ಚನ್ನಪಟ್ಟಣ: ಸ್ವಸ್ಥ ಸಮಾಜ ನಿರ್ಮಾಣ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ರಿವು ಮೂಡಿಸುವ ಉದ್ದೇಶದೊಂದಿಗೆ ತಾಲ್ಲೂಕಿನ ತಗಚಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಗಳ ಉದ್ಘಾಟಿಸಿದರು.
ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ತಮಗೆ ಅರಿವಿಲ್ಲದಂತೆ ತಮ್ಮ ಬದುಕು ನಾಶ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ದುರಂತ ಎಂದು ಅವರು ವಿಷಾದಿಸಿದರು.
ಸ್ವಸ್ಥ ಸಮಾಜದ ಬಗ್ಗೆ ಉಪನ್ಯಾಸ ನೀಡಿದ ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ವಿದ್ಯಾರ್ಥಿಗಳು ಭೋಗದ ಜೀವನದ ಭ್ರಮೆ ಬಿಟ್ಟು ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.