ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ನಗರಸಭೆ ಕಾಂಗ್ರೆಸ್‌ ತೆಕ್ಕೆಗೆ, ಮಹಿಳೆಯರ ಸಾರಥ್ಯ: ಜೆಡಿಎಸ್‌ಗೆ ಮುಖಭಂಗ

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡು ಮಹಿಳೆಯರ ಪಾಲು; ಫಲಿಸದ ಜೆಡಿಎಸ್‌ ತಂತ್ರ
Last Updated 10 ನವೆಂಬರ್ 2021, 1:59 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ನಗರಸಭೆಯಲ್ಲಿ ಮಹಿಳಾ ಆಡಳಿತದ ಶಕೆ ಆರಂಭ ಆಗಿದ್ದು, ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಿ.ಸಿ. ಪಾರ್ವತಮ್ಮ ಹಾಗೂ ಉಪಾಧ್ಯಕ್ಷರಾಗಿ ಟಿ. ಜಯಲಕ್ಷ್ಮಮ್ಮ ಮಂಗಳವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಕಾಂಗ್ರೆಸ್ ನಿಂದ 30ನೇ ವಾರ್ಡಿನ ಬಿ.ಸಿ. ಪಾರ್ವತಮ್ಮ, 31ನೇ ವಾರ್ಡಿನ ವಿಜಯಕುಮಾರಿ ಹಾಗೂ ಜೆಡಿಎಸ್‌ನಿಂದ 8ನೇ ವಾರ್ಡಿನ ಸದಸ್ಯೆ ಮಂಜುಳಾ ವೆಂಕಟೇಶ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಒಂದನೇ ವಾರ್ಡಿನ ಟಿ.ಜಯಲಕ್ಷ್ಮಮ್ಮ , ಜೆಡಿಎಸ್ ನಿಂದ 21ನೇ ವಾರ್ಡಿನ ಕೆ.ರಮೇಶ್ ಕಣಕ್ಕೆ
ಇಳಿದರು.

ಬಿ.ಸಿ. ಪಾರ್ವತಮ್ಮ ಪರ ಸಂಸದ ಡಿ.ಕೆ. ಸುರೇಶ್ ಮತ್ತು ಪಕ್ಷೇತರ ಸದಸ್ಯ ಸೇರಿ 21 ಮತಗಳು ಚಲಾವಣೆಯಾದರೆ, ಪ್ರತಿಸ್ಪರ್ಧಿ ಮಂಜುಳಾ ಪರವಾಗಿ ಶಾಸಕಿ ಅನಿತಾ ಸೇರಿ 12 ಮತಗಳು ಲಭಿಸಿದವು. 9 ಮತಗಳ ಅಂತರದಿಂದ ಪಾರ್ವತಮ್ಮ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ನಿಂದ ಮತ್ತೊಬ್ಬ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವಿಜಯಕುಮಾರಿ ತಮ್ಮ ಮತವನ್ನು ಪಾರ್ವತಮ್ಮ ಅವರಿಗೆ ಚಲಾಯಿಸಿ ಅಚ್ಚರಿ ಮೂಡಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿ ಕಾಂಗ್ರೆಸ್‍ನ ಟಿ.ಜಯಲಕ್ಷ್ಮಮ್ಮ 21 ಮತಗಳನ್ನು ಪಡೆದರೆ, ಜೆಡಿಎಸ್ ನ ಕೆ.ರಮೇಶ್ 12 ಮತ ಪಡೆದು ನಿರಾಸೆ ಅನುಭವಿಸಿದರು.

ನಗರಸಭೆಗೆ 3ನೇ ಬಾರಿಗೆ ಆಯ್ಕೆಯಾಗಿರುವ ಪಾರ್ವತಮ್ಮ, 1995ರಲ್ಲಿ ಪುರಸಭೆಗೆ ಆಯ್ಕೆಯಾಗಿದ್ದ ವೇಳೆ ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‍ನ ಮಹಿಳಾ ಘಟಕದ ಅಧ್ಯಕ್ಷರಾಗಿ ರಾಜಕೀಯ ಅನುಭವವೂ ಇದೆ.

ಕಾಂಗ್ರೆಸ್‌ನೊಳಗೆ ಗೊಂದಲ: ಅಧ್ಯಕ್ಷರ ಆಯ್ಕೆ ಚುನಾವಣೆಗೆ ಮುನ್ನ ಹಲವು ಚಟುವಟಿಕೆಗಳು ನಡೆದಿದ್ದು, ಗೊಂದಲ ಮೂಡಿಸಿತ್ತು. ಈ ಪರಿಸ್ಥಿತಿಯ ಲಾಭ ಪಡೆಯಲು ಜೆಡಿಎಸ್‌ ಪ್ರಯತ್ನಿಸಿತಾದರೂ ಫಲ ನೀಡಲಿಲ್ಲ.

ಕಾಂಗ್ರೆಸ್‌ನಲ್ಲಿನ ಎರಡು ಬಣಗಳು ಮೊದಲ ಸರದಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ತನಗೇ ಬೇಕೆಂದು ಪಟ್ಟು ಹಿಡಿದು, ಸ್ವಪಕ್ಷೀಯ ನಾಯಕರಿಗೆ ಸೆಡ್ಡು ಹೊಡೆದಿದ್ದವು. ಅಂತಿಮವಾಗಿ ಪಾರ್ವತಮ್ಮ ಅವರ ಹೆಸರು ಘೋಷಣೆ ಆಯಿತು. ಆದರೆ ಇದಕ್ಕೆ ಮತ್ತೊಂದು ಬಣದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಮತಚಲಾಯಿಸಲು ಮುಂದಾದರು ಎನ್ನಲಾಗಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಡಿ.ಕೆ. ಸುರೇಶ್‌ ತಾವೇ ಕಣಕ್ಕೆ ಇಳಿದರು. ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಗೇ ಎಲ್ಲ ಮತಗಳು ಚಲಾವಣೆ ಆಗುವಂತೆ
ನೋಡಿಕೊಂಡರು.

ಒಂದೊಮ್ಮೆ ಕಾಂಗ್ರೆಸ್‌ನಲ್ಲಿ ಬಂಡಾಯ ಪರಿಸ್ಥಿತಿ ಎದುರಾದಲ್ಲಿ ಅದರ ಲಾಭ ಪಡೆದು ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ಪ್ರಯತ್ನ ನಡೆಸಿತು. ಶಾಸಕಿ ಅನಿತಾ ಕುಮಾರಸ್ವಾಮಿ ಹಾಜರಿದ್ದದ್ದು ಜೆಡಿಎಸ್‌ ಪಾಳಯದಲ್ಲಿ ಉತ್ಸಾಹ ಮೂಡಿಸಿತು. ಆದರೆ ಹೆಚ್ಚಿನ ಬೆಳವಣಿಗೆಗೆ ಕಾಂಗ್ರೆಸ್‌ ನಾಯಕರು ಅವಕಾಶ ನೀಡಲಿಲ್ಲ.

ಆಯ್ಕೆ ಪ್ರಕ್ರಿಯೆ ಮುಗಿದ ನಂತರವು ಕಾಂಗ್ರೆಸ್‌ ಮುಖಂಡರ ಮುನಿಸು ಮುಂದುವರಿಯಿತು. ಮುಖಂಡರಾದ ಸಿ.ಎಂ. ಲಿಂಗಪ್ಪ. ಸಯ್ಯದ್ ಜಿಯಾವುಲ್ಲಾ ಹಾಗೂ ಇಕ್ಬಾಲ್‌ ಹುಸೇನ್‌ ಪರಸ್ಪರ ಎದುರಾಗದೆಯೇ ನಿರ್ಗಮಿಸಿದರು.

ನಾಲ್ವರಿಗೆ ಅಧಿಕಾರ ಹಂಚಿಕೆ

ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರ ಹಂಚಿಕೆ ಸೂತ್ರದ ಮೊರೆ ಹೋಗಿದೆ. ಈಗ ಚಾಲ್ತಿಯಲ್ಲಿರುವ ಮೀಸಲಾತಿಯು ಮುಂದಿನ ಎರಡೂವರೆ ವರ್ಷದವರೆಗೆ ಜಾರಿಯಲ್ಲಿ ಇರಲಿದೆ. ಈ 28 ತಿಂಗಳ ಅಧಿಕಾರಾವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ತಲಾ 7 ತಿಂಗಳಂತೆ ನಾಲ್ವರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ 14 ಮತ್ತು 16 ತಿಂಗಳಂತೆ ಇಬ್ಬರಿಗೆ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್‍ನ ಹಿರಿಯ ನಾಯಕರ ಬಣದ ಪರವಾಗಿರುವ ಪಾರ್ವತಮ್ಮ 7 ತಿಂಗಳು ಅವಧಿ ಪೂರೈಸಿದ ನಂತರ, ಇಕ್ಬಾಲ್‌ ಹುಸೇನ್‌ ಬಣದ ವಿಜಯಕುಮಾರಿ ಅವರಿಗೆ ಅವಕಾಶ ಸಿಗಲಿದೆ. ಇನ್ನಿಬ್ಬರು ಆಕಾಂಕ್ಷಿಗಳಿಗೆ ನಂತರದಲ್ಲಿ ಅವಕಾಶ ಸಿಗಲಿದೆ.
ಅದೇ ರೀತಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿರುವ ಜಯಲಕ್ಷ್ಮಮ್ಮ 14 ತಿಂಗಳು ಹಾಗೂ ನಂತರದಲ್ಲಿ ಸೋಮಶೇಖರ್ ಉಳಿದ 16 ತಿಂಗಳ ಅವಧಿಗೆ ಅವಕಾಶ ನೀಡುವ ನಿರ್ಧಾರವನ್ನು ಕಾಂಗ್ರೆಸ್ ವರಿಷ್ಠರು ಕೈಗೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT