯ ರಾಜಕೀಯಕ್ಕೆ ಜನ ಶಕ್ತಿ ತುಂಬಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT