ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಅನಧಿಕೃತ ಹೋಂಸ್ಟೆ, ರೆಸಾರ್ಟ್‌ಗೆ ಬಿಸಿ

ಅನುಮತಿ ಪಡೆಯುವವರೆಗೆ ತೆರೆಯದಂತೆ ಪ್ರವಾಸೋದ್ಯಮ ಇಲಾಖೆ ನೋಟಿಸ್
Published 8 ಜೂನ್ 2024, 5:56 IST
Last Updated 8 ಜೂನ್ 2024, 5:56 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಹೋಂಸ್ಟೆ ಮತ್ತು ರೆಸಾರ್ಟ್‌ಗಳಿಗೆ ಪ್ರವಾಸೋದ್ಯಮ ಇಲಾಖೆಯು ಬಿಸಿ ಮುಟ್ಟಿಸಿದೆ. ಅನುಮತಿ ಪಡೆಯದೆ ಪ್ರವಾಸಿಗರ ಭೇಟಿಗೆ ಅನುಮತಿ ನೀಡುವಂತಿಲ್ಲ ಹಾಗೂ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ನೋಟಿಸ್ ನೀಡಿದೆ.

ಕಳೆದ ಮೇ 19ರಂದು ಶುಶ್ರೂಷಕರ ತಂಡವೊಂದು ಹಾರೋಹಳ್ಳಿ ತಾಲ್ಲೂಕಿನ ಗೊಟ್ಟಿಗೆಹಳ್ಳಿ ಗ್ರಾಮದ ಜಂಗಲ್ ಟ್ರೈಲ್ ರೆಸಾರ್ಟ್‌ಗೆ ಭೇಟಿ ನೀಡಿತ್ತು. ಅಲ್ಲಿದ್ದ ಸುಮಾರು 20 ಅಡಿ ಎತ್ತರದ ಜಿಪ್‌ಲೈನ್‌ನಲ್ಲಿ ಆಟವಾಡುವಾಗ ತಂತಿ ತುಂಡಾಗಿದ್ದರಿಂದ ಒಬ್ಬರು ಮೃತಪಟ್ಟು, ಉಳಿದಿಬ್ಬರು ಗಾಯಗೊಂಡಿದ್ದರು. ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಲಾಖೆಯು ಅನಧಿಕೃತವಾಗಿರುವ ರೆಸಾರ್ಟ್ ಮತ್ತು ಹೋಂ ಸ್ಟೆಗಳ ವಿರುದ್ಧ ಪ್ರಹಾರ ಶುರು ಮಾಡಿದೆ.

ರೆಸಾರ್ಟ್‌ಗೆ ಬೀಗ: ‘ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಜಂಗಲ್ ಟ್ರೈಲ್ ರೆಸಾರ್ಟ್‌ ಅನುಮತಿ ಇಲ್ಲದೆ ನಡೆಯುತ್ತಿತ್ತು. ಘಟನೆ ಬೆನ್ನಲ್ಲೇ, ರೆಸಾರ್ಟ್‌ ಮಾಲೀಕರಿಗೆ ನೋಟಿಸ್ ಕೊಟ್ಟು ಬೀಗ ಹಾಕಲಾಗಿದೆ. ಇದೇ ರೀತಿ ಅನಧಿಕೃತವಾಗಿರುವ ರೆಸಾರ್ಟ್‌ಗಳಿಗೂ ನೋಟಿಸ್ ನೀಡಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಎಚ್‌.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 30 ಹೋಂ ಸ್ಟೇಗಳು ಮತ್ತು 9 ರೆಸಾರ್ಟ್‌ಗಳು ಮಾತ್ರ ಅಧಿಕೃತವಾಗಿವೆ. ಉಳಿದಂತೆ ಅನಧಿಕೃತವಾಗಿ ತಲೆ ಎತ್ತಿದ್ದ 4 ರೆಸಾರ್ಟ್ ಮತ್ತು 18 ಹೋಂ ಸ್ಟೆಗಳಿಗೆ ನೋಟಿಸ್ ಜಾರಿ ಮಾಡಿ, ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಅನುಮತಿ ಮಂಜೂರಾಗುವವರೆಗೆ ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ. ಈ ಪೈಕಿ, ಕೆಲವರು ಎಚ್ಚೆತ್ತುಕೊಂಡು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ಅನುಮತಿ ಇಲ್ಲದೆ ಸಾಹಸ ಚಟುವಟಿಕೆ: ‘ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ಕೆಲ ರೆಸಾರ್ಟ್ ಮತ್ತು ಹೋಂ ಸ್ಟೆಗಳಲ್ಲಿ ಸಾಹಸ ಚಟುವಟಿಕೆಗಳನ್ನು ಸಹ ನಡೆಸಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಮೂರು ರೆಸಾರ್ಟ್‌ಗಳಲ್ಲಿ ಮಾತ್ರ ಸಾಹಸ ಚಟುವಟಿಕೆಗಳಿಗೆ ಅನುಮತಿ ಪಡೆಯಲಾಗಿದೆ. ಚಟುವಟಿಕೆಗಳನ್ನು ನಡೆಸುವವರು ತರಬೇತಿ ಪಡೆದು ಪ್ರಮಾಣಪತ್ರ ಹೊಂದಿರಬೇಕು. ಆದರೆ, ಉಳಿದವರು ಹಾಗೆಯೇ ನಡೆಸುತ್ತಿದ್ದರು. ಅದಕ್ಕೂ ಬ್ರೇಕ್ ಹಾಕಲಾಗಿದ್ದು,  ಇಲಾಖೆಯೇ ಶಿಬಿರ ಆಯೋಜಿಸಿ ತರಬೇತಿ ನೀಡಲು ಮುಂದಾಗಿದೆ’ ಎಂದರು.

ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆಯು ಬೆಟ್ಟಗುಡ್ಡ, ನದಿ ಹಾಗೂ ಕೆರೆಗಳಿಂದ ಕೂಡಿದ್ದು, ವಾರಾಂತ್ಯ ಕಳೆಯಲು ಇಲ್ಲಿನ ರೆಸಾರ್ಟ್‌ ಮತ್ತು ಹೋಂ ಸ್ಟೆಗಳಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಅನಧಿಕೃತವಾಗಿ ರೆಸಾರ್ಟ್ ಮತ್ತು ಹೋಂಸ್ಟೆ ನಡೆಸುತ್ತಿದ್ದರು. ಅಂತಹವರನ್ನು ಪರವಾನಗಿ ವ್ಯಾಪ್ತಿಗೆ ತರಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ರಮೇಶ್ ಪ್ರಧಾನ ಕಾರ್ಯದರ್ಶಿ ರಾಮನಗರ ಜಿಲ್ಲೆ ರೆಸಾರ್ಟ್‌ ಮಾಲೀಕರ ಸಂಘ
ರಮೇಶ್ ಪ್ರಧಾನ ಕಾರ್ಯದರ್ಶಿ ರಾಮನಗರ ಜಿಲ್ಲೆ ರೆಸಾರ್ಟ್‌ ಮಾಲೀಕರ ಸಂಘ
ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಹೋಂ ಸ್ಟೆ ಮತ್ತು ರೆಸಾರ್ಟ್‌ಗಳನ್ನು ಪತ್ತೆಹಚ್ಚಿ ಅನುಮತಿ ಪಡೆಯುವಂತೆ ನೋಟಿಸ್ ನೀಡಲಾಗಿದೆ. ಅನುಮತಿ ಪಡೆಯದೆ ಪ್ರವಾಸಿಗರಿಗೆ ಆಶ್ರಯ ನೀಡಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು
– ರವಿಕುಮಾರ್ ಎಚ್.ಡಿ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ರಾಮನಗರ

‘ಹೆಸರಿಗೆ ಫಾರ್ಮ್‌ಹೌಸ್‌; ನಡೆಸುವುದು ಹೋಂಸ್ಟೆ’ ‘ಕೆಲವರು ತಮ್ಮ ತೋಟಗಳಲ್ಲಿ ನಿರ್ಮಿಸಿರುವ ಫಾರ್ಮ್‌ಹೌಸ್‌ಗಳನ್ನೇ ಹೋಂ ಸ್ಟೆಗಳನ್ನಾಗಿ ಪರಿವರ್ತಿಸಿಕೊಂಡಿದ್ದರು. ಈ ಕುರಿತು ವಿಚಾರಿಸಿದಾಗ ತಮ್ಮ ಕುಟುಂಬದವರು ವಾರಾಂತ್ಯದಲ್ಲಿ ಬಂದು ಹೋಗುತ್ತೇವೆ ಹೊರಗಿನವರಿಗೆ ಇಲ್ಲಿ ಅವಕಾಶವಿಲ್ಲ ಎಂದು ಸಮಜಾಯಿಷಿ ನೀಡಿದರು. ಆದರೆ ಸ್ಥಳದ ಹೆಸರನ್ನು ಗೂಗಲ್‌ನಲ್ಲಿ ಟೈಪಿಸಿದಾಗ ಹೋಂ ಸ್ಟೆ ಹೆಸರಿನಲ್ಲಿ ವೆಬ್‌ಸೈಟ್‌ ಕೂಡ ಅಭಿವೃದ್ಧಿಪಡಿಸಿ ಆನ್‌ಲೈನ್‌ ಮೂಲಕವೇ ಪ್ರವಾಸಿಗರ ಭೇಟಿಯ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದದ್ದು ಕಂಡುಬಂತು. ಅವರಿಗೂ ಅನುಮತಿ ಪಡೆಯುವಂತೆ ನೋಟಿಸ್ ಕೊಟ್ಟು ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದೇವೆ’ ಎಂದು ರವಿಕುಮಾರ್ ಹೇಳಿದರು.

‘ಪರಿಶೀಲನೆ ಜೊತೆಗೆ ಪ್ರೋತ್ಸಾಹವಿರಲಿ’ ‘ಜಿಲ್ಲೆಗೆ ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮ ಉತ್ತೇಜಿಸುವಲ್ಲಿ ರೆಸಾರ್ಟ್ ಮತ್ತು ಹೋಂಸ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ರೆಸಾರ್ಟ್‌ವೊಂದರಲ್ಲಿ ಇತ್ತೀಚೆಗೆ ನಡೆದ ಅವಘಡ ದುರದೃಷ್ಟಕರ. ರೆಸಾರ್ಟ್ ಮತ್ತು ಹೋಂಸ್ಟೆಗಳಲ್ಲಿ ನಿಯಮಪಾಲನೆ ಕುರಿತು ಪ್ರವಾಸೋದ್ಯಮ ಇಲಾಖೆ ಆಗಾಗ ಪರಿಶೀಲನೆ ನಡೆಸಬೇಕು. ಅನಧಿಕೃತವಾಗಿದ್ದರೆ ಅಧಿಕೃತಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸಾಹಸ ಚಟುವಟಿಕೆಗಳನ್ನು ನಡೆಸುವವರಿಗೆ ಅಗತ್ಯ ತರಬೇತಿ ಶಿಬಿರ ಸೇರಿದಂತೆ ಇತರ ಅಗತ್ಯ ತರಬೇತಿಗಳನ್ನು ಆಯೋಜಿಸಬೇಕು. ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ರೆಸಾರ್ಟ್ ಮತ್ತು ಹೋಂಸ್ಟೆಗಳನ್ನು ಉತ್ತೇಜಿಸುವಂತಹ ಕೆಲಸಗಳನ್ನು ಇಲಾಖೆ ಮಾಡಬೇಕು’ ಎಂದು ರಾಮನಗರ ಜಿಲ್ಲೆ ರೆಸಾರ್ಟ್‌ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT