ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶತಕ’ ದಾಟಿದ ಈರುಳ್ಳಿ: ಗ್ರಾಹಕರ ಕಣ್ಣೀರು

ಬೆಳ್ಳುಳ್ಳಿ, ನುಗ್ಗೆ, ಬದನೆ ದುಬಾರಿ: ಬೀನ್ಸ್‌, ಬೆಂಡೆ ಅಗ್ಗ
Last Updated 28 ನವೆಂಬರ್ 2019, 12:29 IST
ಅಕ್ಷರ ಗಾತ್ರ

ರಾಮನಗರ: ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದ್ದು, ಗ್ರಾಹಕರು ಕಣ್ಣೀರು ಹಾಕುವಂತೆ ಆಗಿದೆ. ಉಳಿದ ತರಕಾರಿಗಳ ಬೆಲೆಯೂ ಏರುಪೇರಾಗಿದೆ.

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಈ ವರ್ಷ ನೆರೆ ಪರಿಸ್ಥಿತಿಯಿಂದಾಗಿ ಈರುಳ್ಳಿ ಉತ್ಪಾದನೆ ಕುಸಿದಿದ್ದು, ಇದು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ಸ್ಥಳೀಯ ಮಾರುಕಟ್ಟೆಗೆ ಈರುಳ್ಳಿಯ ಆವಕವೇ ಕಡಿಮೆ ಆಗಿದೆ. ಇದರಿಂದಾಗಿ ಬೆಲೆ ದುಪ್ಪಟ್ಟಾಗಿದೆ. ಸಣ್ಣ ಗಾತ್ರದ ಈರುಳ್ಳಿಯ ಬೆಲೆಯೇ ₨70ರಿಂದ ಇದೆ. ದೊಡ್ಡ ಗಾತ್ರದ ಈರುಳ್ಳಿ ಮಾರುಕಟ್ಟೆಯಲ್ಲಿ ಅಪರೂಪವಾಗಿದೆ.

ಈಗ ಮಾರುಕಟ್ಟೆಗೆ ಬಂದಿರುವ ಈರುಳ್ಳಿಯ ಗುಣಮಟ್ಟವೂ ಅಷ್ಟಕ್ಕಷ್ಟೇ ಎಂಬಂತೆ ಇದೆ. ಹಸಿಹಸಿಯಾಗಿದ್ದು, ಕೆಲವೇ ದಿನಗಳಲ್ಲಿ ಕೊಳೆಯುವ ಸ್ಥಿತಿ ತಲುಪುತ್ತಿದೆ. ಒಣಗಿದ ಸ್ಥಿತಿಯಲ್ಲಿರುವ ಉತ್ಪನ್ನ ಮಾತ್ರ ಬಲು ದುಬಾರಿ ಆಗಿದೆ. ಹೀಗಾಗಿ ಕೆ.ಜಿ.ಗಟ್ಟಲೆ ಖರೀದಿ ಮಾಡುತ್ತಿದ್ದವರು ಇಂದು ಅಳೆದು ತೂಗಿ ಕೊಂಡು ಹೋಗುತ್ತಿದ್ದಾರೆ.

ಈರುಳ್ಳಿ ದರ ಏರುಗತಿಯಲ್ಲಿ ಇರುವಂತೆಯೇ ಬೆಳ್ಳುಳ್ಳಿ ಬೆಲೆಯೂ ಇನ್ನೂ ಗಗನಮುಖಿಯಾಗಿಯೇ ಉಳಿದಿದೆ. ಸದ್ಯ ಪ್ರತಿ ಕೆ.ಜಿ.ಗೆ ₨200ರಂತೆ ಮಾರಾಟ ನಡೆದಿದೆ. ಹೀಗಾಗಿ ಜನರು ಗ್ರಾಂಗಳ ಲೆಕ್ಕದಲ್ಲಿ ಬೆಳ್ಳುಳ್ಳಿ ಕೊಂಡೊಯ್ಯುವ ಪರಿಸ್ಥಿತಿ ಇದೆ.

ನುಗ್ಗೆ ನಾಪತ್ತೆ: ಮದುವೆ ಮೊದಲಾದ ಶುಭ ಸಮಾರಂಭಗಳ ಸಾಂಬಾರಿನೊಳಗೆ ತಪ್ಪದೇ ಕಾಣಸಿಗುವ ನುಗ್ಗೆಕಾಯಿ ಬಲು ದುಬಾರಿ ಆಗಿದ್ದು, ಈಚೆಗೆ ಮಾರುಕಟ್ಟೆಯಿಂದಲೇ ನಾಪತ್ತೆ ಆಗಿದೆ. ಕೆ.ಜಿ.ಗೆ ₨200ಕ್ಕೂ ಹೆಚ್ಚು ದರದಲ್ಲಿ ಮಾರಾಟ ಆಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಪೂರೈಕೆಗೆ ಇಲ್ಲದಂತೆ ಆಗಿದೆ.

ಮತ್ತೊಂದು ದಿನ ಬಳಕೆಯ ತರಕಾರಿಯಾದ ಟೊಮ್ಯಾಟೊ ಬೆಲೆ ವಾರದಿಂದ ಏರಿಕೆಯ ಹಾದಿಯಲ್ಲಿ ಇದೆ.
ಸ್ಥಳೀಯವಾಗಿಯೂ ಉತ್ಪನ್ನ ಪೂರೈಕೆಯಾಗುತ್ತಿದೆ. ಪ್ರತಿ ಕೆ.ಜಿ. ಟೊಮ್ಯಾಟೊ ಬೆಲೆ ವಾರದಲ್ಲೇ ₨10ರಷ್ಟು ಜಾಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ವರ್ತಕರು. ಇದರೊಟ್ಟಿಗೆ ಬದನೆಕಾಯಿ ಬೆಲೆಯೂ ಏರತೊಡಗಿದೆ.

ಹುರುಳಿಕಾಯಿ ಅರ್ಥಾತ್‌ ಬೀನ್ಸ್‌, ಕ್ಯಾರೆಟ್‌ ಧಾರಣೆ ಮಾತ್ರ ಇಳಿಮುಖವಾಗಿರುವುದು ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ಅದರಲ್ಲೂ ಬೀನ್ಸ್‌ ತೀರ ಅಗ್ಗವಾಗಿದೆ. ಹಸಿ ಮೆಣಸಿನಕಾಯಿಯ ದರವು ಬಜ್ಜಿ ಮೆಣಸಿನಕಾಯಿಗಿಂತ ದುಬಾರಿ ಆಗಿದೆ. ಹಾಗಲಕಾಯಿ, ಈರೇಕಾಯಿ, ಬೀಟ್‌ರೂಟ್‌ ಬೆಲೆ ಏರಿಸಿಕೊಂಡರೆ, ಮೂಲಂಗಿ, ಆಲೂಗಡ್ಡೆ, ಪಡುವಲಕಾಯಿ, ಸೀಮೆ ಬದನೆ, ಗೆಡ್ಡೆಕೋಸು, ಎಲೆಕೋಸು ಮೊದಲಾದ ತರಕಾರಿಗಳು ಕೈಗೆ ಎಟಕುವ ದರದಲ್ಲಿವೆ.

ಮಾರುಕಟ್ಟೆಯಲ್ಲಿ ಸೌತೆಕಾಯಿ ಹಾಗೂ ನಿಂಬೆ ತೀರ ಅಗ್ಗವಾಗಿವೆ. ಮಧ್ಯಮ ಗಾತ್ರದ ಸೌತೆ ಒಂದಕ್ಕೆ ₨5ಕ್ಕೆ ಸಿಗುತ್ತಿದೆ. ನಿಂಬೆ ಮಧ್ಯಮ ಗಾತ್ರದ್ದು ₨10ಕ್ಕೆ ಮೂರರಂತೆ ಮಾರಾಟ ಆಗುತ್ತಿದೆ.

ಬೆಲೆ ಕೇಳಿಯೇ ಕಣ್ಣೀರು ಬರುತ್ತಿದೆ

ಈರುಳ್ಳಿ ಬೆಲೆ ಕೇಳಿಯೇ ಕಣ್ಣೀರು ಬರುತ್ತಿದೆ. ಅದರಲ್ಲೂ ಗುಣಮಟ್ಟದ ಉತ್ಪನ್ನ ಸಿಗುತ್ತಿಲ್ಲ. ಕೆಲವು ದಿನಗಳಲ್ಲೇ ಹಾಳಾಗುತ್ತಿದೆ ಎಂದು ಗ್ರಾಹಕರಾದಶಾರದಾ ಹೇಳುತ್ತಾರೆ.

ಒಂದೆರಡು ತರಕಾರಿಗಳು ಮಾತ್ರ ಏರಿಕೆ

ಒಂದೆರಡು ತರಕಾರಿಗಳನ್ನು ಹೊರತುಪಡಿಸಿ ಉಳಿದವು ಗ್ರಾಹಕರಿಗೆ ಎಟಕುವಂತಿವೆ. ಈ ವಾರ ಬೀನ್ಸ್‌, ಕ್ಯಾರೆಟ್‌ ಮೊದಲಾದವುಗಳ ಬೆಲೆ ಕಡಿಮೆ ಆಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶಿವಣ್ಣ

ಸೊಪ್ಪು ದುಬಾರಿ
ಚಿಲ್ಲರೆ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸಹಿತ ಪ್ರಮುಖ ಸೊಪ್ಪುಗಳ ಮಾರಾಟ ದರವು ದುಬಾರಿಯಾಗಿಯೇ ಉಳಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಕೊತ್ತಂಬರಿಯ ಬೆಲೆ ಕೊಂಚ ಇಳಿದಿದೆಯಾದರೂ ಗ್ರಾಹಕರು ಇನ್ನೂ ಖರೀದಿಗೆ ಹಿಂದು–ಮುಂದು ನೋಡುತ್ತಿದ್ದಾರೆ. ದೊಡ್ಡ ಕಟ್ಟಿಗೆ ₨25–30ರ ದರದಲ್ಲಿ ಮಾರಾಟ ನಡೆದಿದೆ. ಪುದೀನ, ಸಬ್ಬಸಿಗೆ ಒಂದು ಕಂತೆಗೆ ₨20, ಮೆಂತ್ಯ–₨30, ದಂಟು, ಕೀರೆ, ಕಿಲಕೀರೆ ಮೊದಲಾದ ಸಾಂಬಾರ್ ಸೊಪ್ಪುಗಳು ಒಂದು ಕಟ್ಟಿಗೆ ₨10ರಂತೆ ಮಾರಾಟವಾಗುತ್ತಿವೆ.

ಟೇಬಲ್‌
ತರಕಾರಿ ದರ (ಪ್ರತಿ ಕೆ.ಜಿ.ಗೆ–₨ಗಳಲ್ಲಿ)

ಈರುಳ್ಳಿ 80–100
ಬೆಳ್ಳುಳ್ಳಿ–200
ಈರೇಕಾಯಿ–40
ಬೆಂಡೆ–30
ಮೂಲಂಗಿ–30
ಗೆಡ್ಡೆಕೋಸು–40
ಆಲೂಗಡ್ಡೆ–30
ಸೀಮೆಬದನೆ–30
ಪಡುವಲಕಾಯಿ–30
ಕ್ಯಾರೆಟ್‌–40
ದಪ್ಪ ಮೆಣಸಿನಕಾಯಿ–40
ಬೀಟ್‌ರೂಟ್‌–50
ಬೀನ್ಸ್‌–30
ಟೊಮ್ಯಾಟೊ–30
ಹಸಿ ಮೆಣಸಿನಕಾಯಿ–40
ಬಜ್ಜಿ ಮೆಣಸಿನಕಾಯಿ–30
ಹಾಗಲ–50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT