ಶುಕ್ರವಾರ, ಫೆಬ್ರವರಿ 21, 2020
18 °C
ಮಾಗಡಿ: ಖರೀದಿ ವೇಳೆ ವಂಚನೆ ಆರೋಪ

ರಾಗಿ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಮೂರು ದಿನಗಳ ಒಳಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಾಗಿ ಬೆಳೆದಿರುವ ರೈತರ ಸಭೆ ಕರೆದು, ರಾಗಿ ಖರೀದಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ತಿಳಿಸಿದರು.

ಎನ್‌ಇಎಸ್‌ ಬಡಾವಣೆಯಲ್ಲಿ ಇರುವ ರಾಗಿ ಖರೀದಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಗಿ ಬೆಳೆದಿರುವ ರೈತರಿಂದ ತಲಾ 15 ಕ್ವಿಂಟಲ್‌ ಖರೀದಿಸುವುದಾಗಿ ಪ್ರಕಟಣೆ ಹೊರಡಿಸಿದ್ದರು. ಈಗ ರೈತರಿಂದ ಕೇವಲ 10 ಕ್ವಿಂಟಲ್‌ ಮಾತ್ರ ರಾಗಿ ಖರೀದಿಸುವುದಾಗಿ ತಿಳಿಸಿರುವುದು, ಸರ್ಕಾರ ರೈತರಿಗೆ ಮಾಡುತ್ತಿರುವ ವಂಚನೆ. ಮಾವು ಮತ್ತು ತೆಂಗಿನ ತೋಟಗಳಲ್ಲಿ ಬೆಳೆದಿರುವ ರಾಗಿ ಖರೀದಿಸುವುದಿಲ್ಲ ಎಂದು ಖರೀದಿದಾರರು ರೈತರನ್ನು ಹಿಂದಕ್ಕೆ ಕಳಿಸುತ್ತಿದ್ದಾರೆ. ಕಂದಾಯ ಅಧಿಕಾರಿಗಳು ಬೆಳೆ ಸರ್ವೆ ಮಾಡುವಾಗ ಯಾವುದೋ ಎತ್ತರದ ಸ್ಥಳದಲ್ಲಿ ನಿಂತು ಒಂದಿಬ್ಬರು ರೈತರ ರಾಗಿ ಬೆಳೆ ವೀಕ್ಷಿಸಿ, ರೈತರಿಗೆ ಅನ್ಯಾಯ ಮಾಡಿದ್ದಾರೆ. ಕೆಲವು ರೈತರ ಪಹಣಿ ಬೆಳೆಕಾಲಂನಲ್ಲಿ ಬೆಳೆಇಲ್ಲ (no crops) ಎಂದು ಕಂಪ್ಯೂಟರ್‌ಗಳಲ್ಲಿ ನಮೂದಿಸಿದ್ದಾರೆ’ ಎಂದು ಆರೋಪಿಸಿದರು.

‘ಪಹಣಿಯಲ್ಲಿ ಬೆಳೆ ಇಲ್ಲ ಎಂದು ದಾಖಲಿಸಿರುವ ರೈತರಿಂದ ರಾಗಿ ಖರೀದಿಸುತ್ತಿಲ್ಲ. ಅಕ್ಕಿತುಂಬುವ ಗೋಣಿಚೀಲದಲ್ಲಿಯೇ ರಾಗಿ ತರಬೇಕು ಎನ್ನುತ್ತಿದ್ದಾರೆ. ಮೊದಲು ಪ್ಲಾಸ್ಟಿಕ್‌ ಚೀಲದಲ್ಲಿ ರಾಗಿ ತಂದರೂ ಖರೀದಿಸುತ್ತಿದ್ದರು. ಅಲ್ಲದೆ ತೂಕದಲ್ಲೂ 2 ಕೆ.ಜಿ. ರಾಗಿಯನ್ನು ಹೆಚ್ಚುವರಿಯಾಗಿ ಪಡೆದು ರೈತರಿಗೆ ವಂಚನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸರ್ಕಾರ ಮತ್ತು ಅಧಿಕಾರಿಗಳು ಅನ್ನದಾತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ರೈತರು ದಿಕ್ಕಾರ ಕೂಗಿ ಧರಣಿ ನಡೆಸಿದರು. ಖರೀದಿ ಕೇಂದ್ರದ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ, ಕಾರ್ಯದರ್ಶಿ ಮಂಜುನಾಥ, ರೈತ ಮುಖಂಡರಾದ ದೊಡ್ಡರಂಗಯ್ಯ, ರಂಗಪ್ಪ, ಪಟೇಲ್‌ ಹನುಮಂತಯ್ಯ, ರಂಗಸ್ವಾಮಯ್ಯ, ಯೋಗೇಶ್‌, ಗಿರಿಧರ್‌, ಜಯಣ್ಣ, ಮಾರೇಗೌಡ, ನಾರಾಯಣಪ್ಪ, ಶ್ರೀನಿವಾಸ್‌, ಮತ್ತದ ಹನುಂತರಾಯಪ್ಪ, ಗಿರೀಶ್‌ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ರಾಗಿ ಖರೀದಿ ಕೇಂದ್ರದ ಮುಖ್ಯಸ್ಥ ಶ್ರೀಧರ್‌ ರೈತರ ಮನವೊಲಿಸುವ ಯತ್ನ ಮಾಡಿದರು. ಎ.ಎಸ್‌.ಐ ಮಲ್ಲೇಶಯ್ಯ, ಪೇದೆ ರಾಜಣ್ಣ ಹಾಗೂ ಪೊಲೀಸು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ರೈತರು ಮತ್ತು ರಾಗಿ ಖರೀದಿ ಕೇಂದ್ರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು. 

ರಾಗಿ ಖರೀದಿ ಕೇಂದ್ರ ಮುಖ್ಯಸ್ಥ ಶ್ರೀಧರ್‌ ಮಾತನಾಡಿ, ‘ಸರ್ಕಾರಿ ಆದೇಶದಂತೆ ರಾಗಿ ಖರೀದಿಸುತ್ತಿದ್ದೇವೆ. ರೈತರಿಂದ ಹೆಚ್ಚುವರಿಯಾಗಿ ರಾಗಿ ಪಡೆದಿಲ್ಲ. ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುತ್ತಿದ್ದೇವೆ. ಮೇಲಧಿಕಾರಿಗಳ ಗಮನಕ್ಕೆ ತಂದು 3 ದಿನಗಳ ಒಳಗೆ ತಹಶೀಲ್ದಾರ್‌ ಎನ್‌.ರಮೇಶ್‌ ಅಧ್ಯಕ್ಷತೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಮತ್ತು ರಾಗಿ ಬೆಳೆಗಾರರ ಸಭೆ ಕರೆದು ಗೊಂದಲ ನಿವಾರಿಸಿ, ರಾಗಿ ಖರೀದಿಗೆ ಅನುವು ಮಾಡಿಕೊಡಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)