ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ

ಸೌಲಭ್ಯ ಸಿಗದೆ ಸಾರ್ವಜನಿಕರ ಕಿರಿಕಿರಿ * ನಿಯಂತ್ರಿಸಲು ಸಿಬ್ಬಂದಿ ಕೊರತೆ
ವಿವೇಕ್ ಕುದೂರು
Published 8 ಏಪ್ರಿಲ್ 2024, 4:56 IST
Last Updated 8 ಏಪ್ರಿಲ್ 2024, 4:56 IST
ಅಕ್ಷರ ಗಾತ್ರ

ಕುದೂರು: ವಾಣಿಜ್ಯ ಕೇಂದ್ರವಾದ ಕುದೂರು ಶರವೇಗದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ ಹಾಗೂ ಪಟ್ಟಣದ ಬೆಳವಣಿಗೆಗೆ ತಕ್ಕಂತೆ ಸೌಲಭ್ಯ ಸಿಗದೆ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಪಟ್ಟಣದ ಕಿರಿದಾದ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡುವ ದ್ವಿಚಕ್ರ ವಾಹನಗಳು, ಕಾರುಗಳ ನಡುವೆ ಬಸ್ ಸಾಗಬೇಕಿದೆ. ತಾಲ್ಲೂಕು ಕೇಂದ್ರದಷ್ಟೇ ವಿಸ್ತಾರವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ಆದರೆ, ಪಟ್ಟಣದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಜಾಗ ಕಲ್ಪಿಸದಿರುವುದು ಸಮಸ್ಯೆಗೆ ಕಾರಣ ಎಂಬುದು ನಾಗರಿಕರ ಅಳಲು.

ಇಲ್ಲಿನ ಸ್ಥಳೀಯ ಸಂಸ್ಥೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಲು ಸಿದ್ಧತೆಯಲ್ಲಿದೆ. ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಅಧಿಕವಾಗಿದೆ. ಪಟ್ಟಣದಲ್ಲಿ ಪೊಲೀಸ್ ಠಾಣೆ ಇದ್ದರೂ ನಿಯಮ ಉಲ್ಲಂಘನೆ ನಿಯಂತ್ರಿಸಲು ಸಿಬ್ಬಂದಿ ಕೊರತೆ ಇದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಪೊಲೀಸರು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದರೆ ಸವಾರರು ನಿಯಮ ಪಾಲಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ವಾಹನ ಸವಾರರು ಹೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಬಸ್ ನಿಲ್ದಾಣದಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಿದ್ದು ಬಿಟ್ಟರೆ ಒಮ್ಮೆಯೂ ಫಲಕದಲ್ಲಿದ್ದಂತೆ ವಾಹನಗಳಿಲ್ಲದಿರುವುದು ಕಂಡಿಲ್ಲ ಎನ್ನುತ್ತಾರೆ ಅಂಗಡಿ ಮಾಲೀಕರು. ಯಾವ ಉದ್ದೇಶಕ್ಕಾಗಿ ನೋ ಪಾರ್ಕಿಂಗ್ ಫಲಕ ಅಳವಡಿಸಿದ್ದಾರೆ ಎಂದು ಅಂಗಡಿಯವರು ಪ್ರಶ್ನಿಸುತ್ತಾರೆ.

ಬಸ್ ನಿಲ್ದಾಣದಲ್ಲಿ ಉಂಟಾಗುವ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅನೇಕ ಬಾರಿ ಪೊಲೀಸರು ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಒಂದೆರಡು ದಿನ ಪಾಲನೆಯಾಗುವ ನಿಯಮ ಮೂರನೇ ದಿನಕ್ಕೆ ಮತ್ತದೇ ಕಥೆ ಎನ್ನುವಂತಾಗಿದೆ.

ಎಸ್.ಬಿ.ಐ ಬ್ಯಾಂಕ್ ಮುಂಭಾಗದಲ್ಲಿ ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಿರುವುದರಿಂದ ಬ್ಯಾಂಕಿಗೆ ಬರುವ ಗ್ರಾಹಕರು ಪರಿತಪಿಸುತ್ತಿದ್ದಾರೆ. ಇದನ್ನು ಸರಿಪಡಿಸುವಂತೆ ಬ್ಯಾಂಕ್ ಮ್ಯಾನೇಜರ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರೂ ಪೊಲೀಸರು ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ಕಾರುಗಳ ಪಾರ್ಕಿಂಗ್‌ನಿಂದಾಗಿ ಬಸ್ ಚಾಲಕರು ಮುಂದಕ್ಕೆ ಸಾಗಲು ಸಾಧ್ಯವಾಗದೆ ಕಾರು ಚಾಲಕರು ಬರುವವರೆಗೂ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಕುದೂರು ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರು ನಿತ್ಯ ಮಾರುಕಟ್ಟೆ, ವಾಣಿಜ್ಯ ಮಳಿಗೆ, ಬ್ಯಾಂಕ್‌ಗಳಿಗೆ ಬರುತ್ತಿರುತ್ತಾರೆ. ಹೀಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಜಾಗ ಹುಡುಕುವುದೇ ಪ್ರತಿದಿನ ಸವಾಲಾಗಿ ಪರಿಣಮಿಸಿದೆ. ಬಸ್ ನಿಲ್ದಾಣದಲ್ಲಿ ಸುಮಾರು 40ಕ್ಕೂ ಹೆಚ್ಚು ಪಂಚಾಯಿತಿ ವಾಣಿಜ್ಯ ಮಳಿಗೆಗಳಿವೆ. ಆದರೆ, ಅಂಗಡಿಗಳಿಗೆ ಬರುವ ಗ್ರಾಹಕರು ವಾಹನ ನಿಲ್ಲಿಸಲು ಪಂಚಾಯಿತಿ ಸ್ಥಳಾವಕಾಶ ಕೊಡದಿರುವುದು ಸರಿಯಲ್ಲ. ಪಂಚಾಯಿತಿಯು ಗ್ರಾಹಕರಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ಕೋಡಿಹಳ್ಳಿ ರಾಜಣ್ಣ.

ಅನಧಿಕೃತ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಜತೆಗೆ ಪರವಾನಗಿ ಇಲ್ಲದೆ ತಳ್ಳುಗಾಡಿ, ಫರ್ನಿಚರ್ ಮಾರಾಟ, ಕಾರ್ ಲೋನ್ ಮೇಳಗಳಂತಹ ವಾಣಿಜ್ಯ ಉದ್ದೇಶಗಳಿಗೆ ಬಸ್ ನಿಲ್ದಾಣ ಬಳಸಿಕೊಳ್ಳುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಂಗಡಿ ಮಾಲೀಕರು ದೂರುತ್ತಾರೆ.

ಮುಖ್ಯರಸ್ತೆ ಹಾಗೂ ಬಸ್ ನಿಲ್ದಾಣ ಸಂಪೂರ್ಣವಾಗಿ ವಾಹನಗಳಿಂದ ತುಂಬಿರುತ್ತವೆ. ವಾಹನಗಳ ಪಾರ್ಕಿಂಗ್‌ಗೆ ಇದುವರೆಗೂ ಸ್ಥಳೀಯ ಪಂಚಾಯಿತಿ ಯೋಜನೆ ರೂಪಿಸಿಲ್ಲ. ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗೆ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರೂ ಪಂಚಾಯಿತಿ ಗಮನಹರಿಸಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪಾರ್ಕಿಂಗ್ ಸಂಬಂಧ ಹೇಳಿಕೆ ಪಡೆಯಲು ಕುದೂರು ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್‌ ನವೀನ್ ಅವರನ್ನು ಸಂಪರ್ಕಿಸಿದಾಗ; ‘ಪತ್ರಕರ್ತರಿಗೆ ಮಾಡಲು ಕೆಲಸವಿಲ್ಲ. ಕೇವಲ ಪೊಲೀಸರ ವಿರುದ್ಧ ಸುದ್ಧಿ ಮಾಡುವುದೇ ಕೆಲಸ. ಮೊದಲು ನಿಮ್ಮ ಕೆಲಸ ನೀವು ಮಾಡಿ‘ ಎಂದು ಪತ್ರಕರ್ತರ ವಿರುದ್ಧ ಕೆಂಡಕಾರಿದರು.

ನಂತರ ಎರಡು ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಲು ಪ್ರಯತ್ನಿಸಿದಾಗ ಎರಡು ನಂಬರ್‌ಗಳು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿತ್ತು. ಹೀಗಾಗಿ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿರುವ ವಾಹನಗಳು
ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿರುವ ವಾಹನಗಳು

ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿರುವ ವಾಹನಗಳು
ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿರುವ ವಾಹನಗಳು
ಪಾರ್ಕಿಂಗ್ ಸಮಸ್ಯೆ ಇದೆ. ಸೂಕ್ತ ಮಾಹಿತಿ ಇಲ್ಲದ ಕಾರಣ ವಾಹನ ಸವಾರರು ಮನಸ್ಸಿಗೆ ತೋಚಿದಂತೆ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ
ಪದ್ಮನಾಭ್ ನಾಗರಿಕ ಕುದೂರು
ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಜಾಗ ನಿಗದಿಪಡಿಸದಿರುವುದು ಬೇಸರದ ವಿಚಾರ. ಶೀಘ್ರ ಸ್ಥಳೀಯ ಪಂಚಾಯಿತಿ ಈ ಕುರಿತು ಕ್ರಮ ವಹಿಸಬೇಕಿದೆ
ಪಾನಿಪುರಿ ಶಂಕರ್ ಅಂಗಡಿ ಮಾಲೀಕ ಕುದೂರು
ಮುಂಬರುವ ದಿನಗಳಲ್ಲಿ ಬಸ್ ನಿಲ್ದಾಣದ ಅಂಗಡಿ ಮಳಿಗೆ ಹಿಂಭಾಗದಲ್ಲಿ ಶೆಡ್ ನಿರ್ಮಾಣ ಮಾಡಿ ಪೇ ಅಂಡ್ ಪಾರ್ಕ್ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ
ಪುರುಷೋತ್ತಮ್ ಪಿಡಿಒ ಕುದೂರು ಗ್ರಾಮ ಪಂಚಾಯಿತಿ
ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಂಬಂಧ ಪಂಚಾಯಿತಿ ಪಿಡಿಒ ಕರೆಸಿ ಸೂಕ್ತ ಸ್ಥಳ ನಿಗದಿಪಡಿಸಲು ನಿರ್ದೇಶಿಸಲಾಗುವುದು
ಪ್ರವೀಣ್ ಡಿವೈಎಸ್ಪಿ ಮಾಗಡಿ ಉಪ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT