ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಸೇರಿ ವಿವಿಧೆಡೆ ವರುಣ ಕೃಪೆ

ಬೆಳಿಗ್ಗೆ ಜಡಿ ಮಳೆ; ಸಂಜೆ ಭಾರಿ ಗಾಳಿ ಸಮೇತ ಸಾಧಾರಣ ಮಳೆ
Published 9 ಮೇ 2024, 7:50 IST
Last Updated 9 ಮೇ 2024, 7:50 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಬುಧವಾರ ಬೆಳಿಗ್ಗೆ ಮತ್ತು ಸಂಜೆ ವಿವಿಧೆಡೆ ಸಾಧಾರಣ ಮಳೆ ಸುರಿಯಿತು. ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಭೂಮಿಗೆ ತಂಪೆರೆದ ಮಳೆರಾಯ, ರೈತರ ಮೊಗದಲ್ಲಿ ಕೊಂಚ ಭರವಸೆ ಮೂಡಿಸಿ ಕೆಲ ಹೊತ್ತಿನಲ್ಲೇ ಸುಮ್ಮನಾದ. ಬೆಳಿಗ್ಗೆ ಮತ್ತು ಸಂಜೆ ಕವಿದಿದ್ದ ಮೋಡದ ತೀವ್ರತೆಗೆ ಭಾರೀ ಮಳೆಯ ನಿರೀಕ್ಷೆಯಲ್ಲಿದ್ದ ಜನರು ಕೆಲವೇ ನಿಮಿಷ ಸಾಧಾರಣವಾಗಿ ಸುರಿದು ನಿಂತ ಮಳೆಯಿಂದ ನಿರಾಶರಾದರು.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ 8.30ರ ಸುಮಾರಿಗೆ ಸೋನೆ ಮಳೆಯಂತೆ ಸಣ್ಣದಾಗಿ ಸುರಿಯತೊಡಗಿತು. ಸುಮಾರು 30 ನಿಮಿಷ ಸುರಿಯಿತು. ನಂತರ ಕರಿಮೋಡ ಕಣ್ಮರೆಯಾಗಿ ಕೆಲವೇ ಕ್ಷಣಗಳಲ್ಲಿ ಸೂರ್ಯನ ಕಿರಣಗಳು ಮಳೆ ವಾತಾವರಣವನ್ನು ಇಲ್ಲವಾಗಿಸಿದವು. ಜಡಿ ಮಳೆಯು ಕನಿಷ್ಠ ಅರ್ಧ ದಿನವಾದರೂ ಬಿಡುವುದಿಲ್ಲ ಎಂಬ ಲೆಕ್ಕಾಚಾರ ಕೈ ಕೊಟ್ಟಿತು.

ಬೆಳಿಗ್ಗೆ ಸುರಿದ ಮಳೆ ಬೆನ್ನಲ್ಲೇ ರಣಬಿಸಿಲು ಎಂದಿನಂತೆ ಭೂಮಿಯನ್ನು ಕಾಡಿತು. ಬಿಸಿಲಬ್ಬರವು ಸಂಜೆ ಮಳೆ ತರಬಹುದೆಂಬ ನಿರೀಕ್ಷೆಯಂತೆ 6 ಗಂಟೆ ಸುಮಾರಿಗೆ ಮತ್ತೆ ಮೋಡ ಕವಿಯಿತು. ಭಾರೀ ಗಾಳಿ ಮತ್ತು ಗುಡುಗಿನೊಂದಿಗೆ ದೊಡ್ಡ ಹನಿಗಳೊಂದಿಗೆ ಶುರುವಾದ ಮಳೆಯು 30 ನಿಮಿಷಕ್ಕೂ ಹೆಚ್ಚು ಹೊತ್ತು ಸಾಧಾರಣವಾಗಿ ಸುರಿದು ತಣ್ಣಗಾಯಿತು.

ಸಂಜೆಯ ಸಾಧಾರಣ ಮಳೆಯಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮಳೆಗೆ ಸಿಲುಕಿ ತೊಂದರೆ ಅನುಭವಿಸಿದರು. ಕೆಲವರು ರಸ್ತೆ ಬದಿಯ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಹೋದರು. ಮಳೆ ಇಲ್ಲದೆ ಮೂಲೆ ಸೇರಿದ್ದ ಛತ್ರಿಗಳ ಸಹ ಅಲ್ಲಲ್ಲಿ ಕಣ್ಣಿಗೆ ಕಂಡವು.

ಗಾಳಿಗೆ ಹಾರಿ ಹೋದ ಶೀಟ್‌ಗಳು: ಭಾರೀ ಗಾಳಿಯಿಂದಾಗಿ ನಗರದ ಬೆಂಗಳೂರು –ಮೈಸೂರು ಹಳೆ ಹೆದ್ದಾರಿಯಲ್ಲಿರುವ ಎಪಿಎಂಸಿಯ ಮಾವಿನ ಮಾರುಕಟ್ಟೆಯಲ್ಲಿ ಮಳಿಗೆಗಳಿಗೆ ಅಳವಡಿಸಿದ್ದ ಶೀಟ್‌ಗಳು ಅನತಿ ದೂರಕ್ಕೆ ಹಾರಿದವು. ಸಮೀಪದ ಮರಕ್ಕೆ ಅಪ್ಪಳಿಸಿ ಶೀಟುಗಳು ತುಂಡುತುಂಡಾಗಿ ಕೆಳಕ್ಕೆ ಬಿದ್ದವು.

ಮಳೆಯಿಂದಾಗಿ ಎಪಿಎಂಸಿಯಲ್ಲಿ ರೈತರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ವಾಹನಗಳಲ್ಲಿ ಮಾವು ತುಂಬಿಕೊಂಡು ಬಂದಿದ್ದವರು ಕೆಲ ಹೊತ್ತು ಪರದಾಡಬೇಕಾಯಿತು. ಕಾರ್ಮಿಕರು ಮಳೆಯಲ್ಲೇ ವಾಹನಗಳಿಂದ ಮಾವಿನ ಬುಟ್ಟಿಗಳನ್ನು ಇಳಿಸುತ್ತಿದ್ದ ದೃಶ್ಯ ಕಂಡುಬಂತು.

ಬೇರೆ ಕಡೆಗೆ ಮಾವು ಕಳಿಸುವುದಕ್ಕಾಗಿ ತಮ್ಮ ಮಳಿಗೆ ಹೊರಗಡೆ ಮಾವು ತುಂಬಿಸಿ ಇಟ್ಟಿದ್ದ ಮಾಲೀಕರು, ಮಳೆ ಬೆನ್ನಲ್ಲೇ ಮಾವಿನ ಬುಟ್ಟಿಗಳು ನೆನೆಯದಂತೆ ರಕ್ಷಿಸಿಕೊಳ್ಳಲು ಯತ್ನಿಸಿದರು. ವ್ಯಾಪಾರಿಗಳು ಮತ್ತು ರೈತರು ಸಹ ಬುಟ್ಟಿಗಳನ್ನು ನೆನೆಯದಂತೆ ಒಳಕ್ಕೆ ಇಡಲು ಅವರಿಗೆ ನೆರವಾದರು. ಎಪಿಎಂಸಿ ಪ್ರವೇಶದ್ವಾರದ ಬಳಿ ಸ್ವಲ್ಪಮಟ್ಟಿಗೆ ಸಂಚಾರ ದಟ್ಟಣೆ ಉಂಟಾಯಿತು.

ರೈತರ ಸಂತಸ

ಬರದಿಂದ ತತ್ತರಿಸಿರುವ ರೈತರು ಇಂದು ಬೆಳಿಗ್ಗೆ ಮತ್ತು ಸಂಜೆ ಸುರಿದ ಮಳೆಗೆ ಸಂತಸಪಟ್ಟರು. ಬೇರೆ ಕಡೆ ಧಾರಾಕಾರ ಮಳೆಯಾಗಿರುವ ಸುದ್ದಿ ಕೇಳಿ ‘ನಮ್ಮೂರಿನಲ್ಲಿ ಮಳೆರಾಯ ಯಾಕೆ ಮುನಿಸಿಕೊಂಡಿದ್ದಾನೆ’ ಎಂದುಕೊಳ್ಳುತ್ತಿದ್ದ ರೈತರ ನೋವಿಗೆ ವರುಣ ಕೆಲ ಹೊತ್ತು ಸ್ಪಂದಿಸಿದ.

‘ಒಂದು ವರ್ಷದಿಂದ ಬಾರದ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಮಾವು ರೇಷ್ಮೆ ತೆಂಗು ತರಕಾರಿ ಸೇರಿದಂತೆ ಎಲ್ಲಾ ರೀತಿಯ ಬೆಳೆಗಾರರಿಗೂ ಮಳೆ ಕೊರತೆಯು ಹೊಡೆತ ಕೊಟ್ಟಿದೆ. ಈ ವರ್ಷವಾದರೂ ಮುಂಗಾರು ಮಳೆ ಉತ್ತಮವಾಗಿ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನಿರೀಕ್ಷೆಯಂತೆ ಮಳೆ ಬಂದರೆ ನಾವು ಬದುಕುತ್ತೇವೆ. ಭೂಮಿ ಸಹ ತಣ್ಣಗಾಗಿ ನಮ್ಮ ಬೆಳೆ ಬದುಕಿಸುತ್ತಾಳೆ. ಇಲ್ಲವಾದರೆ ನಮ್ಮ ಕಷ್ಟ ದೇವರಿಗೇ ಮುಟ್ಟಬೇಕು’ ಎಂದು ತಾಲ್ಲೂಕಿನ ಅರೇಹಳ್ಳಿಯ ರೈತ ಗಂಗಾಧರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT