ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಕ್ಷೇತ್ರ ಬದಲಾವಣೆಗೆ ವಿರೋಧ: ಕುಂಭಾಪುರ ಕಾಲೊನಿ ನಿವಾಸಿಗಳ ಪ್ರತಿಭಟನೆ

ಕುಂಭಾಪುರ ಕಾಲೊನಿ ನಿವಾಸಿಗಳ ಪ್ರತಿಭಟನೆ
Last Updated 6 ಜನವರಿ 2023, 7:06 IST
ಅಕ್ಷರ ಗಾತ್ರ

ರಾಮನಗರ: ರಾಮನಗರ ತಾಲ್ಲೂಕಿನ ಕುಂಭಾಪುರ ಕಾಲೊನಿಯನ್ನು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ವರ್ಗಾಯಿಸಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಉದ್ದೇಶವನ್ನು ವಿರೋಧಿಸಿ ಅಲ್ಲಿನ ನಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಚೇರಿಗಳ ಸಂಕಿರ್ಣದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ವಾಸ ಸ್ಥಳವನ್ನು ರಾಮನಗರ ತಾಲೂಕು ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲೇ, ಅದೇ ಜಿಲ್ಲಾ ಪಂಚಾಯ್ತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದಲ್ಲೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ತೀರಾ ಇತ್ತೀಚೆಗೆ ತನ್ನ ಪ್ರಕಟಣೆಯಲ್ಲಿ ರಾಮನಗರ ಜಿಲ್ಲಾ ಪಂಚಾಯ್ತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕೈಗೊಂಡಿದ್ದು ಕುಂಭಾಪುರ ಕಾಲೊನಿಯನ್ನು ಹೊಂಗನೂರು ಜಿ.ಪಂ. ಚುನಾವಣಾ ಕ್ಷೇತ್ರಕ್ಕೆ ವರ್ಗಾಯಿಸಿದೆ. ಈ ವಿಚಾರದಲ್ಲಿ ಗ್ರಾಮಸ್ಥರು ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಇದೀಗ ಆಯೋಗ ಪ್ರಕಟಣೆಯನ್ನು ಹೊರಡಿಸಿ ಆಕ್ಷೇಪವನ್ನು ಆಹ್ವಾನಿಸಿದೆ. ಆಯೋಗ ತನ್ನ ಈ ನಿರ್ಣಯವನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆಯೋಗದ ಪ್ರಕಟಣೆಗೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಆಯೋಗ ತಮ್ಮ ಮನವಿಯನ್ನು ಪರಿಗಣಿಸದಿದ್ದರೆ ಇದೇ 9ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದಾಗಿ ಕಾಲೊನಿಯ ನಿವಾಸಿಗಳು ಎಚ್ಚರಿಸಿದರು.

ಬೆಂಬಲ: ಪ್ರತಿಭಟನಾಕಾರಿಗೆ ಬೆಂಬಲ ವ್ಯಕ್ತಪಡಿಸಿ ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಕುಂಭಾಪುರ ಕಾಲೊನಿ ರಾಮನಗರ ಜಿಲ್ಲಾ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಆದರೆ ಆಯೋಗ ಈ ಕಾಲೊನಿಯನ್ನು 22 ಕಿಮಿ ದೂರ ಇರುವ ಹೊಂಗನೂರು ಕ್ಷೇತ್ರಕ್ಕೆ ವರ್ಗಾಯಿಸಿರುವುದು ಅವೈಜ್ಷಾನಿಕ.ಕೂಡಲೇ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಿರಣ್, ಪಾರ್ಥ, ಕುಂಭಾಪುರ ಬಾಬು, ವೆಂಕಟೇಶ್, ಕೃಷ್ಣಪ್ಪ, ರಾಜು ನಾಯಕ, ಜಯಮ್ಮ, ಹೊನ್ನಮ್ಮ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT