ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲೂರು: ಶಾಸಕರಿಂದ ಬಸ್ ನಿಲ್ದಾಣ ಪರಿಶೀಲನೆ

Published 19 ಫೆಬ್ರುವರಿ 2024, 14:56 IST
Last Updated 19 ಫೆಬ್ರುವರಿ 2024, 14:56 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಸೋಲೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ನೆಲಮಂಗಲದ ಶಾಸಕ ಎನ್. ಶ್ರೀನಿವಾಸ ಅವರು ಸ್ಥಳೀಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು- ಮಂಗಳೂರು ಹೆದ್ದಾರಿ 75 ಸೋಲೂರು ಮಾರ್ಗದಲ್ಲಿದ್ದು, ನಿತ್ಯ ಇದೇ ಹೆದ್ದಾರಿಯಲ್ಲಿ ಹಾಸನ, ಮಂಗಳೂರು, ಕುಣಿಗಲ್ ಇತರೆಡೆಗಳಿಂದ ಕೆಎಸ್ಆರ್‌ಟಿಸಿ ಡಿಪೋಗಳಿಗೆ ಸೇರಿರುವ ನೂರಾರು ಸರ್ಕಾರಿ ಬಸ್‌ಗಳು ಸಂಚರಿಸುತ್ತಿವೆ. ಆದರೆ ಸೋಲೂರು ಬಸ್‌ ನಿಲ್ದಾಣದ ಒಳಗಡೆ ಒಂದೇ ಒಂದು ಸರ್ಕಾರಿ ಬಸ್‌ ಹೋಗುತ್ತಿರಲಿಲ್ಲ.ಈಗ ಆ ಸಮಸ್ಯೆ ಬಗೆಹರಿಸಲಾಗಿದೆ’ ಎಂದರು.

‘ಸೋಲೂರು ಹೋಬಳಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಸರ್ಕಾರಿ ಬಸ್‌ ನಿಲ್ಲಿಸುವಂತೆ ಹೋರಾಟ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಬರುವ ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿತ್ತು. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಗಮಂಗಲ, ತುರುವೇಕೆರೆ, ಕುಣಿಗಲ್, ಹಾಸನ ಡಿಪೋಗಳಿಗೆ ಸೇರಿರುವ ಸೋಲೂರು ಮಾಗರ್ವಾಗಿ ಸಂಚರಿಸುವ ಸರ್ಕಾರಿ ಬಸ್‌ಗಳನ್ನು ಸೋಲೂರು ಬಸ್ ನಿಲ್ದಾಣದಲ್ಲಿ ನಿಲ್ಲಿಸಬೇಕು. ಬೆಂಗಳೂರಿನಿಂದ ಮರಳುವಾಗ ಸೋಲೂರು ಬಸ್ ನಿಲ್ದಾಣದ ಒಳಗೆ ಹೋಗಿ ಪ್ರಯಾಣಿಕರನ್ನು ಕೆಳಗಿಳಿಸಿ, ಬಸ್‌ಗಳು ಮುಂದಕ್ಕೆ ಚಲಿಸುವಂತೆ ಆದೇಶ ಮಾಡಿಸಿದ್ದೇನೆ. ಬಹುದಿನದ ಕನಸು ನನಸಾಗಿದೆ. ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ’ ಎಂದು ಶಾಸಕರು ತಿಳಿಸಿದರು.

ಸ್ಥಳದಲ್ಲಿದ್ದ ಸಾರ್ವಜನಿಕರು ಸೋಲೂರು ಹೋಬಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು, ಡಿಪ್ಲಮೋ ಹಾಗೂ ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಬೇಕು. ಸೋಲೂರು ಹೋಬಳಿಯಲ್ಲಿ ಇರುವ ಸರ್ಕಾರಿ ಗೋಮಾಳ ಮತ್ತು ಬೆಟ್ಟಗುಡ್ಡಗಳು, ಕೆರೆಕಾಲುವೆಗಳನ್ನು ಅಕ್ರಮ ಒತ್ತುವರಿ ಮಾಡದಂತೆ ರಕ್ಷಿಸಿ, ಜಲಮೂಲ ಉಳಿಸಬೇಕು. ಸೋಲೂರಿನ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸುವಂತೆ ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚೆನ್ನರಂಗೇಗೌಡ, ಸೋಲೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ನಾಗರಾಜು, ಮುಖಂಡರಾದ ಶರ್ಮ, ಬಾಣವಾಡಿ ಕೃಷ್ಣಪ್ಪ. ಅಂಗಡಿ ನರಸಿಂಹಮೂರ್ತಿ ಹಾಗೂ ಗ್ರಾಮಸ್ಥರು ಮತ್ತು ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳು, ಅಟೋ ಚಾಲಕರು, ಕನ್ನಡ ಪರ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT