ಜಾಗೃತಿ ಸಮಿತಿ ಪುನರ್ ರಚನೆಗೆ ಒತ್ತಾಯ

ರಾಮನಗರ: ಜಿಲ್ಲಾ ಜಾಗೃತಿ ಸಮಿತಿಯನ್ನು ಪುನರ್ ರಚಿಸುವಂತೆ ಒತ್ತಾಯಿಸಿ ದಲಿತ ಮುಖಂಡರು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು. ‘ಸಮಿತಿಗೆ ಏಕಪಕ್ಷೀಯವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹಿರಿತನ, ಜನಪ್ರತಿನಿಧಿಗಳ ಶಿಫಾರಸು ಮೊದಲಾದ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
ಕಾಂಗ್ರೆಸ್ನ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ ‘ಸಮಿತಿಗೆ 40–50 ಅರ್ಜಿಗಳು ಸಲ್ಲಿಕೆಯಾಗಿವೆ. ಜನಪ್ರತಿನಿಧಿಗಳು ಕೆಲವರ ಹೆಸರನ್ನು ಶಿಫಾರಸು ಮಾಡಿದ್ದು, ಅದನ್ನೂ ಪರಿಗಣಿಸಿಲ್ಲ. ಸಮಿತಿ ರಚನೆ ವೇಳೆ ದಲಿತ ನಾಯಕರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರನ್ನು ಪರಿಗಣಿಸಬೇಕಾಗಿತ್ತು. ಕಾನೂನು ಸಲಹೆಗಳನ್ನು ಗಾಳಿಗೆ ತೂರಿ ಸಮಿತಿ ರಚನೆ ಮಾಡಲಾಗಿದೆ’ ಎಂದು ದೂರಿದರು.
‘ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಉಪನಿರ್ದೇಶಕಿ ಲಲಿತಾ ಬಾಯಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಬೆರಳಚ್ಚುಗಾರ ಕೆಂಚಯ್ಯರವರ ನಿರ್ಧಾರವೇ ಅಂತಿಮವಾದಂತಿದೆ. ಕೆಂಚಯ್ಯ ಜಿಲ್ಲಾಧಿಕಾರಿಗಳ ದಿಕ್ಕು ತಪ್ಪಿಸಿ ಸಮಿತಿಗೆ 8 ಮಂದಿಯನ್ನು ಆಯ್ಕೆ ಮಾಡಿದ್ದಾರೆ’ ಎಂದು ಆರೋಪಿಸಿದರು.
ಉಪನಿರ್ದೇಶಕಿ ಲಲಿತಾ ಬಾಯಿ ಅವರನ್ನು ಬೇರೆ ಇಲಾಖೆ ವರ್ಗಾವಣೆ ಮಾಡಬೇಕು. ಬೆರಳಚ್ಚುಗಾರ ಕೆಂಚಯ್ಯ ಅವರನ್ನು ಮಾತೃ ಇಲಾಖೆಗೆ ಕಳುಹಿಸಬೇಕು ಅಥವಾ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ದಲಿತ ಜಾಗೃತಿ ಸಮಿತಿಯನ್ನು ಪುನರ್ ರಚನೆ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ಶಿವಶಂಕರ್,ರಾಜು, ಚೆಲುವರಾಜು, ವೆಂಕಟೇಶ್, ಗಣೇಶ್, ಮಾರುತಿ, ಶಿವು ಮತ್ತಿತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.