ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ

ಹಾರೋಹಳ್ಳಿ, ಮಾಗಡಿಯಲ್ಲಿ ಸುರಿದ ಮಳೆ; ರೈತರ ಮೊಗದಲ್ಲಿ ಸಂತಸ
Published 18 ಏಪ್ರಿಲ್ 2024, 16:43 IST
Last Updated 18 ಏಪ್ರಿಲ್ 2024, 16:43 IST
ಅಕ್ಷರ ಗಾತ್ರ

ಹಾರೋಹಳ್ಳಿ: ಮಳೆ ಇಲ್ಲದೆ ಕಂಗೆಟ್ಟಿದ್ದ ತಾಲ್ಲೂಕಿನ ವಿವಿಧೆಡೆ ಗುರುವಾರ ಮಳೆಯಾಯಿತು. ಇದರೊಂದಿಗೆ ಬಿಸಿಲ ಬೇಗೆಯಿಂದ ಕಾದ ಬಾಣಲಿಯಂತಾಗಿದ್ದ ಧರೆಗೆ ಮಳೆರಾಯ ತಂಪನ್ನೆರೆದ. ಮಧ್ಯಾಹ್ನದ ಹೊತ್ತಿಗೆ ಹಾರೋಹಳ್ಳಿ ಪಟ್ಟಣ, ಮರಳವಾಡಿ ಸೇರಿದಂತೆ ವಿವಿಧೆಡೆಗೆ 45 ನಿಮಿಷ ಧಾರಾಕಾರ ಮಳೆ ಸುರಿಯಿತು.

ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ತಾಲ್ಲೂಕಿನಲ್ಲಿ ಬಿಸಿಲ ಧಗೆ ಮಿತಿ ಮೀರಿತ್ತು. ಉಷ್ಣಾಂಶವು 38 ಡಿಗ್ರಿ ತಲುಪಿತ್ತು. ಹಗಲಲ್ಲಿ ಹೊರಗಡೆ ಓಡಾಡಲಾಗದಷ್ಟು ಬಿಸಿ ಇತ್ತು. ಬೆಳಿಗ್ಗೆಯಿಂದಲೂ ಗಾಳಿ ಜೊತೆಗೆ ಬಿಸಿ ಗಾಳಿ ಬೀಸುವ ಜೊತೆಗೆ ಮಳೆ ಮುನ್ಸೂಚನೆ ನೀಡಿತ್ತು. ಅದರಂತೆ ಮಧ್ಯಾಹ್ನ ಮಳೆರಾಯ ಕೃಪೆ ತೋರಿದ.

ವರುಣನ ಕೃಪೆಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಏಕಾಏಕಾಕಿ ಸುರಿದ ಮಳೆಯಲ್ಲಿ ನೆನೆಯದಂತೆ ತಪ್ಪಿಸಿಕೊಳ್ಳಲು ಜನ ಪರದಾಡಿದರು. ದ್ವಿಚಕ್ರ ವಾಹನಗಳ ಸವಾರರು ಮಳೆಯಲ್ಲಿ ಸಂಚರಿಸಿದರು. ರಸ್ತೆಯ ತಗ್ಗು ಮತ್ತು ಗುಂಡಿಗಳಲ್ಲಿ ಕೆಲ ಹೊತ್ತು ನೀರು ನಿಂತಿತು. ಬಿಸಿಲಿಗೆ ಕಾದಿದ್ದ ಧರೆಯು ಮಳೆ ಸಿಂಚನದಿಂದ ತಣ್ಣಗಾಯಿತು.

ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಕಂಡುಬಂತು. ಮಾವು ಸೇರಿದಂತೆ ಬಿಸಿಲ ಝಳದಿಂದಾಗಿ ಒಣಗಿದ್ದ ಬೆಳೆಗೆ ಮಳೆಯು ಜೀವಹನಿ ನೀಡಿತು. ಮಳೆಗಾಗಿ ರೈತರು ಸಲ್ಲಿಸಿದ್ದ ಪೂಜೆ ಹಾಗೂ ಪ್ರಾರ್ಥನೆಗೆ ಕಡೆಗೂ ಮಳೆ ಕೃಪೆಯಾಯಿತು.

ಸಾಧಾರಣ ಮಳೆ

ಮಾಗಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವೆಡೆ ಗುರುವಾರ ರಾತ್ರಿ ಕೆಲ ಹೊತ್ತು ಸಾಧಾರಣ ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಪಟ್ಟಣಕ್ಕೆ ಮಳೆಯು ತಂಪನ್ನೆರೆಯಿತು. ಮಧ್ಯಾಹ್ನದಿಂದಲೇ ಜೋರಾಗಿ ಗಾಳಿ ಬೀಸುವುದರೊಂದಿಗೆ ಮಳೆಯಾಗುವ ಮುನ್ಸೂಚನೆ ಇತ್ತು.

ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಾವನದುರ್ಗದ ಬೆಟ್ಟದ ಸುತ್ತಮುತ್ತ ತುಂತುರು ಮಳೆಯಾಗಿತ್ತು. ನಂತರ ನಿಂತಿದ್ದ ಮಳೆಯು ಜನರ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಅದಾದ ರಾತ್ರಿ 7.45ರ ಸುಮಾರಿಗೆ ಶುರುವಾದ ತುಂತುರು ಮಳೆಯು ನಂತರ ಸಾಧಾರಣವಾಗಿ ಸುರಿಯಿತು.

ಈ ವರ್ಷದ ಮೊದಲ ಮಳೆಯ ಸಿಂಚನವು ಜನರಲ್ಲಿ ಹರ್ಷ ತಂದಿತು. ವರ್ಷಾಂತ್ಯದಿಂದಲೂ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ರಾಗಿ, ಮಾವು ಸೇರಿದಂತೆ ತಾವು ಬೆಳೆದ ವಿವಿಧ ಬೆಳೆಗಳಿಗೆ ನೀರಿಲ್ಲದೆ ಚಿಂತಾಕ್ರಾಂತರಾಗಿದ್ದರು. ಜಾನುವಾರುಗಳಿಗೆ ಮೇಯಲು ಮೇವಿಲ್ಲದೆ ರೈತರು ಪರದಾಡುತ್ತಿದ್ದರು. ಮಳೆಗಾಗಿ ತಾಲ್ಲೂಕಿನ ಕೆಲವೆಡೆ ರೈತರು ವಿಶೇಷ ಪೂಜೆ ಸಹ ನಡೆಸಿದ್ದರು.

‘ವಾಡಿಕೆಯಂತೆ ಯುಗಾದಿ ಹಬ್ಬದಂದು ಪ್ರತಿ ವರ್ಷ ಮಾಗಡಿ ಸೀಮೆಯಲ್ಲಿ ಮುಂಗಾರು ಪೂರ್ವ ಮಳೆ ಬೀಳುತ್ತಿತ್ತು. ಈ ವರ್ಷ ಬಿರುಬಿಸಿಲಿನ ನಡುವೆ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ನಾಲ್ಕೈದು ಸಲ ಮಳೆಯಾಗಿತ್ತು. ತಡವಾಗಿಯಾದರೂ ಮಳೆ ಬಂದಿದ್ದು ನೆಮ್ಮದಿ ತಂದಿದೆ’ ಎಂದು ರೈತ ಶಿವಮಾದು ಹರ್ಷ ವ್ಯಕ್ತಪಡಿಸಿದರು.

ಮಾಗಡಿ ಪಟ್ಟಣದಲ್ಲಿ ಗುರುವಾರ ರಾತ್ರಿ ಮಳೆ ಸುರಿಯಿತು
ಮಾಗಡಿ ಪಟ್ಟಣದಲ್ಲಿ ಗುರುವಾರ ರಾತ್ರಿ ಮಳೆ ಸುರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT