ಗುರುವಾರ , ಮಾರ್ಚ್ 30, 2023
31 °C
ಹಸೀನಾ ಫರ್ಹೀನ್ ಉಪಾಧ್ಯಕ್ಷೆಯಾಗಿ ಆಯ್ಕೆ

ಚನ್ನಪಟ್ಟಣ ನಗರಸಭೆ ಅಧ್ಯಕ್ಷರಾಗಿ ಪ್ರಶಾಂತ್, ಹಸೀನಾ ಉಪಾಧ್ಯಕ್ಷೆಯಾಗಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಇಲ್ಲಿನ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಶಾಂತ್ ಅಧ್ಯಕ್ಷರಾಗಿ ಹಾಗೂ ಹಸೀನಾ ಫರ್ಹೀನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ನಿರೀಕ್ಷೆಯಂತೆ ಜೆಡಿಎಸ್ ಅಧಿಕಾರ ಪಡೆಯಿತು.

31 ಸದಸ್ಯರ ಬಲದ ನಗರಸಭೆಯಲ್ಲಿ ಜೆಡಿಎಸ್ 16 ಸ್ಥಾನಗಳನ್ನು ಪಡೆಯುವ ಮೂಲಕ ಸರಳ ಬಹುಮತ ಪಡೆದಿತ್ತು. ಉಳಿದಂತೆ ಕಾಂಗ್ರೆಸ್ 7, ಬಿಜೆಪಿ 7 ಹಾಗೂ ಒಬ್ಬರು ಪಕ್ಷೇತರ ವಿಜೇತರಾಗಿದ್ದರು. ಈ ಇಬ್ಬರನ್ನು ಹೊರತುಪಡಿಸಿ ಮತ್ತಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.

ಕಳೆದ 13 ವರ್ಷಗಳಿಂದ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆಯುವಲ್ಲಿ ವಿಫಲವಾಗಿತ್ತು. ಕಳೆದ ಬಾರಿ ಬಹುಮತ ಪಡೆದರೂ ಕಾಂಗ್ರೆಸ್‌ನ ತಂತ್ರಗಾರಿಕೆಯಿಂದ ಜೆಡಿಎಸ್ ಅಧಿಕಾರ ವಂಚಿತವಾಗಿತ್ತು. ಆ ವೇಳೆ ಕಾಂಗ್ರೆಸ್ ಶಾಸಕರಾಗಿದ್ದ ಸಿ.ಪಿ. ಯೋಗೇಶ್ವರ್ ಜೆಡಿಎಸ್‌ನ ಕೆಲವು ಸದಸ್ಯರನ್ನು ಕಾಂಗ್ರೆಸ್ ತೆಕ್ಕೆಗೆ ಎಳೆದುಕೊಂಡು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ಸು ಸಾಧಿಸಿದ್ದರು. ಈ ಬಾರಿ ಅಂತಹ ಯಾವುದೇ ತಂತ್ರಗಾರಿಕೆಗೆ ಆಸ್ಪದ ನೀಡದಂತೆ ಜೆಡಿಎಸ್ ಎಚ್ಚರಿಕೆವಹಿಸಿದ್ದ ಕಾರಣ ಅಧಿಕಾರ ಪಡೆಯುವಲ್ಲಿ ಸಫಲವಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ್ 26ನೇ ವಾರ್ಡ್‌ನಿಂದ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಹಸೀನಾ ಫರ್ಹೀನ್ 19ನೇ ವಾರ್ಡಿನಿಂದ ಜಯ ಸಾಧಿಸಿದ್ದರು. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಏ. 27ರಂದು ನಗರಸಭಾ ಚುನಾವಣೆ ನಡೆದು ಏ. 30ರಂದು ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಪ್ರಕಟಗೊಂಡು ಸುಮಾರು 6 ತಿಂಗಳು ಕಳೆದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಿತು. ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಕಾರಣ ಚುನಾವಣೆ ವಿಳಂಬವಾಗಿತ್ತು.

ಪ್ರವಾಸಕ್ಕೆ ತೆರಳಿದ್ದ ಸದಸ್ಯರು: ನಗರಸಭೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವ ಸುದ್ದಿ ಹರಡಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ತಮ್ಮ ಪಕ್ಷದಿಂದ ಜಯ ಸಾಧಿಸಿದ್ದ 16 ಮಂದಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶ್ರೀನಿವಾಸಮೂರ್ತಿಯನ್ನು ಹೊರತುಪಡಿಸಿ 15 ಮಂದಿಯನ್ನು ಪ್ರವಾಸಕ್ಕೆ ಕಳುಹಿಸಿದ್ದರು. ಶ್ರೀನಿವಾಸಮೂರ್ತಿ ಕಡೇ ಗಳಿಗೆಯಲ್ಲಿ ಪ್ರವಾಸದಿಂದ ಹಿಂದೆ ಸರಿದಿದ್ದ ಕಾರಣ ಕುತೂಹಲ ಮೂಡಿಸಿತ್ತು.

ಪ್ರವಾಸಕ್ಕೆ ತೆರಳಿದ್ದ 15 ಸದಸ್ಯರು ಬೆಳಿಗ್ಗೆ ನೇರವಾಗಿ ನಗರಸಭೆ ಆವರಣಕ್ಕೆ ಬಂದಿಳಿದರು. ಕಡೇ ಗಳಿಗೆಯಲ್ಲಿ ಶ್ರೀನಿವಾಸಮೂರ್ತಿ ಅವರನ್ನು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಮನವೊಲಿಸಿ ಕರೆತಂದು ತಮ್ಮ ಪಕ್ಷದವರೇ ಎರಡೂ ಸ್ಥಾನಗಳಲ್ಲಿ ಅಧಿಕಾರ ಪಡೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಚುನಾವಣಾ ಸಂದರ್ಭದಲ್ಲಿ ಹಾಜರಿದ್ದರೂ ಯಾವುದೇ ಕಸರತ್ತಿಗೆ ಕೈಹಾಕಲಿಲ್ಲ. ಹಾಗಾಗಿ, ಚುನಾವಣೆಯು ಯಾವುದೇ ಗೊಂದಲವಿಲ್ಲದೆ ಸಾಂಗವಾಗಿ ನೆರವೇರಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುನೀಲ್, ಪ್ರಮೋದ್ ನಗರಸಭಾ ಆವರಣಕ್ಕೆ ಬಂದರೂ ಬಂದಷ್ಟೇ ವೇಗವಾಗಿ ತೆರಳಿದರು. ಬಿಜೆಪಿ ಮುಖಂಡರಾರೂ ಕಾಣಿಸಿಕೊಳ್ಳಲಿಲ್ಲ.

ರಾಮನಗರ ಉಪ ವಿಭಾಗಾಧಿಕಾರಿ ಮಂಜುನಾಥ, ತಹಶೀಲ್ದಾರ್ ನಾಗೇಶ್ ಮತ್ತು ನಗರಸಭೆ ಪೌರಾಯುಕ್ತ ಶಿವನಂಕಾರಿಗೌಡ ಚುನಾವಣೆ ಉಸ್ತುವಾರಿವಹಿಸಿದ್ದರು. ಜೆಡಿಎಸ್ ಅಧಿಕಾರ ಪಡೆಯುತ್ತಿದ್ದಂತೆ ಹೊರಗೆ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ, ತಮಟೆ ಬಾರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ವಡ್ಡರಹಳ್ಳಿ ರಾಜಣ್ಣ, ರೇಖಾ ಉಮಾಶಂಕರ್ ಸೇರಿದಂತೆ ಜೆಡಿಎಸ್ ಮುಖಂಡರು ಹಾಜರಿದ್ದು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು