ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಹೈಟೆಕ್ ಕ್ರೀಡಾಂಗಣಕ್ಕೆ ಮರಗಳ ಹೋಮ

ವಿವೇಕ್ ಕುದೂರು
Published : 2 ಅಕ್ಟೋಬರ್ 2024, 4:07 IST
Last Updated : 2 ಅಕ್ಟೋಬರ್ 2024, 4:07 IST
ಫಾಲೋ ಮಾಡಿ
Comments

ಕುದೂರು: ಪಟ್ಟಣದ ರಾಮಲೀಲಾ ಮೈದಾನದಲ್ಲಿ ₹13 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ನಿರ್ಮಿಸಲು ಮೈದಾನದಲ್ಲಿದ್ದ ಮರಗಳನ್ನು ಕಳೆದ ಎರಡು ದಿನಗಳಿಂದ ಕಡಿಯಲಾಗುತ್ತಿದೆ.

ಸುಮಾರು 2 ಎಕರೆ 27 ಗುಂಟೆ ವಿಸ್ತಿರ್ಣದಲ್ಲಿರುವ ವಿಶಾಲವಾದ ಮೈದಾನದ ಸುತ್ತಲೂ ಹಲವು ಜಾತಿಯ ಮರಗಳು ಸೊಂಪಾಗಿ ಬೆಳೆದಿದ್ದವು. ಮೈದಾನದ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿರುವ ಮರಗಳು ಗ್ಯಾಲರಿ ನಿರ್ಮಾಣಕ್ಕೆ ತೊಂದರೆಯಾಗುತ್ತದೆ ಎಂದು ಅವುಗಳನ್ನು ಕಡಿಯುವ ಕೆಲಸ ಆರಂಭವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ನೂರಾರು ಜನರು ವಾಯುವಿಹಾರ ನಡೆಸಿ ಮರದ ಕೆಳಗೆ ಕುಳಿತುಕೊಂಡು ವಿಶ್ರಮಿಸುತ್ತಿದ್ದರು.

ಅರಣ್ಯ ಇಲಾಖೆಯಿಂದ ಹರಾಜು ಪಡೆದ ಗುತ್ತಿಗೆದಾರ ಮರ ಕಡಿಯಲು ಬಂದಾಗ ನಾಗರಿಕರು ವಿರೋಧಿಸಿದ್ದರು. ಮೈದಾನಕ್ಕೆ ಇನ್ನೂ ಹಣ ಮಂಜೂರು ಆಗಿಲ್ಲ, ಎಸ್ಟಿಮೇಟ್ ಕಾಪಿ ತೋರಿಸಿ ಎಂದು ಗಲಾಟೆ ಮಾಡಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಮರ ಕಡಿಯಲು ಪಂಚಾಯಿತಿಯಲ್ಲಿಯೇ ಒಪ್ಪಿಗೆ ನೀಡಿರುವಾಗ ಗಲಾಟೆ ಮಾಡುವುದು ಸರಿಯಲ್ಲ ಎಂದು ಮನವರಿಕೆ ಮಾಡಿದರು.

ಕ್ರೀಡಾಂಗಣ ನಿರ್ಮಾಣದ ಸಂಬಂಧ ಪಟ್ಟಣದ ನಾಗರಿಕರಲ್ಲಿ ಪರ ವಿರೋಧದ ಚರ್ಚೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ. ಕೆಲವರು ಪಟ್ಟಣದ ಅಭಿವೃದ್ಧಿಯಾಗಬೇಕಾದರೆ ಈ ಕ್ರಮ ಅಗತ್ಯ ಎಂದರೆ ಇನ್ನೂ ಕೆಲವರು ಮರಗಳನ್ನು ಉಳಿಸಿಕೊಂಡು ಅದರ ಟೊಂಗೆಗಳನ್ನು ಮಾತ್ರ ಕಡಿದು ಕ್ರೀಡಾಂಗಣ ಮಾಡಬಹುದು ಎನ್ನುತ್ತಾರೆ.

ಹೈಟೆಕ್ ಮೈದಾನದಲ್ಲಿ ಏನೇನಿರಲಿದೆ: ಎರಡು ದಶಕಗಳ ಹಿಂದೆ ಕಟ್ಟಿದ ರಂಗಮಂದಿರವನ್ನು ಕೆಡವಿ ಆಧುನಿಕ ರೀತಿಯ ಮೈದಾನ ನಿರ್ಮಿಸಲಾಗುತ್ತಿದೆ. ಇದರ ಹಿಂಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪ್ರಸಾದನ ಕೊಠಡಿ, ಮೇಲ್ಭಾಗದಲ್ಲಿ ಚೆಸ್, ಕೇರಂ ನಂತಹ ಆಟಗಳನ್ನು ಆಡಲು ಒಳಾಂಗಡಣ ಕ್ರೀಡಾ ಪ್ರದೇಶ ನಿರ್ಮಾಣ ಮಾಡಲಾಗುತ್ತದೆ.

ರಂಗಮಂದಿರದ ಒಂದು ಪಕ್ಕದಲ್ಲಿ ಮಕ್ಕಳ ಸುಂದರ ಉದ್ಯಾನ ನಿರ್ಮಿಸಿ, ಅದರಲ್ಲಿ ಮಕ್ಕಳು ಆಡಬಹುದಾದ ಆಟಿಕೆಗಳನ್ನು ಅಳವಡಿಸುವಂತೆ ವಿನ್ಯಾಸ ಮಾಡಲಾಗಿದೆ. ಈಗಿರುವ ಮೈದಾನದ ರಂಗಮಂದಿರದ ಎಡಭಾಗದಿಂದ ಸೊಸೈಟಿ ಕಟ್ಟಡ ಹಿಂಭಾಗದವರೆಗೆ ‘ಎಲ್’ ಆಕಾರದಲ್ಲಿ ಜನರು ಕುಳಿತುಕೊಳ್ಳುವಂತಹ ಮೆಟ್ಟಿಲುಗಳನ್ನು ಮಾಡಿ, ಟೆಂಜೈಲ್ ರೂಫಿಂಗ್ ಹಾಕಲಾಗುತ್ತದೆ. ಮೈದಾನದಲ್ಲಿ ಆಡುವ ಆಟಗಳು ಮತ್ತು ರಂಗಮಂದಿರದ ಚಟುವಟಿಕೆಗಳನ್ನು ಕುಳಿತು ನೋಡುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಕ್ರಿಕೆಟ್ ಅಭ್ಯಾಸ ಮಾಡಲು ನೆಟ್ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ ವೇಳೆಯೂ ಆಟವಾಡಲು ಮತ್ತು ಪಂದ್ಯಾವಳಿಗಳನ್ನು ಏರ್ಪಡಿಸಲು ಅನುಕೂಲವಾಗುವಂತಹ ನಾಲ್ಕು ಹೈ ಮಾಸ್ಟ್ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಮೈದಾನದ ಪಕ್ಕದಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ ತೆರವುಗೊಂಡ ನಂತರ, ಆ ಜಾಗದಲ್ಲಿ ಒಳಾಂಗಣ ಸ್ಟೇಡಿಯಂ ನಿರ್ಮಾಣ ಮಾಡಿ ಅಲ್ಲಿ ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಟೆನಿಸ್ ಆಟಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಮೈದಾನಕ್ಕೆ ಮೂರು ಗೇಟುಗಳನ್ನು ಅಳವಡಿಸಲಾಗುವುದು. ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಗೇಟ್ ಗಳನ್ನು ನಿರ್ಮಿಸಲು ನೀಲ ನಕ್ಷೆ ಸಿದ್ಧಪಡಿಸಲಾಗಿದೆ.

ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮರ ಕಡಿಯಲು ಬಹುಮತಿ ಸಿಕ್ಕ ಕಾರಣ ಒಪ್ಪಿಗೆ ನೀಡಲಾಯಿತು. ಮೈದಾನದ ಪಶ್ಚಿಮ, ದಕ್ಷಿಣ ದಿಕ್ಕಿನಲ್ಲಿರುವ ಮರಗಳನ್ನು ಮಾತ್ರ ಕಡಿಯಬೇಕು ಎಂದು ತಿಳಿಸಲಾಗಿದೆ.

ಪುರುಷೋತ್ತಮ್, ಪಿಡಿಒ, ಕುದೂರು ಗ್ರಾಮ ಪಂಚಾಯಿತಿ

ಮರಗಳನ್ನು ಕಡಿಯುವುದು ಸುಲಭ, ಬೆಳೆಸುವುದು ಬಹಳ ಕಷ್ಟ. ಗೊತ್ತಿದ್ದರೂ ಮೈದಾನದ ನೆಪ ಹೇಳಿ ಗಿಡಗಳನ್ನು ನಾಶ ಮಾಡುತ್ತಿರುವುದು ಸರಿಯಲ್ಲ.

ಕೆ.ಆರ್. ಯತಿರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಕುದೂರು.

ಕುದೂರು ಪಟ್ಟಣದ ಶ್ರೀರಾಮಲೀಲ ಮೈದಾನ ನೀಲ ನಕ್ಷೆ.
ಕುದೂರು ಪಟ್ಟಣದ ಶ್ರೀರಾಮಲೀಲ ಮೈದಾನ ನೀಲ ನಕ್ಷೆ.
ನೀಲ ನಕ್ಷೆಯಲ್ಲಿರುವ ಮಕ್ಕಳ ಆಟದ ಮೈದಾನ.
ನೀಲ ನಕ್ಷೆಯಲ್ಲಿರುವ ಮಕ್ಕಳ ಆಟದ ಮೈದಾನ.
ಕುದೂರು ಪಟ್ಟಣದ ಶ್ರೀ ರಾಮಲೀಲಾ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು.
ಕುದೂರು ಪಟ್ಟಣದ ಶ್ರೀ ರಾಮಲೀಲಾ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು.
ಕುದೂರು ಪಟ್ಟಣದ ಶ್ರೀ ರಾಮಲೀಲಾ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು.
ಕುದೂರು ಪಟ್ಟಣದ ಶ್ರೀ ರಾಮಲೀಲಾ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು.
ಕುದೂರು ಪಟ್ಟಣದ ಶ್ರೀ ರಾಮಲೀಲಾ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು.
ಕುದೂರು ಪಟ್ಟಣದ ಶ್ರೀ ರಾಮಲೀಲಾ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT