ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಕೊಳವೆಬಾವಿ ಕೊರೆಯಿಸಲು ಆಗ್ರಹಿಸಿ ಪ್ರತಿಭಟನೆ

ರಘುವನಪಾಳ್ಯದಲ್ಲಿ ಕುಡಿಯುವ ನೀರಿನ ಕೊರತೆ l ಮತ್ತೊಂದು ಕೊಳವೆಬಾವಿ ವಿಫಲ
Last Updated 12 ಏಪ್ರಿಲ್ 2020, 13:02 IST
ಅಕ್ಷರ ಗಾತ್ರ

ಮಾಗಡಿ: ತಿಪ್ಪಸಂದ್ರ ಹೋಬಳಿಯ ರಘುವನ ಪಾಳ್ಯದ ಗ್ರಾಮಸ್ಥರು ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಭೂಗರ್ಭ ವಿಜ್ಞಾನಿಗಳು ನಿಗದಿಪಡಿಸಿದ ಸ್ಥಳದಲ್ಲಿ ಕೊಳವೆಬಾವಿಯನ್ನು ಭಾನುವಾರ ಕೊರೆಯಲಾಗಿತ್ತು. 910 ಅಡಿ ಕೊರೆದರೂ ನೀರು ಲಭ್ಯವಾಗಲಿಲ್ಲ. ಈ ವೇಳೆ ಜಮಾಯಿಸಿದ ಗ್ರಾಮಸ್ಥರು ಮತ್ತೊಂದು ಕಡೆ ಬಾವಿ ಕೊರೆಯಿಸಿ ನೀರಿನ ಬವಣೆ ನೀಗಿಸಬೇಕು. ಅಲ್ಲಿಯವರೆಗೂ ಲಾರಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಬೋರ್‌ವೆಲ್‌ ಕೊರೆಯುವ ಲಾರಿಯನ್ನು ಅಡ್ಡಗಟ್ಟಿದ ಗ್ರಾಮಸ್ಥರು, ಹನಿ ನೀರಿಗಾಗಿ ಕಷ್ಟಪಡುತ್ತಿದ್ದೇವೆ. ಕೂಡಲೇ ಸರಿಯಾದ ಜಾಗದಲ್ಲಿ ಕೊಳವೆಬಾವಿ ಕೊರೆಸಬೇಕು. ತುರ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡ ರಾಜಣ್ಣ ಮಾತನಾಡಿ, ‘30 ವರ್ಷಗಳಿಂದಲೂ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಚರಂಡಿ, ಬಸ್‌ ಸೌಲಭ್ಯ ಮತ್ತು ನಿರಂತರ ಜ್ಯೋತಿಯಡಿಯಲ್ಲಿ ವಿದ್ಯುತ್‌ ಸರಬರಾಜು‌ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಯಾರೊಬ್ಬರು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘₹ 17 ಲಕ್ಷ ವೆಚ್ಚದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಕಟ್ಟಿಸಿ 2 ವರ್ಷ ಕಳೆದರೂ ಅದಕ್ಕೆ ನೀರು ತುಂಬಿಸಿಲ್ಲ. ಇರುವ ಏಕೈಕ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಚಿಕ್ಕಹಳ್ಳಿ ಮತ್ತು ಹುಳ್ಳೇನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿರುವ ಗ್ರಾಮವು ತಾಲ್ಲೂಕಿನ ಗಡಿಯಲ್ಲಿದೆ. ಹೀಗಾಗಿಗ್ರಾಮದ ಬಗ್ಗೆ ಎರಡೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದರು.

ನೀರು ತರಲು ಪಕ್ಕದ ಜಿಲ್ಲೆಗೆ:‘ರೈತರ ತೋಟಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವ ಕಾರಣ ತುಮಕೂರಿನ ಕುಣಿಗಲ್‌ ತಾಲ್ಲೂಕಿನ ಗ್ರಾಮಗಳ ತೋಟದಲ್ಲಿನ ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸಲು ಹರಸಾಹಸ ಪಡುತ್ತಿದ್ದೇವೆ. ತಿಪ್ಪಸಂದ್ರವನ್ನು ಜಿಲ್ಲಾ ಪಂಚಾಯಿತಿ ₹ 35 ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಜಿಲ್ಲಾಪಂಚಾಯಿತಿ ಸದಸ್ಯರು ಹೇಳಿದ್ದಾರೆ. ಆದರೆ, ನಮ್ಮಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ. ಕುಡಿಯುವ ನೀರು ಒದಗಿಸಿ’ ಎಂದು ಮನವಿ ಮಾಡಿದರು.

ಬೈರವೇಶ್ವರ ದೇವಾಲಯದ ಪೂಜಾರಿ ಅಜ್ಜಪ್ಪ ಮಾತನಾಡಿ, ಶಾಸಕ ಎ.ಮಂಜುನಾಥ ಅವರು ಮತ್ತೊಂದು ಕೊಳವೆಬಾವಿ ಕೊರೆಸಿ ನೀರು ಒದಗಿಸಬೇಕು ಎಂದರು.

ಗ್ರಾಮದ ಮುಖಂಡರಾದ ಉಮೇಶ್‌, ಗಂಗಮ್ಮ, ಬಾಲರಾಜು, ಚಿಕ್ಕಮರಿ, ಉದಯ್‌ಕುಮಾರ್‌, ಗೋವಿಂದ, ನಾಗರಾಜು, ಪ್ರಕಾಶ್‌, ಮುನಿಸ್ವಾಮಿ, ಬೀರಪ್ಪ, ತಿಮ್ಮಯ್ಯ,ಜಗದೀಶ್‌, ಗಂಗಣ್ಣ, ರತ್ನಮ್ಮ, ಗಂಗಚಿಕ್ಕಮ್ಮ, ಪಾಪಣ್ಣ, ನಂಜಮ್ಮ, ಗಂಗಮ್ಮ, ರಮ್ಯ, ರಾಧಾ, ದಾಸೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT