ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಕಾಲಮಿತಿಯೊಳಗೆ ಪ್ರಗತಿ ಸಾಧಿಸಿ: ದಿಗ್ವಿಜಯ್ ಬೋಡ್ಕೆ

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿ.ಪಂ. ಸಿಇಒ
Published 5 ಆಗಸ್ಟ್ 2023, 6:40 IST
Last Updated 5 ಆಗಸ್ಟ್ 2023, 6:40 IST
ಅಕ್ಷರ ಗಾತ್ರ

ರಾಮನಗರ: ‘ಉದ್ಯೋಗ ಖಾತ್ರಿ ಯೋಜನೆ, ಮಿಷನ್ ಅಮೃತ್ ಸರೋವರ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಕಾಲಮಿತಿಯಲ್ಲಿ ಸಾಧಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನುಷ್ಠಾನ ಇಲಾಖೆ ಅಧಿಕಾರಿಗಳು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ನರೇಗಾ ಹೆಚ್ಚು ಸಹಕಾರಿಯಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ನರೇಗಾ ಕಾಮಗಾರಿ ನಡೆಸಲು ಉತ್ತಮ ಅವಕಾಶವಿದೆ. ಯೋಜನೆಯಡಿ ಕೆಲಸಕ್ಕೆ ಯಾರೇ ಮುಂದೆ ಬಂದರೂ, ಅಂತಹವರಿಗೆ ನಿಯಮ ಪ್ರಕಾರ ಅವಕಾಶ ಕಲ್ಪಿಸಿಕೊಡಬೇಕು. ವೈಯಕ್ತಿಕ ಕಾಮಗಾರಿಗೆ ಪ್ರಥಮ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.

‘ಮಾನವ ದಿನಗಳ ಸೃಜನೆಯಲ್ಲಿ ಪ್ರಗತಿ ಸಾಧಿಸದ ಪಂಚಾಯಿತಿಗಳು ಈ ಕೂಡಲೇ ಆ ಬಗ್ಗೆ ಗಮನ ಹರಿಸಬೇಕು. ಮುಂದಿನ ಸಭೆ ಹೊತ್ತಿಗೆ ತಮಗೆ ನೀಡಿರುವ ಗುರಿಯನ್ನು ಸಾಧಿಸಿ ತೋರಿಸಬೇಕು. ಜಲ ಸಂಜೀವಿನಿ ಯೋಜನೆಯಡಿ ಈಗಾಗಲೇ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗೋಮಾಳ ಅಭಿವೃದ್ಧಿಗೆ ಸ್ಥಳ ಗುರುತಿಸಲಾಗಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

‘ಹಸಿರು ಸರೋವರ, ಜೈವಿಕ ಅನಿಲ ಘಟಕ, ನಾಲಾ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ ಕಾಮಗಾರಿ, ಶಾಲಾ ಕಾಂಪೌಂಡ್, ಭೋಜನಾಲಯ ಕಾಮಗಾರಿಗಳನ್ನು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಪ್ರಗತಿಯಲ್ಲಿ ಹಿಂದುಳಿಯಬಾರದು’ ಎಂದು ಹೇಳಿದರು.

ನೀರು ಪರೀಕ್ಷಿಸಿ: ‘ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಮುಂಚೆ, ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ವರದಿ ನೀಡಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆಯ ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ, ಘನತ್ಯಾಜ್ಯ, ದ್ರವತ್ಯಾಜ್ಯ ಘಟಕದ ಪ್ರಗತಿ ಸಾಧಿಸಬೇಕು. ಪ್ರತಿ ದಿನ ಆಟೊ ಮೂಲಕ ತ್ಯಾಜ್ಯ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಯೋಜನಾ ನಿರ್ದೇಶಕರು ಮಂಜುನಾಥ ಸ್ವಾಮಿ ಎಚ್.ಎನ್, ಸಹಾಯಕ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಮಟ್ಟದ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಿಡಿಒಗಳು, ತಾಂತ್ರಿಕ ಸಂಯೋಜಕ ಮತ್ತು ಸಹಾಯಕ ಎಂಜಿನಿಯರ್‌ಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದ್ದರು.

ಅಮೃತ್ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕೆರೆಗಳ ದಂಡೆ ಮೇಲೆ ಆ. 15ರಂದು ಧ್ವಜಾರೋಹಣ ನೆರವೇರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು
– ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ
‘ಡಿಜಿಟಲ್ ಗ್ರಂಥಾಲಯಕ್ಕೆ ಒತ್ತು ನೀಡಿ’
‘ಪಂಚಾಯಿತಿ ಮಟ್ಟದಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿಗೂ ಒತ್ತು ನೀಡಬೇಕು. ರಿಜಿಸ್ಟರ್‌ಗಳಲ್ಲಿ ಮಕ್ಕಳ ಹೆಸರು ನೋಂದಣಿ ಮಾಡಬೇಕು. ಗ್ರಂಥಾಲಯಗಳ ಮಾಹಿತಿಯನ್ನು ಪಂಚತಂತ್ರ 2.O ತಂತ್ರಾಂಶದಲ್ಲಿ ಸೇರಿಸಬೇಕು. ಏನೇ ಸಮಸ್ಯೆ ಇದ್ದರೂ ಸಂಬಂಧಪಟ್ಟವರ ಗಮನಕ್ಕೆ ತಂದು ಸರಿ‍ಪಡಿಸಿಕೊಳ್ಳಬೇಕು’ ಎಂದು ದಿಗ್ವಿಜಯ್ ಬೋಡ್ಕೆ ಹೇಳಿದರು. ಗ್ರಾಮ ಆರೋಗ್ಯ ಅಮೃತ ಅಭಿಯಾನ ಶಿಶುಪಾಲನಾ ಕೇಂದ್ರಗಳ ಸ್ಥಳ ಗುರುತಿಸುವಿಕೆ ಅಮೃತ್ ಗ್ರಾಮ ಪಂಚಾಯಿತಿಯ ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಇ-ಸ್ವತ್ತು ಪಂಚತಂತ್ರ 2.o ತಂತ್ರಾಂಶ ದಿನವಹಿ ನಗದು ಪುಸ್ತಕ ಮಾಸಿಕ ಪುಸ್ತಕಗಳನ್ನು ಮುಕ್ತಾಯಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT