ಚನ್ನಪಟ್ಟಣ: ಚನ್ನಪಟ್ಟಣ-ಹಲಗೂರುಮುಖ್ಯರಸ್ತೆಯ ವಿಸ್ತರಣೆಗೆ ಅಡ್ಡಿಯಾದ ನಗರದ ಮುಸ್ಲಿಂ ಸಮುದಾಯದ ಸ್ಮಶಾನದ ಕೆಲವು ಭಾಗ ತೆರವು ಮಾಡಲು ಮುಸ್ಲಿಂ ಧರ್ಮಗುರುಗಳು ಸಮ್ಮತಿಸಿದ್ದು, ರಸ್ತೆ ಅಗಲೀಕರಣಕ್ಕೆ ಇದ್ದ ಸಮಸ್ಯೆ ಪರಿಹಾರವಾದಂತಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ನಗರದ ಮುಸ್ಲಿಂ ಮುಖಂಡರೊಬ್ಬರ ನಿವಾಸದಲ್ಲಿಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಮುಸ್ಲಿಂ ಸಮುದಾಯದ ಧರ್ಮಗುರುಗಳು, ಮುಖಂಡರ ಸಭೆ ನಡೆಯಿತು.
ಈ ವೇಳೆ ರಸ್ತೆ ಹಾದುಹೋಗುವ ಸ್ಮಶಾನದ ಜಾಗದಲ್ಲಿರುವ ಕೆಲ ಸಮಾಧಿಗಳನ್ನು ತೆರವು ಮಾಡುವುದಾಗಿ ಧರ್ಮಗುರುಗಳು ಹಾಗೂ ಮುಖಂಡರು ಹೇಳಿದ್ದಾರೆ.
ಈ ರಸ್ತೆ ಹಾದುಹೋಗುವ ಒಂದು ಭಾಗದಲ್ಲಿ ಮುಸ್ಲಿಂ ಸಮುದಾಯದ ಸ್ಮಶಾನ ಇದ್ದು, ಇಲ್ಲಿ ಕೆಲವು ಸಮಾಧಿಗಳಿರುವ ಕಾರಣ ಈ ಜಾಗವನ್ನು ಹಾಗೆಯೇ ಬಿಟ್ಟು ಉಳಿದೆಡೆ ರಸ್ತೆ ಅಗಲೀಕರಣ ಮಾಡಲಾಗಿತ್ತು. ಆದರೆ ಈ ಭಾಗದಲ್ಲಿ ರಸ್ತೆ ಅಭಿವೃದ್ಧಿಯಾಗದ ಕಾರಣ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿತ್ತು. ದೊಡ್ಡ ವಾಹನಗಳು ಬಂದಾಗ ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು.
ನಾಲ್ಕೈದು ವರ್ಷಗಳಿಂದ ರಸ್ತೆ ಅಭಿವೃದ್ಧಿಯಾಗದ ಕಾರಣ ಸ್ಮಶಾನ ತೆರವುಗೊಳಿಸಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು.ಹೀಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರ ಸಭೆ ಕರೆದು ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಲು ಮುಂದಾದರು.
ತಹಶೀಲ್ದಾರ್ ಸುದರ್ಶನ್ ಮಾತನಾಡಿ, ರಸ್ತೆಯ ಮಧ್ಯಭಾಗದಿಂದ ಹನ್ನೆರಡು ಮೀಟರ್ ರಸ್ತೆ ಅಗಲವಾಗಬೇಕು. ಇದಕ್ಕಾಗಿ ಆರು ಮೀಟರ್ ಸ್ಮಶಾನ ಜಾಗ ತೆರವುಗೊಳಿಸಬೇಕಾಗಿದೆ. ತೆರವಿನ ನಂತರ ಸ್ಮಶಾನಕ್ಕೆ ನಗರಸಭೆ ವತಿಯಿಂದ ತಡೆಗೋಡೆ ನಿರ್ಮಿಸಲಾಗುತ್ತದೆ. ಅಲ್ಲಿರುವ ಸಮಾಧಿಗಳನ್ನು ನಿಮ್ಮ ಧರ್ಮಾನುಸಾರ ನೀವೇ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಮೊದಲು ಸಭೆಯಲ್ಲಿ ಪ್ರತಿರೋಧ ಎದುರಾಯಿತಾದರೂ ಆನಂತರ ನ್ಯಾಯಾಲಯದ ಆದೇಶ ಪಾಲನೆ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ಮುಸ್ಲಿಂ ಧರ್ಮಗುರುಗಳು ಹಾಗೂ ಮುಸ್ಲಿಂ ಮುಖಂಡರು ಸಮಾಧಿಗಳ ತೆರವಿಗೆ ಒಪ್ಪಿಕೊಂಡರು.
ನಗರಸಭಾ ಪೌರಾಯುಕ್ತ ಸಿ.ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್, ಶಂಕರ್, ಪುರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕರ್ ದಿವಾಕರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಜಾಗ ತೆರವುಗೊಳಿಸಲು ಮನವಿ
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಯೋಜನಾ ನಿರ್ದೇಶಕ ರಮೇಶ್, ಸರ್ಕಾರ ಹಾಗೂ ನ್ಯಾಯಾಲಯದ ಆದೇಶದ ಮೇರೆಗೆ ಸ್ಮಶಾನದ ಭಾಗದಲ್ಲಿ ಜಾಗ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಇದು ಒಂದು ಧರ್ಮದ ಭಾವನಾತ್ಮಕ ವಿಚಾರವಾದ ಕಾರಣ ಯಾರ ಭಾವನೆಗೂ ಧಕ್ಕೆಯಾಗಬಾರದು ಎಂದು ಜಿಲ್ಲಾಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಸಭೆ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಜಾಗದ ತೆರವಿಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.