ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಪತ್ರಿಕಾ ವಿತರಕರ ದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ

ಹಿರಿಯ ಏಜೆಂಟರಿಗೆ ಸನ್ಮಾನ; ಸುಧೀರ್ಘ ವೃತ್ತಿಯ ನೋವು–ನಲಿವಿನ ಮೆಲುಕು
Published 4 ಸೆಪ್ಟೆಂಬರ್ 2024, 6:13 IST
Last Updated 4 ಸೆಪ್ಟೆಂಬರ್ 2024, 6:13 IST
ಅಕ್ಷರ ಗಾತ್ರ

ರಾಮನಗರ: ಬಾನಲ್ಲಿ ಸೂರ್ಯ ಉದಯಿಸುವುದಕ್ಕೆ ಮುಂಚೆಯೇ ಜಗತ್ತಿನ ಸುದ್ದಿಯನ್ನು ಹೊತ್ತ ದಿನಪತ್ರಿಕೆಯನ್ನು ಬೆಳ್ಳಂಬೆಳಿಗ್ಗೆ ಮನೆ ಬಾಗಿಲಿಗೆ ತಲುಪಿಸುವ ‘ಪತ್ರಿಕಾ ವಿತರಕರ ದಿನ’ವನ್ನು ಬುಧವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ‘ಪ್ರಜಾವಾಣಿ’ ಏಜೆಂಟರು ಹಾಗೂ ದಿನಪತ್ರಿಕೆಗಳನ್ನು ಹಾಕುವ ಹುಡುಗರು ಕೇಕ್ ಕತ್ತರಿಸುವ ಮೂಲಕ, ವಿತರಕರ ದಿನದ ಸಡಗರವನ್ನು ಹಂಚಿಕೊಂಡರು.

ಜಿಲ್ಲಾ ಕೇಂದ್ರವಾದ ರಾಮನಗರ, ತಾಲ್ಲೂಕು ಕೇಂದ್ರಗಳಾದ ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ, ಹೋಬಳಿ ಕೇಂದ್ರಗಳಾದ ಬಿಡದಿ ಹಾಗೂ ಕುದೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಏಜೆಂಟರ ಕಾಯಕ ಸ್ಥಳವಾದ ಬಸ್ ನಿಲ್ದಾಣ, ತಂಗುದಾಣ ಹಾಗೂ ಅಂಗಡಿಗಳ ಆವರಣದಲ್ಲಿ ನಡೆದ ಸಂಭ್ರಮಾಚರಣೆಯು ಹಿರಿಯರು ಮತ್ತು ಕಿರಿಯರ ಅನುಭವದ ಮೆಲುಕಿಗೂ ಸಾಕ್ಷಿಯಾಯಿತು.

ದಿನಪತ್ರಿಕೆಯನ್ನು ಮನೆ ಮನೆಗೆ ಹಾಕುವ ತಮ್ಮ ಬಳಗದ ಹುಡುಗರಿಗೆ ಏಜೆಂಟರು ಸಿಹಿ ಹಂಚಿ, ಅವರ ಕಾರ್ಯೋತ್ಸಹಕ್ಕೆ ಬೆನ್ನು ತಟ್ಟಿದರು. ತಾವು ಈ ವೃತ್ತಿಗೆ ಇಳಿದ ದಿನಗಳ ಮೆಲುಕು ಹಾಕುತ್ತಲೇ, ಅಂದಿಗೂ–ಇಂದಿಗೂ ದಿನಪತ್ರಿಕೆ ವಿತರಣೆಯಲ್ಲಾಗಿರುವ ಬದಲಾವಣೆಯನ್ನು ಹಂಚಿಕೊಂಡರು. ಪತ್ರಿಕೆ ಜೊತೆಗೆ ತಾವೂ ಬೆಳೆದಿರುವುದನ್ನು ಸ್ಮರಿಸಿದರು.

ರಾಮನಗರದ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 6ರ ಸುಮಾರಿಗೆ ಪತ್ರಿಕಾ ಏಜೆಂಟರು ಹಾಗೂ ಪತ್ರಿಕೆ ಹಂಚುವ ಹುಡುಗರ ನೇತೃತ್ವದಲ್ಲಿ ಕೇಕ್ ಕತ್ತರಿಸಿ, ಎಲ್ಲರಿಗೂ ವಿತರಿಸಲಾಯಿತು. ‘ಪತ್ರಿಕಾ ವಿತರಕರ ದಿನ’ದ ಅಂಗವಾಗಿ ಪತ್ರಿಕೆಯಲ್ಲಿ ಬಂದಿದ್ದ ವಿಶೇಷ ಸುದ್ದಿಯನ್ನು ಕಣ್ಣಾಡಿಸಿ ತಮ್ಮ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’ ದಿನಪತ್ರಿಕೆಯ ರಾಮನಗರದ ಏಜೆಂಟರಾಗಿ, ದಿನಪತ್ರಿಕೆಯನ್ನು ಓದುಗರಿಗೆ ತಲುಪಿಸುವ ಕಾಯಕವನ್ನು 24 ವರ್ಷಗಳಿಂದ ಮಾಡಿಕೊಂಡು ಬಂದಿರುವ ತ್ರಿಮೂರ್ತಿ ಅವರನ್ನು ಪತ್ರಿಕೆ ಪ್ರಸರಣ ವಿಭಾಗದಿಂದ ಸನ್ಮಾನಿಸಲಾಯಿತು. ಸಂಭ್ರಮಾಚರಣೆ ಮುಗಿದ ಬಳಿಕ, ಏಜೆಂಟರು ಮತ್ತು ಹುಡುಗರು ಎಂದಿನಂತೆ ಪತ್ರಿಕೆಗಳ ಬಂಡಲ್‌ಗಳನ್ನು ಜೋಡಿಸಿಕೊಂಡು ಸೈಕಲ್ ಮತ್ತು ಬೈಕ್‌ಗಳಲ್ಲಿ ತಮ್ಮ ಕಾಯಕಕ್ಕೆ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT