ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆವರಣದಲ್ಲಿ ಮತಾಂತರಕ್ಕೆ ಪ್ರಚೋದನೆ: ಪ್ರಕರಣ ದಾಖಲು

Last Updated 14 ಡಿಸೆಂಬರ್ 2019, 13:35 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಅಣ್ಣಹಳ್ಳಿಯ ಕೆಂಗಲ್‌ ಹನುಮಂತಯ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಂಟು ಮಂದಿ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದೇ 12ರಂದು ರಾತ್ರಿ 8 ಗಂಟೆ ಸುಮಾರಿಗೆ ಶಾಲೆಯ ಆವರಣದಲ್ಲಿ 200–250 ಮಂದಿ ಸೇರಿದ್ದರು. ಈ ಸಂದರ್ಭ ಕ್ರೈಸ್ತ ಮಿಶನರಿಯೊಂದಕ್ಕೆ ಸೇರಿದವರು ಎನ್ನಲಾದ ಕೆಲವು ಮಂದಿ ಧರ್ಮ ಪ್ರಚಾರ ಕರಪತ್ರಗಳನ್ನು ಹಂಚಿ ಜನರನ್ನು ಓಲೈಕೆ ಮಾಡುವ ಯತ್ನದಲ್ಲಿ ಇದ್ದರು’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಕಾರ್ಯಕ್ರಮ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಸಮಯ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿದ್ದು, ನಂತರದಲ್ಲಿ ಕಾರ್ಯಕ್ರಮ ಮೊಟಕುಗೊಂಡಿದೆ. ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಂಟು ಮಂದಿ ವಿರುದ್ಧ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಅನುಮತಿ ಇಲ್ಲ: ಸರ್ಕಾರಿ ಶಾಲೆಯಲ್ಲಿ ಧರ್ಮವೊಂದರ ಪ್ರಚಾರ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಇಸಿಒ ಗೋವಿಂದ ಸ್ವಾಮಿ ಹಾಗೂ ಸಿಆರ್‌ಪಿ ಚಂದ್ರು ಅವರನ್ನು ಒಳಗೊಂಡ ತಂಡವು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಕಾರ್ಯಕ್ರಮಕ್ಕೆ ಶಾಲೆ ಮುಖ್ಯ ಶಿಕ್ಷಕರಿಂದ ಆಗಲಿ, ಎಸ್‌ಡಿಎಂಸಿ ಸಮಿತಿಯಿಂದ ಆಗಲಿ ಯಾವುದೇ ಅನುಮತಿ ಪಡೆದಿರಲಿಲ್ಲ. ಸಂಜೆ ನಂತರ ಅತಿಕ್ರಮ ಪ್ರವೇಶ ಮಾಡಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ಇಲಾಖೆಯ ಉಪನಿರ್ದೇಶಕರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT