ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಪರಿಶಿಷ್ಟರ ಮೇಲೆ 288 ದೌರ್ಜನ್ಯ ಪ್ರಕರಣ; ಶಿಕ್ಷೆ ಶೂನ್ಯ

ಆರು ವರ್ಷದಲ್ಲಿ 19 ಪರಿಶಿಷ್ಟರ ಕೊಲೆ: 40 ಮಹಿಳೆಯರ ಮೇಲೆ ಅತ್ಯಾಚಾರ
Published 20 ಜನವರಿ 2024, 4:33 IST
Last Updated 20 ಜನವರಿ 2024, 4:33 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕಳೆದ 6 ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಮೇಲೆ ಬರೋಬ್ಬರಿ 288 ದೌರ್ಜನ್ಯ ಪ್ರಕರಣಗಳು ನಡೆದಿವೆ. ಈ ಪೈಕಿ, 19 ಮಂದಿ ಮಾರಣಾಂತಿಕ ಹಲ್ಲೆಯಿಂದಾಗಿ ಜೀವ ಕಳೆದುಕೊಂಡಿದ್ದರೆ, 40 ಮಹಿಳೆಯರ ಮೇಲೆ ಅತ್ಯಾಚಾರದ ಕ್ರೌರ್ಯ ನಡೆದಿದೆ. ಇಷ್ಟಾದರೂ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯ!

ರಾಮನಗರವು ಜಿಲ್ಲೆಯಾದಾಗಿನಿಂದಲೂ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಪ್ರತಿ ವರ್ಷ ಎರಡಂಕಿಯಷ್ಟು ದಾಖಲಾಗುತ್ತಿವೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಮತ್ತೊಂದೆಡೆ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಸಹ ಕಡಿಮೆಯಾಗುತ್ತಿದೆ.

ಕಳೆದ ವರ್ಷ ಅಧಿಕ: ಜಿಲ್ಲೆಯಲ್ಲಿ ಎರಡು ವರ್ಷದಿಂದ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ. 2022–23ನೇ ಸಾಲಿನಲ್ಲಿ 73 ಪ್ರಕರಣಗಳು ದಾಖಲಾಗಿದ್ದರೆ, 2023–24ನೇ ಸಾಲಿನಲ್ಲಿ ಡಿ. 17ರವರೆಗೆ 48 ದೌರ್ಜನ್ಯಗಳು ವರದಿಯಾಗಿವೆ. ಹೆಚ್ಚಿನ ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ಎಂಬುದು ಗಮನಾರ್ಹ.

‘ದಲಿತ ಸಂಘ–ಸಂಘಟನೆಗಳು ಕ್ರಿಯಾಶೀಲವಾದ ನಂತರ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂದಿಗೂ ಎಷ್ಟೋ ಘಟನೆಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ದೂರು ಕೊಟ್ಟರೆ ಮೇಲ್ವರ್ಗದವರು ನಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂಬ ಭಯ ಒಂದೆಡೆಯಾದರೆ, ಪೊಲೀಸ್–ಕೋರ್ಟ್ ಅಂತ ಅಲೆದು ನ್ಯಾಯ ಪಡೆಯುವ ಸಾಮರ್ಥ್ಯ ಪರಿಶಿಷ್ಟರಿಗೆ ಇಲ್ಲದಿರುವುದು ಮತ್ತೊಂದು ಕಾರಣವಾಗಿದೆ’ ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾಗಿರುವ ರಾಮನಗರದ ಡಿ. ನಾರಾಯಣ್.

ಠಾಣೆ ಮಟ್ಟದಲ್ಲೇ ರಾಜಿ: ದೌರ್ಜನ್ಯಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಪೊಲೀಸ್ ಠಾಣೆ ಮಟ್ಟದಲ್ಲಿ ರಾಜಿಯಾಗುತ್ತಿವೆ. ಇದಕ್ಕೆ ಮೇಲ್ವರ್ಗದವರ ಪ್ರಭಾವ ಹಾಗೂ ದೌರ್ಜನ್ಯಕ್ಕೊಳಗಾದವರ ಅಸಹಾಯಕತೆಯೂ ಕಾರಣವಾಗಿದೆ. ರಾಜಿಯು ಕೆಲವೊಮ್ಮೆ ಉತ್ತಮ ಉದ್ದೇಶ ಹೊಂದಿದ್ದರೆ, ಉಳಿದಂತೆ ಸಂತ್ರಸ್ತರಿಗೆ ಒಂದಿಷ್ಟು ಹಣ ಕೊಟ್ಟು ನ್ಯಾಯ ನಿರಾಕರಿಸುವ ಸಾಧನವೂ ಆಗಿದೆ.

‘ಪೊಲೀಸರು ಸಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂತ್ರಸ್ತರಿಗೆ ನೈತಿಕ ಧೈರ್ಯ ತುಂಬಿ ನ್ಯಾಯದ ಭರವಸೆ ಮೂಡಿಸುವಂತೆ ಪ್ರಕರಣದ ತನಿಖೆ ನಡೆಸುವುದಿಲ್ಲ. ಕೆಲವೊಮ್ಮೆ ಅವರೇ ಸಂತ್ರಸ್ತರನ್ನು ಹೆದರಿಸಿ ರಾಜಿಯಾಗುವಂತೆ ಮಾಡುತ್ತಾರೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಅಥವಾ ಕರೆದು ವಿಚಾರಣೆ ನಡೆಸಲು ನಿರ್ಲಕ್ಷ್ಯ ತೋರುತ್ತಾರೆ. ಇದು ಸಹ ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಲು ಕಾರಣವಾಗಿದೆ’ ಎಂದು ಆದಿ ಜಾಂಭವ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಗುರುಮೂರ್ತಿ ಬೇಸರ ವ್ಯಕ್ತಪಡಿಸಿದರು.

ದುರುದ್ದೇಶಕ್ಕೆ ಬಳಕೆ: ‘ಪರಿಶಿಷ್ಟರ ಮೇಲಿನ ದೌರ್ಜನ್ಯಗಳಲ್ಲಿ ಕೆಲವು ದುರುದ್ದೇಶದ ಪ್ರಕರಣಗಳು ಸಹ ಇವೆ. ಸರ್ಕಾರಿ ಅಧಿಕಾರಿಗಳು ಸೇರಿದಂತೆ, ಕೆಲವರ ವಿರುದ್ಧ ಇಂತಹ ಸುಳ್ಳು ಪ್ರಕರಣಗಳು ದಾಖಲಾಗಿವೆ. ಸಂತ್ರಸ್ತರೆಂದು ಹೇಳಿಕೊಳ್ಳುವವರಿಗೆ ಮತ್ತು ಅವರ ಜೊತೆ ನಿಲ್ಲುವವರಿಗೆ ಎಫ್‌ಐಆರ್‌ ದಾಖಲಿಸುವಾಗ ತೋರುವ ಉತ್ಸಾಹ ನಂತರ ಇರುವುದಿಲ್ಲ. ಹಾಗಾಗಿ, ಕೆಲ ಪ್ರಕರಣಗಳಲ್ಲಿ ಆರೋಪಪಟ್ಟಿ ಬದಲು ‘ಬಿ’ ರಿಪೋರ್ಟ್ ಹಾಕುತ್ತೇವೆ ಆಗ ದೌರ್ಜನ್ಯ ತಡೆ ಕಾಯ್ದೆ ಅರ್ಥ ಕಳೆದುಕೊಳ್ಳುತ್ತದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು.

‘ಪರಿಶಿಷ್ಟ ಸಮುದಾಯದವರ ಹೆಸರು ಹೇಳಿಕೊಂಡು ಕೆಲವರು ಸುಳ್ಳು ಪ್ರಕರಣ ದಾಖಲಿಸಿ, ಕಡೆಗೆ ರಾಜಿ ಮಾಡಿಸಿ ಹಣ ವಸೂಲಿ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ. ಹಾಗಾಗಿ, ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿ, ಕೋರ್ಟ್‌ನಲ್ಲಿ ಪ್ರಕರಣ ಗಟ್ಟಿಯಾಗಿ ನಿಲ್ಲುವುದಿಲ್ಲ. ಇನ್ನು ಶಿಕ್ಷೆ ಎಲ್ಲಿಂದ ಆಗಬೇಕು ಹೇಳಿ. ನಮ್ಮವರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ಪರಿಶಿಷ್ಟ ಸಮುದಾಯದ ಮುಖಂಡರೊಬ್ಬರು ಹೇಳಿದರು.

ಉಪ ವಿಭಾಗ ಮಟ್ಟದಲ್ಲಿ ಪರಿಶಿಷ್ಟರ ಮೂರು ಕುಂದುಕೊರತೆ ಸಭೆಯನ್ನು ಈಗಾಗಲೇ ಮಾಡಿದ್ದೇನೆ. ಮತ್ತೊಂದು ಸಭೆಯನ್ನು ಶೀಘ್ರವೇ ಕರೆಯಲಿದ್ದೇನೆ.

-ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

‘ಕುಂದುಕೊರತೆ ಸಭೆಗೆ ಮೀನಮೇಷ’

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಠಾಣೆ ತಾಲ್ಲೂಕು ಉಪ ವಿಭಾಗ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಸಮುದಾಯಗಳೊಂದಿಗೆ ಪೊಲೀಸರು ಕುಂದುಕೊರತೆ ಸಭೆ ನಡೆಸಿ ನಮ್ಮ ಅಹವಾಲು ಆಲಿಸಬೇಕು. ಆದರೆ ಠಾಣೆ ಹಂತದಲ್ಲಿ ಹಾಗೂ ತಾಲ್ಲೂಕು ಹಂತದಲ್ಲಿ ಸಭೆಗಳು ನಡೆಯುತ್ತಿವೆ. ಆದರೆ ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ಹಲವು ಸಲ ಒತ್ತಾಯಿಸಿದರೂ ಸಭೆ ಕರೆದಿಲ್ಲ’ ಎಂದು ಸಮತಾ ಸೈನಿಕ ದಳದ ಕಾರ್ಯಾಧ್ಯಕ್ಷ ಡಾ. ಜಿ. ಗೋವಿಂದಯ್ಯ ಬೇಸರ ವ್ಯಕ್ತಪಡಿಸಿದರು. ‘ಕಾಟಾಚಾರದ ಸಭೆಗಳು’ ಪರಿಶಿಷ್ಟ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ಪ್ರತಿಬಂಧ) ನಿಯಮದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚಿಸಿ ಸ್ಥಳೀಯ ಪರಿಶಿಷ್ಟ ಮುಖಂಡರನ್ನು ಸದಸ್ಯರನ್ನಾಗಿ ನೇಮಿಸಲಾಗಿರುತ್ತದೆ. ನಿಯಮದ ಪ್ರಕಾರ ಉಪ ವಿಭಾಗ ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿರುವ ಸಭೆಯಲ್ಲಿ ಪರಿಶಿಷ್ಟರಿಗೆ ಸಂಬಂಧಿಸಿದ ಯೋಜನೆಗಳ ಇಲಾಖಾವಾರು ಪ್ರಗತಿ ಸೌಲಭ್ಯಗಳು ಕುಂದುಕೊರತೆಗಳ ಕುರಿತು ಚರ್ಚಿಸಬೇಕು. ಆದರೆ ಸಭೆ ಕಾಟಾಚಾರಕ್ಕೆ ನಡೆಯುತ್ತಿದೆ. ಸದಸ್ಯರು ಎತ್ತುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ’ ಎನ್ನುತ್ತಾರೆ ಉಪ ವಿಭಾಗ ಮಟ್ಟದ ಸಮಿತಿ ಸದಸ್ಯ ಹರೀಶ್ ಬಾಲು. ಆಯೋಗದ ಸದಸ್ಯರ ಸಭೆಗೂ ಗ್ರಹಣ ‘ಕಳೆದ ಅ 26ರಂದು ರದ್ದುಗೊಂಡಿದ್ದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಸದಸ್ಯೆ ಡಾ. ಅಂಜು ಬಾಲಾ ಅವರ ಸಭೆ ಮತ್ತೆ ನಿಗದಿಯಾಗಲೇ ಇಲ್ಲ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲದೆ ಶಿಷ್ಟಾಚಾರ ಪಾಲಿಸದೆ ಕಾಟಾಚಾರಕ್ಕೆ ಸಭೆ ಆಯೋಜಿಸಲಾಗಿದೆ ಎಂದು ಸಭೆ ಮೊಟಕುಗೊಳಿಸಿದ್ದ ಅಂಜು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸದ್ಯದಲ್ಲೇ ಸಭೆಗೆ ಮತ್ತೊಂದು ದಿನಾಂಕ ನಿಗದಿಪಡಿಸಿ ಕರೆಯಿರಿ ಎಂದು ಸೂಚನೆ ನೀಡಿದ್ದರು. ಆದರೆ ಇದುವರೆಗೆ ಸಭೆಗೆ ದಿನಾಂಕ ನಿಗದಿಪಡಿಸಿ ಅಂಜು ಅವರನ್ನು ಕರೆದಿಲ್ಲ’ ಎಂದು ಜಿಲ್ಲಾ ದಲಿತ ಸಂಘಟನೆ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ದೂರಿದರು.

ಶಿಕ್ಷೆ ಹೆಚ್ಚಳಕ್ಕೆ ಕ್ರಮ; ವಿಚಾರಣೆ ಕುರಿತು ನಿಗಾ

‘ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದಾಗ ಮುಲಾಜಿಲ್ಲದೆ ಪ್ರಕರಣ ದಾಖಲಿಸುತ್ತೇವೆ. ಆರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲಾಗುತ್ತದೆ. ಪ್ರಕರಣಗಳ ವಿಚಾರಣೆಗೆ ಮೇಲ್ವಿಚಾರಣೆ ಕೋಶ ರಚಿಸಿ ನಿಗಾ ವಹಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಕೋಶವು ಸಮನ್ಸ್ ಜಾರಿ ಸಾಕ್ಷಿಗಳಿಂದ ಹೇಳಿಕೆ ಪಡೆಯುವುದು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಮನ ಹರಿಸುತ್ತದೆ. ಶಿಕ್ಷೆ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಪ್ರಮುಖ ಪ್ರಕರಣಗಳ ವಿಚಾರಣೆ ಕುರಿತು ನನ್ನನ್ನು ಒಳಗೊಂಡಂತೆ ಹಿರಿಯ ಅಧಿಕಾರಿಗಳು ನಿಗಾ ಇಡುತ್ತಿದ್ದೇವೆ. ಸದ್ಯ ನಾನು 3 ಕೊಲೆ ಪ್ರಕರಣಗಳನ್ನು ಗಮನಿಸುತ್ತಿದ್ದೇನೆ. ಉಳಿದಂತೆ ಎಎಸ್‌ಪಿ ಡಿವೈಎಸ್ಪಿ ಇನ್‌ಸ್ಪೆಕ್ಟರ್‌ಗಳಿಗೂ ಕೆಲ ಪ್ರಕರಣಗಳನ್ನು ವಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಸಂತ್ರಸ್ತರಿಗೆ ಪರಿಹಾರ; ಜಾಗೃತಿ ಕಾರ್ಯಕ್ರಮ ‘ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದಾಗ ಐಪಿಸಿ ಕಲಂಗಳನ್ನು ಆಧರಿಸಿ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಹಾರ ನೀಡಲಾಗುತ್ತದೆ. ಎಫ್‌ಐಆರ್ ದಾಖಲಾದಾಗ ಆರೋಪಪಟ್ಟಿ ಸಲ್ಲಿಕೆಯಾದಾಗ ಹಾಗೂ ಅಪರಾಧಿಗಳಿಗೆ ಶಿಕ್ಷೆಯಾದಾಗ ಪರಿಹಾರ ಪಾವತಿಸಲಾಗುತ್ತದೆ. ದೌರ್ಜನ್ಯ ನಡೆದ ಗ್ರಾಮಕ್ಕೆ ಇಲಾಖೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಶಾಂತಿ ಸಭೆ ನಡೆಸುತ್ತೇವೆ. ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಾಂತಿಪ್ರಿಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT