ಪುನೀತ್ ಸ್ಮರಣಾರ್ಥ ಗೀತ ಗಾಯನ ಸ್ಪರ್ಧೆ

ಮಾಗಡಿ: ‘ಒಮ್ಮೆ ಭೇಟಿಯಾದವರ ಮನಸ್ಸಿನಲ್ಲಿ ಸ್ಮರಣೀಯ ನೆನಪುಗಳನ್ನು ಮೂಡಿಸುವ ವಿಶೇಷ ವ್ಯಕ್ತಿತ್ವ ನಟ ಪುನೀತ್ ರಾಜ್‌ಕುಮಾರ್ ಅವರಲ್ಲಿತ್ತು. ಕನ್ನಡ ಚಿತ್ರರಂಗದ ಅಂಗಳದಲ್ಲಿ ಆಡಿ ಬೆಳೆದ ಮಗು ಇಷ್ಟು ಬೇಗ ಮರಳಿಬಾರದ ಲೋಕಕ್ಕೆ ತೆರಳಿದ್ದು ವಿಷಾದನೀಯ’ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಎನ್. ಮಲ್ಲೇಶಯ್ಯ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಟ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಶನಿವಾರ ಸ್ವರ ಸಂಗಮ ಸಂಸ್ಥೆಯಿಂದ ನಡೆದ ಗೀತ ಗಾಯನ ಪ್ರತಿಭಾನ್ವೇಷಣಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪುನೀತ್ ಎಲ್ಲರನ್ನೂ ಪ್ರೀತಿಸುವ ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು. ಮಗು ಸಹಜ ಕುತೂಹಲ ಅವರಲ್ಲಿತ್ತು. ಅಕ್ಕರೆಯ ಎಲ್ಲೆ ಮೀರಿದ ವ್ಯಕ್ತಿತ್ವ ಹೊಂದಿದ್ದರು. ಪ್ರವಾಸ ಮಾಡುವಾಗ ಗ್ರಾಮಾಂತರ ಪ್ರದೇಶದಲ್ಲಿ ಕಾರು ನಿಲ್ಲಿಸಿ ಹೊಲ, ಗದ್ದೆಗಳಿಗೆ ಇಳಿದು ರೈತರು, ದನ, ಕುರಿ ಕಾಯುವವರನ್ನು ಆತ್ಮೀಯತೆಯಿಂದ ಮಾತನಾಡಿ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು.
ರಂಗ ಕಲಾವಿದ ಕ್ಯಾತ್ಸಂದ್ರ ಶ್ರೀನಿವಾಸ್, ಚಿತ್ರ ಕಲಾವಿದ ಚಂದ್ರಶೇಖರ್, ವಯೊಲಿನ್ ವಾದಕ ಅಮರ್‌ನಾಥ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಸಂಗೀತ ಶಿಕ್ಷಕಿಯರಾದ ವತ್ಸಲಾ ಗೋವಿಂದರಾಜನ್, ವಸಂತಲಕ್ಷ್ಮೀ ಸುರೇಂದ್ರನಾಥ್, ಸ್ವರ ಸಂಗಮದ ಮುರಳಿಕೃಷ್ಣ, ಲಾವಣಿಕಾರ ನಾಗರಾಜು, ಜ್ಯೋತಿ ನಗರದ ಧನಂಜಯ, ಜನಪದ ಕಲಾವಿದ ಜುಟ್ಟನಹಳ್ಳಿ ರವಿಕುಮಾರ್ ಅವರು ಪುನೀತ್ ಚಿತ್ರರಂಗದಲ್ಲಿ ಬಿಟ್ಟು ಹೋಗಿರುವ ನೆನಪುಗಳನ್ನು ಮೆಲುಕು ಹಾಕಿದರು. ಶಿಕ್ಷಕಿ ಗಾಯತ್ರಿ (ಪ್ರಥಮ), ವಿದ್ಯಾರ್ಥಿನಿ ಪಲ್ಲವಿ (ದ್ವಿತೀಯ), ಡಾ.ಜಗದೀಶ್ ನಡುವಿನಮಠ (ತೃತೀಯ) ಬೆಳ್ಳಿ ಪದಕ ಪಡೆದರು. ಮೋಕ್ಷಿತಾ, ಅಕ್ಷಯ್, ಅಪರ್ಣ, ರವಿಕುಮಾರ್, ನಾಗರತ್ನಾ, ಅರ್ಪಿತಾ, ಸುನೀತಾ (ಸಮಾಧಾನಕರ) ಬಹುಮಾನ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.