ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜಿಲ್ಲಾ ಅಧ್ಯಕ್ಷರ ವಿರುದ್ಧ ಆಕ್ರೋಶ

ರಾಜೀನಾಮೆ ನೀಡಲು ಮುಖಂಡರ ಆಗ್ರಹ
Last Updated 2 ಮೇ 2021, 5:02 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ಮತ್ತು ತಂಡದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ರಮೇಶ್ ಒತ್ತಾಯಿಸಿದರು.

‘ಒಟ್ಟು 23 ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳು 2,397 ಮತ ಪಡೆಯಲು ಮಾತ್ರ ಸಫಲರಾಗಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ ಅಂದಿನ ಅಧ್ಯಕ್ಷ ಎಂ. ರುದ್ರೇಶ್ ನೇತೃತ್ವದಲ್ಲಿ ಸಂಘಟಿತ ಹೋರಾಟ ನಡೆಸಿ 2 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ, ಇಂದು ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್‍ನಾರಾಯಣ ಗೌಡ ಅವರ ದ್ವೇಷದ ರಾಜಕಾರಣದಿಂದಾಗಿ 18 ಅಭ್ಯರ್ಥಿಗಳಿಗೆ ಠೇವಣಿಯೇ ಸಿಕ್ಕಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘‍ಹುಲುವಾಡಿ ದೇವರಾಜು ತಮಗೆ ಬೇಕಾದವರಿಗೆ ಟಿಕೆಟ್‌ ನೀಡಿದ್ದು, ಪ್ರಚಾರಕ್ಕೆ ಸಹ ಬರಲಿಲ್ಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಕೇವಲ ಚುನಾವಣಾ ಫಂಡ್‌ಗಾಗಿ 13ನೇ ವಾರ್ಡಿನಿಂದ ಸ್ಪರ್ಧೆ ಮಾಡಿ 11 ಮತ ಪಡೆದಿದ್ದಾರೆ. ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಸಹ ನೇಮಕ ಮಾಡದೇ ಪಕ್ಷದ ವರ್ಚಸ್ಸಿಗೆ ಮಸಿ ಬಳಿದಿದ್ದಾರೆ’ ಎಂದು ದೂರಿದರು.

1ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯ ಪತಿ ನಂದೀಶ್ ಮಾತನಾಡಿ, ‘ನನ್ನ ಪತ್ನಿ ಪರ ಪ್ರಚಾರಕ್ಕೆ ಜಿಲ್ಲಾ ಅಧ್ಯಕ್ಷರು ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ’ ಎಂದು ದೂರಿದರು.

31ನೇ ವಾರ್ಡಿನ ಟಿಕೆಟ್ ಆಕಾಂಕ್ಷಿ ಮಲ್ಲೇಶ್ ಎಂಬುವರು ಮಾತನಾಡಿ, ‘ನಾವು ರುದ್ರೇಶ್ ಬೆಂಬಲಿಗರು ಎಂಬ ಕಾರಣಕ್ಕೆ ದೇವರಾಜು ಟಿಕೆಟ್ ನಿರಾಕರಿಸಿದರು. ಇವರಿಗೆ ಪಕ್ಷ ಸಂಘಟನೆಗಿಂತ ದ್ವೇಷದ ರಾಜಕಾರಣ ಮುಖ್ಯವಾಗಿದೆ’ ಎಂದು ದೂರಿದರು.

ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂಗನಬಸವನದೊಡ್ಡಿ ಮಹದೇವಯ್ಯ ಮಾತನಾಡಿ, ‘ನಮ್ಮ ಗ್ರಾಮದಲ್ಲಿ ಅವಿರೋಧ ಆಯ್ಕೆ ಆಗುತ್ತಿದ್ದ ಬಿಜೆಪಿ ಸದಸ್ಯರ ವಿರುದ್ದ ಮತ್ತೊಬ್ಬ ಕಾರ್ಯಕರ್ತರ ಪತ್ನಿಯನ್ನು ನಿಲ್ಲಿಸಿದರು. ಇಂತಹ ದ್ವೇಷದ ರಾಜಕಾರಣ ಮಾಡುವವರನ್ನು ಪಕ್ಷದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಗ್ರಾ.ಪಂ.ನ 6 ಬಿಜೆಪಿ ಬೆಂಬಲಿತರು ಕಾಂಗ್ರೆಸ್ ಸೇರುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಕಿರಣ್ ಕುಮಾರ್, ಗ್ರಾ.ಪಂ. ಸದಸ್ಯ ಶಿವಕುಮಾರ್, ಎಪಿಎಂಸಿ ನಾಮ ನಿರ್ದೇಶಿತ ಸದಸ್ಯ ಚಿಕ್ಕಣ್ಣ, ಮುಖಂಡರಾದ ಶಿವಸ್ವಾಮಿ, ಭೂಪತಿ, ಸಿದ್ದಪ್ಪಾಜಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT