ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದೇವರ ಬೆಟ್ಟ: ರಾಮಮಂದಿರ ಅನುಮತಿ ಅನುಮಾನ

ರಾಮದೇವರ ಬೆಟ್ಟ: ಪರಿಸರಸೂಕ್ಷ್ಮ ವಲಯದಲ್ಲಿ ಕಾಮಗಾರಿಗೆ ಸಲ್ಲಿಕೆಯಾಗದ ಪ್ರಸ್ತಾವ
Last Updated 30 ಮಾರ್ಚ್ 2023, 20:21 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವುದಾಗಿ ರಾಜ್ಯ ಬಿಜೆಪಿ ಸರ್ಕಾರ ಹೇಳಿದೆ. ಆದರೆ, ಈ ಬೆಟ್ಟ ಪರಿಸರ ಸೂಕ್ಷ್ಮ ವಲಯವಾದ್ದರಿಂದ ಮಂದಿರ ನಿರ್ಮಾಣಕ್ಕೆ ಅನುಮತಿ ಸಿಗುವುದು ಅನುಮಾನ.

‘ರಾಮದೇವರ ಬೆಟ್ಟ ಪರಿಸರ ಸೂಕ್ಷ್ಮ ವಲಯವಾದ್ದರಿಂದ ಯಾವುದೇ ಕಾಮಗಾರಿಗೆ ಮುನ್ನ ಪೂರ್ವಾನುಮತಿ ಕಡ್ಡಾಯವಾಗಿದೆ. ಸಿಕ್ಕರೂ ಸುತ್ತಲಿನ ಬಂಡೆಗಳನ್ನು ಒಡೆಯಲು, ಹೊಸ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ’ ಎಂದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಮಂಡಳಿಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಮದೇವರ ಬೆಟ್ಟವು ಉದ್ದಕೊಕ್ಕಿನ ರಣಹದ್ದುಗಳ ಆವಾಸಸ್ಥಾನವಾಗಿದೆ. ಅಳಿವಿನ ಅಂಚಿನಲ್ಲಿ ಇರುವ ಪ್ರಭೇದಗಳಲ್ಲಿ ಒಂದಾಗಿರುವ ಈ ಹದ್ದುಗಳ ರಕ್ಷಣೆಗಾಗಿ 2012ರಲ್ಲಿ ಕೇಂದ್ರ ಸರ್ಕಾರವು ಈ ಬೆಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ.

ಬೆಟ್ಟದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 17 ಎಕರೆಗೂ ಹೆಚ್ಚು ಜಾಗ ಇದ್ದು, ಅಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈಚೆಗೆ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಅಷ್ಟು ಪ್ರಮಾಣದ ಜಾಗವೇ ಅಲ್ಲಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಸುತ್ತ ಬರೀ ಬಂಡೆಗಳು ತುಂಬಿದೆ.

ಮಂದಿರ ನಿರ್ಮಾಣ ಸಂಬಂಧ ಅಗತ್ಯ ಅನುಮತಿ ಕೋರಿ ಅರಣ್ಯ ಇಲಾಖೆಗೆ ಈದುವರೆಗೂ ಅಧಿಕೃತವಾಗಿ ಯಾವುದೇ ಪ್ರಸ್ತಾವ ಸಲ್ಲಿಕೆ ಆಗಿಲ್ಲ. ಪ್ರವಾಸೋದ್ಯಮ ಇಲಾಖೆ ಒಂದು ಪತ್ರ ಬರೆದು ಸುಮ್ಮನಾಗಿದೆ.

ಪರಿಸರಪ್ರಿಯರ ಆಕ್ಷೇಪ: ಬೆಟ್ಟದ ಮಧ್ಯಭಾಗದಲ್ಲಿ ಈಗಾಗಲೇ ಪಟ್ಟಾಭಿರಾಮ ದೇಗುಲವಿದ್ದು, ಇಲ್ಲಿ ಪ್ರತಿ ಶ್ರಾವಣ ಮಾಸದ ಶನಿವಾರಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ಸದ್ಯ ಬೆಟ್ಟದಲ್ಲಿ ಕೇವಲ 7–8 ಉದ್ದ ಕೊಕ್ಕಿನ ಹದ್ದುಗಳು ಮಾತ್ರ ಉಳಿದುಕೊಂಡಿದ್ದು, ಅವುಗಳ ಸಂತತಿಯೂ ಕ್ಷೀಣವಾಗಿದೆ. ಹೀಗಿರುವಾಗ ಇಲ್ಲಿ ಯಾವುದೇ ಕಾಮಗಾರಿ ನಡೆದರೂ ಅವುಗಳ ಸಂತತಿಗೆ ಹಾನಿಯಾಗಬಹುದು ಎನ್ನು ವುದು ಪರಿಸರ ಪ್ರಿಯರ ಆತಂಕ.

ಬುದ್ದನ ಪ್ರತಿಮೆಗೂ ವ್ಯಕ್ತವಾಗಿತ್ತು ವಿರೋಧ...

ರಾಮದೇವರ ಬೆಟ್ಟಕ್ಕೆ ಅನತಿ ದೂರದಲ್ಲಿರುವ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ 270 ಮೀಟರ್‌ ಎತ್ತರದ ಬೃಹತ್‌ ಬಂಡೆಯಲ್ಲಿ ವಿಶ್ವದಲ್ಲೇ ಅತಿ ಎತ್ತರದ, 217 ಮೀಟರ್‌ ಬುದ್ಧನ ಏಕಶಿಲಾ ಪ್ರತಿಮೆ ನಿರ್ಮಾಣಕ್ಕೆ 2005ರಲ್ಲಿ ಪ್ರಯತ್ನ ನಡೆದಿತ್ತು.

ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದಕ್ಕೆ ಪರಿಸರಪ್ರಿಯರು ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ಪ್ರತಿಮೆ ನಿರ್ಮಾಣ ಆದದ್ದೇ ಆದಲ್ಲಿ ರಣಹದ್ದುಗಳು, ಕರಡಿ, ಚಿರತೆ ಹಾಗೂ ಆನೆಗಳ ಓಡಾಟಕ್ಕೆ ಅಡಚಣೆ ಆಗಲಿದೆ ಎಂದು ಆಕ್ಷೇಪಿಸಿದ್ದರು. ಇದರಿಂದಾಗಿ ಯೋಜನೆ ಅಷ್ಟಕ್ಕೆ ನಿಂತಿತು.

ಹಿಂದೊಮ್ಮೆ ಬೆಟ್ಟದ ಬುಡದಲ್ಲಿ ರೆಸಾರ್ಟ್‌ ನಿರ್ಮಾಣ ವಿರೋಧಿಸಿ ಸ್ಥಳೀಯರು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ನಂತರದಲ್ಲಿ ರೆಸಾರ್ಟ್‌ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿತ್ತು.

ಮತ್ತೊಂದು ಮರಿ ಸೇರ್ಪಡೆ

ರಾಮದೇವರ ಬೆಟ್ಟದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಉದ್ದ ಕೊಕ್ಕಿನ ರಣಹದ್ದುಗಳ ಜೋಡಿಯ ಗೂಡಿನಲ್ಲಿ ಮರಿಯೊಂದು ಕಾಣಿಸಿಕೊಂಡಿದೆ.

ಬೆಟ್ಟದಲ್ಲಿ ಕೇವಲ 7–8 ಉದ್ದಕೊಕ್ಕಿನ ರಣಹದ್ದುಗಳು ಮಾತ್ರ ಉಳಿದಿವೆ. ಇವುಗಳು ಕಳೆದ 5–6 ವರ್ಷಗಳಿಂದ ಮೊಟ್ಟೆ ಇಟ್ಟಿರಲಿಲ್ಲ. ಇದರಿಂದಾಗಿ ಬೆಟ್ಟದಲ್ಲಿ ಈ ಹದ್ದುಗಳ ಸಂತಾನ ನಾಶವಾಗುವ ಆತಂಕ ಎದುರಾಗಿತ್ತು.

ಈ ವರ್ಷದ ಆರಂಭದಲ್ಲಿ ಒಂದು ಮರಿ ಮತ್ತು ಇದೀಗ ಮಾರ್ಚ್‌ನಲ್ಲಿ ಮತ್ತೊಂದು ಹದ್ದಿನ ಮರಿ ಹೊಸದಾಗಿ ಸೇರ್ಪಡೆಯಾಗಿವೆ.

ಪ್ರಕ್ರಿಯೆ ಹೇಗಿರಬೇಕು?

ಮಂದಿರ ನಿರ್ಮಾಣಕ್ಕೆ ಮೊದಲು ಸಂಬಂಧಿಸಿದ ಇಲಾಖೆಯು ಅರಣ್ಯ ಇಲಾಖೆಗೆ ಯೋಜನಾ ವರದಿ ಸಮೇತ ಪ್ರಸ್ತಾವ ಸಲ್ಲಿಸಬೇಕು. ಅದಕ್ಕೆ ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯಲ್ಲಿ ಒಪ್ಪಿಗೆ ಸಿಕ್ಕ ನಂತರ ಅರ್ಜಿಯು ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಬೇಕು. ನಂತರ ಕೇಂದ್ರ ವನ್ಯಜೀವಿ ಮಂಡಳಿಯು ಒಪ್ಪಿಗೆ ಸಿಗಬೇಕು. ಆಗ ಮಾತ್ರ ಮಂದಿರ ನಿರ್ಮಾಣದ ಕನಸು ನನಸಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT