ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ಕೊರೆಯಿಸಲು ಅನುಮತಿ ಕಡ್ಡಾಯ

ಅಂತರ್ಜಲ ಮಟ್ಟ ಕುಸಿತ ತಡೆಗೆ ಕ್ರಮ: ರಾಮನಗರ, ಕನಕಪುರ ತಾಲ್ಲೂಕಿನಲ್ಲಿ ಜಾರಿ
Last Updated 19 ಅಕ್ಟೋಬರ್ 2020, 16:02 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಹೀಗಾಗಿ ಅಂತರ್ಜಲ ನಿರ್ದೇಶನಾಲಯಯು ರಾಮನಗರ ಮತ್ತು ಕನಕಪುರ ತಾಲೂಕುಗಳನ್ನು ಅತೀ ಹೆಚ್ಚು ಅಂತರ್ಜಲ ಬಳಕೆ ತಾಲ್ಲೂಕುಗಳನ್ನಾಗಿ ಘೋಷಣೆ ಮಾಡಿದ್ದು, ಇಲ್ಲಿ ಇನ್ನು ಮುಂದೆ ಕೊಳವೆ ಬಾವಿ ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈ ಎರಡೂ ತಾಲ್ಲೂಕುಗಳಲ್ಲಿ ಶೇ 100 ಕ್ಕಿಂತ ಹೆಚ್ಚು ಅಂತರ್ಜಲವನ್ನು ಕೊಳವೆ ಬಾವಿಗಳ ಮೂಲಕ ಬಳಕೆ ಮಾಡಿಕೊಳ್ಳಲಾಗಿದೆ. ಅಂತರ್ಜಲ ವೃದ್ಧಿಸುವ ಸಲುವಾಗಿ ನಿರ್ದೇಶನಾಲಯ ಅನುಮತಿ ಕಡ್ಡಾಯಗೊಳಿಸಿ ಆದೇಶ ನೀಡಿದೆ. ಇದರ ಪ್ರಕಾರ ಯಾರೂ ಸಹ ಅನುಮತಿ ಪಡೆಯದೇ ಬೋರ್‌ವೆಲ್‌ಗಳನ್ನು ಕೊರೆಸುವಂತಿಲ್ಲ. ಒಂದೊಮ್ಮೆ ಮಾಡಿದ್ದೇ ಆದಲ್ಲಿ ದಂಡ ಕಟ್ಟಬೇಕಾಗುತ್ತದೆ.

ಏನಿದು ಅಧಿಸೂಚನೆ? ರಾಜ್ಯ ಅಂತರ್ಜಲ ನಿರ್ದೇಶನಾಲಯ, ಕೇಂದ್ರೀಯ ಅಂತರ್ಜಲ ಮಂಡಳಿಯೊಂದಿಗೆ ಸೇರಿ ರಾಜ್ಯದಲ್ಲಿ ನಾಲ್ಕು ವರ್ಷಗೊಳಿಗೊಮ್ಮೆ ಅಂತರ್ಜಲ ಸಂಪನ್ಮೂಲದ ಮೌಲ್ವೀಕರಣ ಮಾಡುತ್ತದೆ. ಅದರಂತೆ 2017ರ ಅಂತ್ಯಕ್ಕೆ ಮೌಲೀಕರಿಸಿದಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ರಾಮನಗರ ಮತ್ತು ಕನಕಪುರ ಅಂತರ್ಜಲ ಅತಿ ಬಳಕೆ ಎಂದು ಘೋಷಣೆ ಮಾಡಲಾಗಿದೆ. ಸಮಿತಿಯ ಪ್ರಕಾರ ವಾರ್ಷಿಕ ಅಂತರ್ಜಲ ಮರುಪೂರಣಕ್ಕಿಂತ, ಬಳಕೆಯ ಪ್ರಮಾಣವೇ ಹೆಚ್ಚಾಗಿದೆ.

ಈ ಎರಡು ತಾಲ್ಲೂಕುಗಳಲ್ಲಿ ಅಂತರ್ಜಲ ಬಳಕೆಯು ವಾರ್ಷಿಕ ಮರಪೂರಣ ಪ್ರಮಾಣದ ಶೇ 100ಕ್ಕಿಂತ ಹೆಚ್ಚು ಬಳಕೆ ಮಾಡಿಕೊಳ್ಳುತ್ತಿದೆ. ಉಳಿದ ಮಾಗಡಿ ತಾಲೂಕಿನಲ್ಲಿ ಕ್ಲಿಷ್ಟಕರ ವ್ಯಾಪ್ತಿಯಲ್ಲಿ (ಬಳಕೆ ಪ್ರಮಾಣ ಶೇ 90ರಿಂದ 100), ಇನ್ನು ಚನ್ನಪಟ್ಟಣ ಅರೇ ಕ್ಲಿಷ್ಟಕರ (ಶೇ 70ರಿಂದ90) ಇದೆ.

ನಿಯಮ ಏನೆನ್ನುತ್ತದೆ: ಕರ್ನಾಟಕ ಅಂತರ್ಜಲ 2004ರ ಅಧಿನಿಯಮದ ಪ್ರಕಾರ ಅತೀ ಬಳಕೆ ತಾಲ್ಲೂಕುಗಳಲ್ಲಿ ಪ್ರಾಧಿಕಾರದ ಅನುಮತಿ ಪಡೆಯಲು ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್ ಅಂತರದೊಳಗೆ ಬಾವಿ, ಕೊಳವೆಬಾವಿ ರಚಿಸಲು ಅವಕಾಶವಿರುವುದಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಯ ಕಾರಣ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಗತ್ಯವಿರುವ ಪ್ರಮಾಣದ ನೀರು ಪಡೆಯಲು ಲಿಖಿತ ರೂಪದಲ್ಲಿ ಅರ್ಜಿ ನೀಡಿ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಾವಿ ಕೊರೆಯಿಸಲು ಅನುಮತಿ ನೀಡಬಹುದಾಗಿರುತ್ತದೆ.

ಸಕ್ರಮಕ್ಕೆ ಅವಕಾಶ

ಒಂದೊಮ್ಮೆ ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಸಿದ್ದೇ ಆದಲ್ಲಿ, ಅಂತಹ ಬೋರ್‌ವೆಲ್‌ಗಳನ್ನು ಅಕ್ರಮ ಸಕ್ರಮ ಮಾಡಿಕೊಡಲು ಅಂತರ್ಜಲ ನಿರ್ದೇಶನಾಲಯ ಅವಕಾಶ ಮಾಡಿಕೊಟ್ಟಿದೆ. ಇದೇ 5ರಿಂದ ಈ ಯೋಜನೆ ಆರಂಭಗೊಂಡಿದ್ದು, 120 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ. ಒಂದೊಮ್ಮೆ ಸಾರ್ವಜನಿಕರು ಅನುಮತಿ ಪಡೆಯದೇ ಕೊಳವೆ ಬಾವಿ ಕೊರಿಸಿದ್ದಲ್ಲಿ, ಮನೆಯ ಉಪಯೋಗಕ್ಕೆ ಆದರೆ 50, ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರೆ 500 ಪಾವತಿ ಮಾಡಿ ಅಕ್ರಮವನ್ನು ಸಕ್ರಮಗೊಳಿಸಿಕೊಳ್ಳಬಹುದು. ನಿಗದಿತ ಅವಧಿ ಪೂರ್ಣಗೊಂಡ ಬಳಿಕ ಅರ್ಜಿ ಸಲ್ಲಿಸಿದರೆ ಹೆಚ್ಚುವರಿಯಾಗಿ 5 ಸಾವಿರ ದಂಡ ಪಾವತಿಸಬೇಕಾಗುತ್ತದೆ. ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಮಂದಿ ಹೀಗೆ ಕೊಳವೆ ಬಾವಿಗಳನ್ನು ಸಕ್ರಮಗೊಳಿಸಿಕೊಂಡಿದ್ದಾರೆ ಎನ್ನುತ್ತಾರೆ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳು.

---
ರಾಮನಗರ, ಕನಕಪುರ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚು ಬಳಕೆಯಲ್ಲಿದೆ. ಹೀಗಾಗಿ ಇಲ್ಲಿ ಇಲ್ಲಿ ಕೊಳವೆಬಾವಿ ಕೊರೆಯಿಸಲು ಅನುಮತಿ ಕಡ್ಡಾಯ.
-ಎಸ್.ಆರ್.ರಾಜಶ್ರೀ,ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ನಿರ್ದೇಶನಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT