ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ ಹೆಚ್ಚಳ

ಕಡಿವಾಣ ಹಾಕಲು ಜಿಲ್ಲಾ ರೈತ ಸಂಘದ ಕಾರ್ಯಕರ್ತರ ಆಗ್ರಹ
Last Updated 25 ಅಕ್ಟೋಬರ್ 2021, 7:02 IST
ಅಕ್ಷರ ಗಾತ್ರ

ಕನಕಪುರ: ಹಳ್ಳಿಗಳು ರಾಮ ರಾಜ್ಯವಾಗಬೇಕು ಎಂದು ಗಾಂಧೀಜಿ ಕನಸು ಕಂಡಿದ್ದರು. ಇಂದು ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವ ಮೂಲಕ ಕುಡುಕರ ಸಾಮ್ರಾಜ್ಯವಾಗುತ್ತಿವೆ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಮುನಿರಾಜು ಆರೋಪಿಸಿದರು.

ಇಲ್ಲಿನ ಎಂಎಚ್‌ಎಸ್‌ ಗ್ರೌಂಡ್‌ ಬಳಿಯಿರುವ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟುವಂತೆ ಒತ್ತಾಯಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ಜನರಿಗೆ ಬೇಕಿರುವ ಅಗತ್ಯ ವಸ್ತುಗಳು ಸಿಗುತ್ತವೊ ಇಲ್ಲವೋ ಗೊತ್ತಿಲ್ಲ. ಆದರೆ, ನಾಲ್ಕು ಮನೆಯಿರುವ ಕುಗ್ರಾಮದಲ್ಲೂ ಎಗ್ಗಿಲ್ಲದೆ ಮದ್ಯ ಮಾರಾಟವಾಗುತ್ತಿದೆ. ಕುಡಿಯುವವರು ಬಾರ್‌, ರೆಸ್ಟೋರೆಂಟ್‌ ಹುಡುಕಿಕೊಂಡು ಹೋಗಬೇಕಿಲ್ಲ. ಗ್ರಾಮದಲ್ಲೇ ಎಲ್ಲಾ ಬ್ರಾಂಡಿನ ಮದ್ಯ ದೊರೆಯುತ್ತಿದೆ ಎಂದು ದೂರಿದರು.

ಜನತೆಗೆ ಇಂದು ದುಡಿಯಲು ಕೆಲಸವಿಲ್ಲ. ಆದಾಯ ಮೊದಲೇ ಇಲ್ಲ. ಆದರೂ ಗಂಡಸರು, ಯುವಕರು ಗ್ರಾಮದಲ್ಲಿ ಕುಡಿತದ ಚಟಕ್ಕೆ ಬಲಿಯಾಗಿ ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಅವರ ದುಡಿಮೆಯನ್ನೇ ನಂಬಿರುವ ಕುಟುಂಬಗಳು ಉಪವಾಸ ಬೀಳುವಂತಾಗಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ಆದಾಯ ಬರಬೇಕೆಂದು ಮದ್ಯದ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಕುಡಿತದ ಅಭ್ಯಾಸ ಮಾಡಿಕೊಂಡಿರುವವರು ಬೆಲೆ ಎಷ್ಟೇ ಹೆಚ್ಚಾದರೂ ತಲೆ ಕೆಡಿಸಿಕೊಳ್ಳದೆ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ. ಕುಡಿದು ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಹಳ್ಳಿಗಳ ಪರಿಸ್ಥಿತಿ ಹೀನಾಯವಾಗಿದ್ದು ಕುಟುಂಬಗಳು ಅತಂತ್ರವಾಗಿವೆ. ಹಳ್ಳಿಗಳಲ್ಲಿ ಮದ್ಯ ಮಾರಾಟವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುವಂತಿಲ್ಲ. ಆದರೂ, ಹಳ್ಳಿಗಳ ಪ್ರತಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದರೆ ಅಬಕಾರಿ ಇಲಾಖೆಯೇ ಬೆಂಬಲವಾಗಿ ನಿಂತಿದೆಯೇ ಎಂಬ ಅನುಮಾನ ಹುಟ್ಟಿಸುತ್ತಿದೆ. ಅಧಿಕಾರಿಗಳ ಸಹಕಾರವಿಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆಗ್ರಹಿಸಿದರು.

ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವ ಮದ್ಯವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಅಧಿಕೃತ ಬಾರ್‌ ಮತ್ತು ರೆಸ್ಟೋರೆಂಟ್‌ ಹೊರತುಪಡಿಸಿ ಯಾವುದೇ ಗ್ರಾಮದಲ್ಲೂ ಮದ್ಯ ಮಾರಾಟ ಆಗದಂತೆ ಅಬಕಾರಿ ಇಲಾಖೆಯು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ತಾಲ್ಲೂಕಿನ ಅಬಕಾರಿ ಅಧಿಕಾರಿಗಳ ವಿರುದ್ಧ ಜಿಲ್ಲಾಮಟ್ಟ ಅಥವಾ ಸರ್ಕಾರ ಮಟ್ಟಕ್ಕೆ ದೂರು ಕೊಟ್ಟು ಕ್ರಮಕ್ಕೆ ಒತ್ತಾಯಿಸುವುದಾಗಿ ಎಚ್ಚರಿಸಿದರು.

ರೈತ ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರೇಖಾ ಕಾಂತರಾಜು, ಜಿಲ್ಲಾ ಉಪಾಧ್ಯಕ್ಷ ಕುಮಾರ್‌, ಸಂಘಟನಾ ಕಾರ್ಯದರ್ಶಿ ಕುಮಾರ್‌, ತಾಲ್ಲೂಕು ಉಪಾಧ್ಯಕ್ಷ ಬಸವರಾಜು, ತಾಲ್ಲೂಕು ಕಾರ್ಯಾಧ್ಯಕ್ಷ ಕೃಷ್ಣ, ಹೋಬಳಿ ಅಧ್ಯಕ್ಷರಾದ ಶಿವಕುಮಾರ್‌, ರಮೇಶ್‌, ಸಿದ್ದರಾಮೇಗೌಡ, ಮುಖಂಡರಾದ ಸೋಮಣ್ಣ, ನಂಜರಾಜ ಅರಸು, ಮರಿಯಪ್ಪ, ಹನುಮಯ್ಯ, ಕಾಮಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT