ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಳುಬಿದ್ದ ಮಟನ್ ಮಾರುಕಟ್ಟೆ ಕಟ್ಟಡ

ಎರಡೂ ಕಡೆ ಆರಂಭಗೊಳ್ಳದ ಮಾರಾಟ: ಕಟ್ಟಡ ಸದುಪಯೋಗಕ್ಕೆ ಜನರ ಆಗ್ರಹ
Published : 6 ಅಕ್ಟೋಬರ್ 2022, 6:02 IST
ಫಾಲೋ ಮಾಡಿ
Comments

ಚನ್ನಪಟ್ಟಣ: ನಗರದ ಚಿಕ್ಕಮಳೂರು ಹಾಗೂ ಎಲೇಕೇರಿಗೆ ಹೋಗುವ ರಸ್ತೆಯಲ್ಲಿ ನಗರಸಭೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಮಟನ್ ಮಾರುಕಟ್ಟೆಗಳು ಪಾಳು ಬಿದ್ದಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿ
ಮಾರ್ಪಟ್ಟಿವೆ.

ನಗರದಲ್ಲಿ ರಸ್ತೆ ಬದಿಯಲ್ಲಿ ಮಾರಾಟವಾಗುತ್ತಿದ್ದ ಮಾಂಸ ಮಳಿಗೆಗಳಿಗೆ ಸುಸಜ್ಜಿತ ಕಟ್ಟಡ ಕಲ್ಪಿಸುವ ಉದ್ದೇಶದಿಂದ 13ನೇ ಹಣಕಾಸು ಯೋಜನೆಯಡಿಯಲ್ಲಿ 2006ರಲ್ಲಿ ಚಿಕ್ಕಮಳೂರು ಸಮೀಪದ ಅನ್ನಪೂರ್ಣೇಶ್ವರಿ ಬಡಾವಣೆ ರಸ್ತೆಯಲ್ಲಿ ಹಾಗೂ 2014ರಲ್ಲಿ ಎಲೇಕೇರಿ ರಸ್ತೆಯಲ್ಲಿ ಮಟನ್ ಮಾರುಕಟ್ಟೆ
ನಿರ್ಮಿಸಲಾಗಿದೆ.

ಆದರೆ ಇಲ್ಲಿ ಮಾಂಸದ ಮಾರುಕಟ್ಟೆ ಆರಂಭಗೊಳ್ಳದ ಕಾರಣ ಪಾಳುಬಂಗಲೆಯಾಗಿ ಪರಿವರ್ತನೆಯಾಗಿವೆ. ಮಳಿಗೆಗಳನ್ನು ಹರಾಜು ಹಾಕಿ, ಹರಾಜು ಕೂಗಿ ನಿಮ್ಮ ಮಳಿಗೆಗಳನ್ನು ಇಲ್ಲಿ ಸ್ಥಳಾಂತರ ಮಾಡಿಕೊಳ್ಳಿ ಎಂದು ಮಾಂಸದ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ಸೂಚಿಸಿದರೂ ಯಾರೂ ಇದುವರೆಗೆ ಮುಂದೆ
ಬಂದಿಲ್ಲ.

ಭೂತಬಂಗಲೆ ಯಾದ ಮಾರುಕಟ್ಟೆ

ಚಿಕ್ಕಮಳೂರು ಬಳಿ ನಿರ್ಮಿಸಿರುವ ಮಾಂಸದ ಮಾರುಕಟ್ಟೆ ಗಿಡಗಂಟೆಗಳು ಬೆಳೆದು ಭೂತಬಂಗಲೆಯಾಗಿ ಮಾರ್ಪಟ್ಟಿದೆ. ಮೋಜು ಮಸ್ತಿಯ ತಾಣವಾಗಿ ಪರಿಣಮಿಸಿದೆ. ಇಡೀ ಪ್ರದೇಶ ಕೊಳಚೆ ಗುಂಡಿಯಾಗಿ ಪರಿಣಮಿಸಿದೆ. ಇದರ ಸಮೀಪ ಕಸ ಸುರಿದು ಸೊಳ್ಳೆ ಕಾಟ ಜಾಸ್ತಿಯಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಿವಾಸಿಗಳಾದ ಪುಟ್ಟೇಗೌಡ, ದಿನೇಶ್ ದೂರುತ್ತಾರೆ.

ಎಂಟು ವರ್ಷಗಳಿಂದ ಪಾಳು

ನಗರದ ಎಲೇಕೇರಿಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಿರುವ ಮಟನ್ ಮಾರಾಟದ ದೊಡ್ಡಕಟ್ಟಡ ಸಹ ಸುಮಾರು ಎಂಟು ವರ್ಷಗಳಿಂದ ಪಾಳುಬಿದ್ದಿದೆ.
ಇಲ್ಲಿ ಎರಡು ಅಂತಸ್ತು ಕಟ್ಟಡ ನಿರ್ಮಿಸಲಾಗಿದ್ದು, ನಗರಸಭೆ ಇದರ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಹತ್ತಾರು ಅಂಗಡಿಗಳಿದ್ದು, ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಿದರೆ ಪಟ್ಟಣದ ಎಲ್ಲೆಡೆ ಇರುವ ಮಾಂಸದ ಅಂಗಡಿಗಳನ್ನು ಇಲ್ಲಿಗೆ ಸ್ಥಳಾಂತರಿಸಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸ್ಥಳಾಂತರ ಮಾಡಲು ಸಾಧ್ಯವಾಗದಿದ್ದರೆ ಈ ಕಟ್ಟಡವನ್ನು ಬೇರೆ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜನರು
ಆಗ್ರಹಿಸಿದ್ದಾರೆ.

ರಸ್ತೆ ಬದಿ ಮಾಂಸ ಮಾರಾಟ

ನಗರದಲ್ಲಿ ಮಾಂಸ ಮಾರಾಟಕ್ಕಾಗಿ ಎರಡು ಕಟ್ಟಡಗಳನ್ನು ನಗರಸಭೆ ನಿರ್ಮಿಸಿದ್ದರೂ ಮಾಂಸದ ಅಂಗಡಿಗಳು ಮಾತ್ರ ನಗರದ ವಿವಿಧಡೆ ರಸ್ತೆಬದಿಯೇ ಕಾರ್ಯನಿರ್ವಹಿಸುತ್ತಿವೆ.
ನಗರದ ಚಿಕ್ಕಮಳೂರು, ಜೆಸಿ ರಸ್ತೆ, ರೈಲ್ವೆ ಗೇಟ್, ಸಾತನೂರು ಸರ್ಕಲ್, ಪೇಟೆ ಬೀದಿ, ರೈಲ್ವೆ ಸ್ಟೇಷನ್ ರಸ್ತೆ, ಮೂರ್ತಿಮಹಲ್ ರಸ್ತೆ, ಮಂಡಿಪೇಟೆ ರಸ್ತೆ, ಷೇರು ಹೋಟೆಲ್ ಸರ್ಕಲ್, ಚರ್ಚ್ ರಸ್ತೆ ಸೇರಿದಂತೆ ನಗರದೆಲ್ಲೆಡೆ ರಸ್ತೆಬದಿಯಲ್ಲಿಯೆ ಮಾಂಸದ ಅಂಗಡಿಗಳು ಇವೆ. ಅದರಲ್ಲೂ ಕೋಳಿ ಮಾಂಸದ ಅಂಗಡಿಗಳಂತೂ ನಗರದ ತುಂಬೆಲ್ಲಾ ರಸ್ತೆಬದಿಯಲ್ಲಿಯೆ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಅನುಶುಚಿತ್ವ ತಾಂಡವಾಡುತ್ತಿದೆ ಎನ್ನುತ್ತಾರೆ ಸಾರ್ವಜನಿಕರಾದ ಪ್ರಜ್ವಲ್, ಶಿವಪ್ಪ. ನಗರಸಭೆಯು ಈ ಎರಡೂ ಕಟ್ಟಡಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಗರದೆಲ್ಲೆಡೆ ಇರುವ ಮಾಂಸ ಮಾರಾಟ ಮಳಿಗೆಗಳನ್ನು ಸ್ಥಳಾಂತರ ಮಾಡಬೇಕು.

ಮಾಂಸದಂಗಡಿಯವರನ್ನು ಒಪ್ಪಿಸಿ

ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕಟ್ಟಿದ ಕಟ್ಟಡವನ್ನು ಸದುಪಯೋಗ ಪಡಿಸಿಕೊಳ್ಳಬೇಕಾದರೆ ಮಾಂಸದಂಗಡಿಗಳ ಮಾಲೀಕರನ್ನು ಒಪ್ಪಿಸಿ ರಸ್ತೆಬದಿಯಲ್ಲಿರುವ ಮಾಂಸ ಮಾರಾಟ ಅಂಗಡಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಮೂಲಕ ನಗರದ ಸ್ವಚ್ಛತಾ ಕಾಪಾಡಲು ನಗರಸಭೆ ಮುಂದಾಗಬೇಕು ಎಂದು ಇಲ್ಲಿನ ನಿವಾಸಿಗಳಾದ ಪುಟ್ಟರಾಜು, ಶಿವಲಿಂಗಯ್ಯ ಆಗ್ರಹಿಸುತ್ತಾರೆ.

‘ಸಾರ್ವಜನಿಕ ಪ್ರದೇಶದಿಂದ ದೂರ’

ಮಟನ್ ಮಾರುಕಟ್ಟೆಗಳು ಸಾರ್ವಜನಿಕ ಪ್ರದೇಶದಿಂದ ದೂರದಲ್ಲಿವೆ. ಜೊತೆಗೆ ಅಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸಿಲ್ಲ. ಜನಗಳಿಗೆ ಎದುರು ಕಾಣುವಂತೆ ಮಾರುಕಟ್ಟೆ ಇದ್ದಾಗ ಮಾತ್ರ ಮಾರಾಟ ಸುಲಭ. ಎಲ್ಲೋ ಕಾಣದ ಜಾಗದಲ್ಲಿದ್ದಾಗ ಜನರನ್ನು ಸೆಳೆಯುವುದು ಕಷ್ಟ. ಸರಿಯಾದ ವ್ಯವಸ್ಥೆ ಕಲಿಸಿ, ನಗರದಲ್ಲಿನ ಎಲ್ಲಾ ಮಾಂಸ ಮಾರಾಟಗಾರರನ್ನು ಅಲ್ಲಿಗೆ ಸ್ಥಳಾಂತರ ಮಾಡಲು ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ನಾವು ಸ್ಥಳಾಂತರಗೊಳ್ಳುತ್ತೇವೆ’ ಎಂದು ಮಾಂಸ ಮಾರಾಟಗಾರ ನಾಗರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT