ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿಲ್ಲ! ನೀರು ಪೂರೈಕೆ ಘಟಕಕ್ಕೆ ಗ್ರಹಣ

ಶುಕ್ರವಾರ, ಏಪ್ರಿಲ್ 26, 2019
33 °C
ಬಾಟಲಿ ನೀರು ಕೊಳ್ಳುವುದು ಅನಿವಾರ್ಯ

ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿಲ್ಲ! ನೀರು ಪೂರೈಕೆ ಘಟಕಕ್ಕೆ ಗ್ರಹಣ

Published:
Updated:
Prajavani

ರಾಮನಗರ: ಇಲ್ಲಿನ ಕೆಎಸ್ಆರ್ ಟಿಸಿ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಘಟಕ ಹಾಳಾಗಿದ್ದು, ಪ್ರಯಾಣಿಕರು ನೀರನ್ನು ಕೊಂಡು ಕುಡಿಯುವಂತಾಗಿದೆ.

ಜಿಲ್ಲಾ ಕೇಂದ್ರದ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಮೂಲಕ ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬಸ್ಸುಗಳು ಹಾದುಹೋಗುತ್ತವೆ. ಅವುಗಳಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಈ ನಿಲ್ದಾಣವು ಪ್ರಯಾಣಿಕರಿಂದ ಗಿಜಿಗುಡುತ್ತದೆ. ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ತಿರುಪತಿ ಮೊದಲಾದ ಧಾರ್ಮಿಕ ಕ್ಷೇತ್ರಗಳು ಮತ್ತು ವಿವಿಧೆಡೆಗಳಿಗೆ ತೆರಳುವ ಪ್ರಯಾಣಿಕರ ದಟ್ಟಣೆ ಇರುತ್ತದೆ. ಜತೆಗೆ ವಿವಿಧ ರಾಜ್ಯಗಳ ಬಸ್‌ ಗಳು ಸಹ ನಿಲ್ದಾಣಕ್ಕೆ ಬಂದು ಹೋಗುತ್ತವೆ.

ಬಸ್‌ ನಿಲ್ದಾಣದಲ್ಲಿನ ಸಾರ್ವಜನಿಕ ಕುಡಿಯುವ ನೀರಿನ ಘಟಕ ನಾಲ್ಕು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಅದರಿಂದ ನಿಲ್ದಾಣದಲ್ಲಿ ಉಚಿತ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಕೆಲ ಪ್ರಯಾಣಿಕರು ಅನಿವಾರ್ಯವಾಗಿ ಬಾಟಲಿ ನೀರನ್ನು ಕೊಂಡು ಕುಡಿಯುತ್ತಾರೆ. ಇನ್ನು ಕೆಲ ಪ್ರಯಾಣಿಕರು ನೀರಿನ ದಾಹ ತೀರಿಸಿಕೊಳ್ಳಲು ನಿಲ್ದಾಣದಲ್ಲಿರುವ ಖಾಸಗಿ ಹೋಟಎೆಲ್ ಮೊರೆ ಹೋಗುತ್ತಿದ್ದಾರೆ.

ನಗರದಲ್ಲಿ ತಿಂಗಳಿಂದ 34-–37 ಡಿಗ್ರಿ ಸೆಲ್ಶಿಯಸ್‌ನಷ್ಟು ಗರಿಷ್ಠ ತಾಪಮಾನ ಇದೆ. ಬಿಸಿಲ ಝಳಕ್ಕೆ ಪ್ರಯಾಣಿಕರೂ ಹೈರಾಣಾಗುತ್ತಿದ್ದಾರೆ. ಬಡ ಪ್ರಯಾಣಿಕರು ಸಾರ್ವಜನಿಕ ಕುಡಿಯುವ ನೀರಿನ ಘಟಕದ ನಳ ತಿರುಗಿಸುತ್ತಾರೆ. ನೀರು ಬಾರದ್ದನ್ನು ಕಂಡು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

‘ರಾಮನಗರದಲ್ಲಿನ ಶಾಲಾ, ಕಾಲೇಜುಗಳಿಗೆ ಗ್ರಾಮೀಣ ಪ್ರದೇಶದಿಂದ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಎಸ್ಆರ್ ಟಸಿ ಬಸ್ಸಿನಲ್ಲಿ ಬರುತ್ತಾರೆ. ಅಂಗಡಿಗಳಲ್ಲಿ ಕೊಂಡುಕೊಳ್ಳಲು ವಿದ್ಯಾರ್ಥಿಗಳ ಬಳಿ ಹಣ ಇರಲ್ಲ. ಹೋಟೇಲ್ ನಲ್ಲಿ ಬರೀ ನೀರು ಕುಡಿಯಲು ಹೋದರೆ ಮಾಲೀಕರು ಗದರಿಸುತ್ತಾರೆ. ನೀರಿನ ಘಟಕ ದುರಸ್ಥಿಗೊಳಿಸಲು ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಲಕ್ಷ್ಮೀಪುರ ಗ್ರಾಮದ ವಿದ್ಯಾರ್ಥಿ ಸಾಗರ್ ತಿಳಿಸಿದರು.

‘ನಿಲ್ದಾಣದಲ್ಲಿ ನೀರಿನ ಬಾಟಲಿಗಳ ಮಾರಾಟ ದ್ವಿಗುಣಗೊಂಡಿದೆ. ಅರ್ಧ ಲೀಟರ್ ಮತ್ತು ಒಂದು ಲೀಟರ್ ನೀರಿನ ಬಾಟಲಿಗಳಿಗೆ ಬೇಡಿಕೆ ಇದೆ. ರಾತ್ರಿ ವೇಳೆ ನೀರಿನ ಬಾಟಲಿಗಳ ವ್ಯಾಪಾರ ತುಸು ಹೆಚ್ಚಾಗಿರುತ್ತದೆ’ ಎಂದು ನಿಲ್ದಾಣದಲ್ಲಿನ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

‘ಮಾಗಡಿಯಿಂದ ರಾಮನಗರಕ್ಕೆ ನಿತ್ಯ ಪ್ರಯಾಣಿಸುತ್ತೇನೆ. ಬಿಸಿಲಿಗೆ ಬಾಯಾರಿಕೆ ಆಗುತ್ತದೆ. ಆದರೆ ನಿಲ್ದಾಣದ ಉಚಿತ ನೀರಿನ ಘಟಕದಲ್ಲಿ ನೀರು ಬರುತ್ತಿಲ್ಲ. ನೀರನ್ನು ಕೊಂಡು ಕುಡಿಯುವಂತಾಗಿದೆ’ ಎಂದು ನೌಕರ ರಾಮಣ್ಣ ತಿಳಿಸಿದರು.
ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಮಯವಿಲ್ಲ. ಎಲ್ಲರೂ ಚುನಾವಣೆಯ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ. ಕೆಎಸ್ಆರ್ ಟಿಸಿ ಅಧಿಕಾರಿಗಳು ಕೂಡಲೇ ಕುಡಿಯುವ ನೀರಿನ ಘಟಕವನ್ನು ಸರಿ ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜನರಿಗೆ ಕಾಳಜಿ ಇಲ್ಲ
‘ಕುಡಿಯುವ ನೀರಿನ ಘಟಕವನ್ನು ಹಲವು ರಿಪೇರಿ ಮಾಡಿಸಿದ್ದೇವೆ. ಆದರೆ ಪ್ರಯಾಣಿಕರಿಗೆ ಬಳಸಿಕೊಳ್ಳಲು ಬರುವುದಿಲ್ಲ. ಹಲವು ಮಂದಿ ಪ್ರಯಾಣಿಕರು ಕುಡಿಯುವ ನೀರು ಎಂಬುದನ್ನು ಮರೆತು ಅಲ್ಲಿಯೇ ಮುಖ ತೊಳೆಯುತ್ತಾರೆ’ ಎಂದು ಕೆಎಸ್ಆರ್‌ಟಿಸಿ ಸಿಬ್ಬಂದಿ ತಿಳಿಸಿದರು.

‘ನಲ್ಲಿಯನ್ನು ಹೇಗೆ ಬೇಕೋ ಹಾಗೆ ಬಳಸಿ ಮುರಿದು ಹಾಕುತ್ತಾರೆ. ನಾವು ಎಷ್ಟೇ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ಘಟಕವನ್ನು ಸರಿಯಾಗಿ ಬಳಸಬೇಕು, ಅದು ನಮ್ಮ ವಸ್ತು ಎಂದು ಮನವರಿಕೆಯಾಗಬೇಕು’ ಎಂದು ಮನವಿ ಮಾಡಿದರು.

* ಬಸ್‌ ನಿಲ್ದಾಣದಲ್ಲಿ ಸಾಕಷ್ಟು ದಿನದಿಂದ ಕುಡಿಯುವ ನೀರು ಸಿಗುತ್ತಿಲ್ಲ. ಬಾಟಲಿ ನೀರು ಕೊಂಡುಕೊಳ್ಳಲು ನಮ್ಮ ಬಳಿ ಹಣ ಇರುವುದಿಲ್ಲ
ಶಶಿಕುಮಾರ್
-ವಿದ್ಯಾರ್ಥಿ, ರಾಮನಗರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !