ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ: ಅನಿತಾ ಕುಮಾರಸ್ವಾಮಿ

Last Updated 7 ಫೆಬ್ರುವರಿ 2020, 13:01 IST
ಅಕ್ಷರ ಗಾತ್ರ

ರಾಮನಗರ: ‘ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ನಡೆಯಲಿದ್ದು, ದಿನಾಂಕ ಇನ್ನೂ ಅಂತಿಮಗೊಂಡಿಲ್ಲ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

ನೂತನ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ರಾಮನಗರ ಮತ್ತು ಚನ್ನಪಟ್ಟಣ ಜನರ ನಡುವೆ ಪುತ್ರ ನಿಖಿಲ್ ಮದುವೆ ಮಾಡಬೇಕೆಂಬುದು ನನ್ನ ಮತ್ತು ಕುಮಾರಸ್ವಾಮಿರವರ ಆಸೆಯಾಗಿತ್ತು. ‘ಇದಕ್ಕಾಗಿ ಕುಮಾರಸ್ವಾಮಿ ಈಗಾಗಲೇ ಜಾಗ ನೋಡಿದ್ದಾರೆ. ಏಪ್ರಿಲ್ ನಲ್ಲಿ ವಿವಾಹ ನೆರವೇರಲಿದೆ. ಪುರೋಹಿತರು ಮೂರು ದಿನಾಂಕಗಳನ್ನು ಮದುವೆ ಮುಹೂರ್ತಕ್ಕಾಗಿ ನೀಡಿದ್ದಾರೆ. ಅದರಲ್ಲಿ ಶುಭದಿನ ನೋಡಿಕೊಂಡು ಸಮಾರಂಭ ನಿಶ್ಚಯಿಸುತ್ತೇವೆ. ನಾವು ಮದುವೆ ಮುಹೂರ್ತ ನೆರವೇರಿಸುತ್ತೇವೆ. ಬೀಗರ ಔತಣಕೂಟವನ್ನು ಬೀಗರು ಮಾಡುತ್ತಾರೆ’ ಎಂದರು.

ರಾಮನಗರ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಯೋಜನೆಗಳ ಸಂಬಂಧ ಚರ್ಚೆ ನಡೆಸಿದ ನಂತರ ಸರ್ಕಾರ ತಡೆ ಹಿಡಿದಿದ್ದ ಅನುದಾನಗಳನ್ನು ಮತ್ತೆ ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯಿಂದ ₨2.50 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಬಳಿಕ ಶಾಸಕರು ಗೆಜ್ಜಲುಗುಡ್ಡೆಯಲ್ಲಿ ನೆಲ ಹಂತದ ನೀರು ಸಂಗ್ರಹಣಾ ಟ್ಯಾಂಕ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ನಂತರ ರಾಮನಗರದಲ್ಲಿ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ನಗರಸಭೆ ಖರೀದಿ ಮಾಡಿರುವ ವಿಶೇಷ ವಾಹನಗಳ ಸಂಚಾರಕ್ಕೆ ಶಾಸಕರು ಹಸಿರು ನಿಶಾನೆ ತೋರಿಸಿದರು.

‘ಹಸಿ ಮತ್ತು ಒಣ ಕಸದ ಸಂಗ್ರಹಕ್ಕೆಂದೇ ಆಫೆ ಆಟೊಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿನಿತ್ಯ ಕಸ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಅವುಗಳ ಜತೆಗೆ ಹೊಸ ವಾಹನಗಳ ಸೇರ್ಪಡೆಯಿಂದ ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎನ್. ಲಕ್ಷ್ಮೀಕಾಂತ್, ನಗರಸಭೆ ಆಯುಕ್ತೆ ಬಿ. ಶುಭಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಆರ್.ಎ. ಮಂಜುನಾಥ್, ಬಿ. ಉಮೇಶ್, ಸಿ.ಎಸ್. ಜಯಕುಮಾರ್, ಉಮೇಶ್, ಸುಹೇಲ್, ಜಕೀ ಉಲ್ಲಾ, ಗೂಳಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT