ಭಾನುವಾರ, ಜನವರಿ 19, 2020
27 °C
ರಾಮನಗರ ಜಿಲ್ಲಾಧಿಕಾರಿ ಆದೇಶ

ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕ್ರಮ: ಹೆದ್ದಾರಿ ಬದಿ ರಾತ್ರಿ ವ್ಯಾಪಾರ ಬಂದ್‌

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿನ ಹೆದ್ದಾರಿ ಬದಿಯ ದೊಡ್ಡ ಡಾಬಾಗಳು, ಕೆಫೆ ಡೇಗಳು ಇನ್ನು ಮುಂದೆ ರಾತ್ರಿ 11ರ ಒಳಗೆ ಬಾಗಿಲು ಮುಚ್ಚುವುದು ಕಡ್ಡಾಯ. ರಾತ್ರಿ ಹೊತ್ತು ವ್ಯಾಪಾರ ನಿಷೇಧಿಸಿ ಜಿಲ್ಲಾಡಳಿತ ಸೋಮವಾರ ಆದೇಶ ಹೊರಡಿಸಿದೆ.

ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ– 275, ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ –209, ಬೆಂಗಳೂರು–-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ –75 ಹಾದು ಹೋಗಿವೆ. ಇವುಗಳ ಸುತ್ತಮುತ್ತ ದೊಡ್ಡ ದೊಡ್ಡ ಹೋಟೆಲ್‌ಗಳು, ಬಾರ್‌ ಅಂಡ್ ರೆಸ್ಟೋರೆಂಟುಗಳು, ಕೆಫೆಗಳು ಭರ್ಜರಿ ವ್ಯಾಪಾರ ನಡೆಸುತ್ತಿವೆ. ಅದರಲ್ಲೂ ರಾತ್ರಿ ಹೊತ್ತು ಪ್ರಯಾಣಿಕರು ಹೆಚ್ಚಾಗಿ ಇವುಗಳಲ್ಲಿ ಕಾಣಸಿಗುತ್ತಾರೆ. ಇದೀಗ ಇಂತಹ ಕಡೆಗಳಲ್ಲಿ ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ವ್ಯಾಪಾರ ವಹಿವಾಟಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ.

ರಾತ್ರಿ 11ರ ಬಳಿಕ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ. ಮತ್ತೆ ತಪ್ಪು ಮುಂದುವರಿಸಿದಲ್ಲಿ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಹೆದ್ದಾರಿ ಬದಿಯ ಕೆಲವು ರೆಸಾರ್ಟುಗಳು ದಿನವಿಡೀ ತೆರೆದಿದ್ದು, ತಡರಾತ್ರಿವರೆಗೂ ವಹಿವಾಟು ನಡೆಸುತ್ತಾ ಬಂದಿವೆ. ಅದರಲ್ಲೂ ನಗರದ ಹೊರವಲಯಕ್ಕೆ ಹೊಂದಿಕೊಂಡಂತೆ ಇರುವ ಕೆಫೆಗಳಲ್ಲಿ ಇರುಳು ಕಳೆದಂತೆಲ್ಲ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತಿದೆ. ಇಂತಹ ಉದ್ಯಮಗಳು ಈ ಹೊಸ ಆದೇಶದಿಂದ ತತ್ತರಿಸುವ ಸಾಧ್ಯತೆಗಳಿವೆ. ವಹಿವಾಟು ಕುಂಠಿತಗೊಳ್ಳಲಿದೆ.

ಭದ್ರತೆಯೇ ಕಾರಣ: ಜಿಲ್ಲಾಡಳಿತದ ಈ ನಿರ್ಣಯಕ್ಕೆ ಭದ್ರತೆ ಹಾಗೂ ರಸ್ತೆ ಪ್ರಯಾಣಿಕರ ಸುರಕ್ಷತೆಯೇ ಮುಖ್ಯ ಕಾರಣವಾಗಿದೆ.

ಕಳೆದ 4 ವರ್ಷದ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿವೆ. 2015ರ ಸೆಪ್ಟೆಂಬರ್‌ನಿಂದ ಈವರೆಗೆ ರಾತ್ರಿ ವೇಳೆ 66 ಕೊಲೆ , 14 ದರೋಡೆ, 53 ದರೋಡೆ ಯತ್ನ ಪ್ರಕರಣಗಳು ವರದಿ ಆಗಿವೆ.

ಇದೇ ಅವಧಿಯಲ್ಲಿ 55 ಸುಲಿಗೆ, 12 ಸರಗಳ್ಳತನ, 655 ರಾತ್ರಿ ಕಳವು, 75 ಮನೆ ಕಳ್ಳತನ, 375 ಸಾಧಾರಣ ಕಳ್ಳತನ , 517 ವಾಹನ ಕಳ್ಳತನ, 637 ಮಾರಣಾಂತಿಕ ವಲ್ಲದ ರಸ್ತೆ ಅಪಘಾತ, 229 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿವೆ.

‘ರಾತ್ರಿ ಹೊತ್ತು ರಸ್ತೆ ಬದಿಯ ಡಾಬಾ, ಕೆಫೆಗಳಲ್ಲಿ ಜನರು ಮನೋರಂಜನೆ ಉದ್ದೇಶಕ್ಕೆ ಹೆಚ್ಚು ಸೇರುತ್ತಿದ್ದು, ತಡರಾತ್ರಿ ಮೋಜು–ಮಸ್ತಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಅಪಘಾತ, ಅಪರಾಧ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ರಾತ್ರಿ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಕೋರಿದ್ದರು. ಎಸ್ಪಿ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಸೋಮವಾರ ಈ ಆದೇಶ ಪ್ರಕಟಿಸಿದ್ದಾರೆ. ಪೊಲೀಸ್‌ ಅಧಿನಿಯಮ 1963ರ ಅಡಿ ಈ ಆದೇಶ ಜಾರಿಯಾಗಿದೆ.

ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ

ಜಿಲ್ಲಾಡಳಿತದ ಆದೇಶ ಕಟ್ಟುನಿಟ್ಟಾಗಿ ಜಾರಿಯಾದಲ್ಲಿ ಇನ್ನು ಮುಂದೆ ರಸ್ತೆ ಬದಿ ಕಾಫಿ–ಟೀ ಮಾರಾಟವೂ ಬಂದ್ ಆಗಲಿದೆ. ತಡವಾಗಿ ಪ್ರಯಾಣಿಸುವವರು ಊಟಕ್ಕೆ ಪರದಾಡುವ ಸಾಧ್ಯತೆಯೂ ಇದೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚಾರ ಕೈಗೊಳ್ಳುವವರು ಮುನ್ನೆಚ್ಚರಿಕೆಯಾಗಿ ತಮ್ಮೊಂದಿಗೆ ನೀರು, ಆಹಾರ ಸಾಮಗ್ರಿ ಒಯ್ಯುವುದು ಅನಿವಾರ್ಯ ಆಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು