ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಸ್ವಾದಿಷ್ಟ ನಾಟಿ ಶೈಲಿಯ ಬಿರಿಯಾನಿ

ಮಟನ್, ಚಿಕನ್ ಬಿರಿಯಾನಿ, ಕಾಲು ಸೂಪು ಪ್ರಿಯರ ನೆಚ್ಚಿನ ಹೋಟೆಲ್
Published 26 ಮೇ 2024, 4:03 IST
Last Updated 26 ಮೇ 2024, 4:03 IST
ಅಕ್ಷರ ಗಾತ್ರ

ರಾಮನಗರ: ನಗರದ ವಾಟರ್ ಟ್ಯಾಂಕ್ ವೃತ್ತದ ಬಳಿ ಇರುವ ‘ರಾಜೇಶ್ ಬಿರಿಯಾನಿ’ ಹೋಟೆಲ್ ಸ್ವಾದಿಷ್ಟಕರ ನಾಟಿ ಶೈಲಿಯ ರುಚಿಗೆ ಹೆಸರಾಗಿದೆ. ಮಟನ್ ಮತ್ತು ಚಿಕನ್ ಬಿರಿಯಾನಿ ಸೇರಿದಂತೆ ಇತರ ಮಾಂಸದ ಖಾದ್ಯಗಳಿಗೆ ಜನಪ್ರಿಯವಾಗಿರುವ ಹೋಟೆಲ್‌ನ ಬಿರಿಯಾನಿ ಮತ್ತು ಮುದ್ದೆ ಊಟ ಎಂತವರ ಬಾಯಲ್ಲೂ ನೀರು ತರಿಸುತ್ತದೆ.

ಬೆಳಗ್ಗಿನ ಉಪಾಹಾರ ಸವಿಯಲು ಸಸ್ಯಾಹಾರದ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಗ್ರಾಹಕರ ದಟ್ಟಣೆ ಇರುತ್ತದೆ. ಆದರೆ, ಅದಕ್ಕೆ ವ್ಯತಿರಿಕ್ತವೆಂಬಂತೆ ರಾಜೇಶ್ ಹೋಟೆಲ್‌ನಲ್ಲಿ ಬೆಳಿಗ್ಗೆಯೇ ಬಿರಿಯಾನಿ ಸವಿಯಲು ಗ್ರಾಹಕರ ದಂಡು ಸೇರಿರುತ್ತದೆ. ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಗ್ರಾಹಕರು ಬರುತ್ತಾರೆ. ಕೂರಲು ಜಾಗವಿಲ್ಲದಿದ್ದರೂ ಕೆಲ ಹೊತ್ತು ಕಾದು ಬಿರಿಯಾನಿ ಸವಿಯುತ್ತಾರೆ. ಸಾಧ್ಯವಾಗದವರು ಪಾರ್ಸೆಲ್ ಮೊರೆ ಹೋಗುತ್ತಾರೆ.

ಸಣ್ಣ ಹೋಟೆಲ್‌ನಿಂದ ಶುರು: ‘ಬಾರ್‌ನಿಂದಿಡಿದು ಸ್ಟಾರ್ ಹೋಟೆಲ್‌ವರೆಗೆ ಕೆಲಸ ಮಾಡಿದ್ದ ಅನುಭವ ನನ್ನದು. ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ 25 ವರ್ಷಗಳ ಹಿಂದೆ ಸಣ್ಣ ಅಂಗಡಿಯಲ್ಲಿ ಚಿತ್ರಾನ್ನ, ರೈಸ್ ಬಾತ್ ಸೇರಿದಂತೆ ಕೆಲ ಉಪಾಹಾರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆ. ಜೊತೆಗೆ ಕಬಾಬ್ ಮತ್ತು ಬಿರಿಯಾನಿ ಶುರು ಮಾಡಿದೆ’ ಎಂದು ಹೋಟೆಲ್ ಮಾಲೀಕ ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬಾಬ್ ಮತ್ತು ಬಿರಿಯಾನಿ ರುಚಿಗೆ ಗ್ರಾಹಕರಿಂದ ವ್ಯಕ್ತವಾದ ಮೆಚ್ಚುಗೆಯು ಹೋಟೆಲ್ ನಡೆಸಲು ಮತ್ತಷ್ಟು ಸ್ಪೂರ್ತಿ ನೀಡಿತು. ಹೀಗೆ ಶುರುವಾದ ಹೋಟೆಲ್ ಹಲವು ಏಳುಬೀಳು, ಲಾಭ–ನಷ್ಟಗಳನ್ನು ದಾಟಿ ಈ ಹಂತಕ್ಕೆ ಬಂದಿದೆ. ಬೆಳಿಗ್ಗೆ ಉಪಾಹಾರಕ್ಕೆ ಬಿರಿಯಾನಿಯಿಂದ ಆರಂಭಗೊಂಡು ಮಧ್ಯಾಹ್ನ ಊಟ, ಸಂಜೆ ಕಬಾಬ್ ಹಾಗೂ ರಾತ್ರಿ ಊಟದೊಂದಿಗೆ 10 ಗಂಟೆಗೆ ಹೋಟೆಲ್ ತೆರೆದಿರುತ್ತದೆ’ ಎಂದರು.

‘ಆರಂಭದಿಂದಲೂ ನಾನೇ ಬಿರಿಯಾನಿ ತಯಾರಿಸುತ್ತೇನೆ. ಹಾಗಾಗಿ, ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಮ್ಮಲ್ಲಿ ಹೊರಗಿನವರು ಕೆಲಸಕ್ಕಿಲ್ಲ. ಅಡುಗೆಯಿಂದಿಡಿದು ಬಡಿಸುವವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಕುಟುಂಬದ 12 ಮಂದಿಯೇ ಸೇರಿ ಮಾಡುತ್ತೇವೆ’ ಎಂದು ಹೇಳಿದರು.

‘ನಮ್ಮಲ್ಲಿ ಮಟನ್ ಬಿರಿಯಾನಿಗೆ ₹200, ನಾಟಿ ಕೋಳಿ ಬಿರಿಯಾನಿಗೆ ₹200 ಹಾಗೂ ಬಾಯ್ಲರ್ ಕೋಳಿ ಬಿರಿಯಾನಿಗೆ ₹110 ದರವಿದೆ. ಗ್ರಾಹಕರ ಕೈಗೆಟುಕುವ ದರದಲ್ಲಿ ಮಾಂಸಾಹಾರ ಸಿಗಬೇಕೆಂಬುದು ನನ್ನ ಆಶಯ. ಅದಕ್ಕಾಗಿಯೇ, ಕಡಿಮೆ ದರದಲ್ಲೇ ಮಾರಾಟ ಮಾಡುವೆ. ದೇವರ ದಯೆ ಮತ್ತು ಸ್ನೇಹಿತರ ಬಳಗದ ಅಭಿಮಾನದಿಂದ ವ್ಯವಹಾರ ಚನ್ನಾಗಿ ನಡೆದುಕೊಂಡು ಹೋಗುತ್ತದೆ’ ಎಂದು ತಿಳಿಸಿದರು.

ಗ್ರಾಹಕರಿಗೆ ಸ್ವತಃ ಬಿರಿಯಾನಿ ಬಡಿಸುವ ಹೋಟೆಲ್ ಮಾಲೀಕ ರಾಜೇಶ್
ಗ್ರಾಹಕರಿಗೆ ಸ್ವತಃ ಬಿರಿಯಾನಿ ಬಡಿಸುವ ಹೋಟೆಲ್ ಮಾಲೀಕ ರಾಜೇಶ್

Quote - ಮಟನ್ ಬಿರಿಯಾನಿ ಇಲ್ಲಿನ ವಿಶೇಷತೆ. ಅದಕ್ಕಾಗಿ ನಿತ್ಯ ಬೆಳಿಗ್ಗೆ ನಾನೇ ಮಂಡಿಗೆ ಹೋಗಿ ಕುರಿ ಆಯ್ಕೆ ಮಾಡಿ ಮಾಂಸ ತರುವೆ. ಮನೆಯಲ್ಲೇ ತಯಾರಿಸಿದ ಮಸಾಲೆಯನ್ನು ಮಿಕ್ಸ್ ಬಿರಿಯಾನಿಗೆ ನಾನೇ ಅಂತಿಮ ಸ್ಪರ್ಶ ನೀಡುವೆ – ರಾಜೇಶ್ ಹೋಟೆಲ್ ಮಾಲೀಕ ರಾಮನಗರ

Cut-off box - ಹೋಟೆಲ್‌ನ ವಿಶೇಷ ಆಹಾರಗಳು ಮಟನ್ ಬಿರಿಯಾನಿ ಚಿಕನ್ ಬಿರಿಯಾನಿ ಬೋಟಿ ತಲೆ ಮಾಂಸ ಕೈಮಾ ಚಿಕನ್ ಕುರ್ಮಾ ಮಟನ್ ಚಾಪ್ಸ್ ಚಿಕನ್ ಕಬಾಬ್ ಕಾಲು ಸೂಪ್ ಮೀನಿನ ತವಾ ಪ್ರೈ ಮಟನ್ ಊಟ ಚಿಕನ್ ಊಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT