ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಹರತಾಳ, ಸಾರಾಯಿ ನಾಶ ಚಳವಳಿ ನೆನಪು

ಬಗಿನಗೆರೆಯಲ್ಲಿದೆ ‘ಗಾಂಧಿ ಘರ್’; ಸಂರಕ್ಷಣೆಯಾಗಲಿ ಇತಿಹಾಸದ ಕುರುಹುಗಳು
Last Updated 15 ಆಗಸ್ಟ್ 2022, 4:18 IST
ಅಕ್ಷರ ಗಾತ್ರ

ಮಾಗಡಿ: ಸರ್ವ ಭಾರತೀಯರ ಹಬ್ಬ ಸ್ವಾತಂತ್ರ್ಯೋತ್ಸವ. ಇದಕ್ಕಾಗಿ ದುಡಿದ ಜನರು ಅಸಂಖ್ಯ. ಅದರಲ್ಲಿ ಮಾಗಡಿಯ ಪಾಲೂ ಇದೆ ಎಂಬುದು ಹೆಮ್ಮೆಯ ವಿಚಾರ.

ಗಾಂಧೀಜಿ ಕರೆಯ ಮೇರೆಗೆ ಮಾಗಡಿ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಹರ್ತಿ ಆದಿರಾಜಯ್ಯ, ಪೋಲೋಹಳ್ಳಿ ಚಿಕ್ಕಣ್ಣಪ್ಪ, ಶಿವರಾಮ್ ಸಿಂಗ್, ಎಲ್.ರಾಮಚಂದ್ರ ರಾವ್, ಕೆ.ನಾರಾಯಣ ಶೆಟ್ಟಿ, ಪ್ರಜಾವಾಣಿ ನರಸಿಂಹ ಶೆಟ್ಟರು, ಸೋಲೂರು ಸಿದ್ದಪ್ಪ, ದಬ್ಬಗುಳಿ ಹನುಮಂತಯ್ಯ, ಕೂಟ್ಲು ತಿಮ್ಮರಾಯಪ್ಪ, ಗೊಲ್ಲಹಳ್ಳಿ ಚಿಕ್ಕೇಗೌಡ, ಟಿ.ಡಿ. ಮಾರಣ್ಣ, ಕರ್ಲಮಂಗಲ ಕೃಷ್ಣಮೂರ್ತಿ, ಎಂ.ಎಸ್. ರಾಮಚಂದ್ರ ರಾವ್, ಹೊಸಪೇಟೆ ಸಂಪತ್ ಮಾರದ್, ಎಂ.ಬಿ. ಮರಿಗಂಗಣ್ಣ ತಂಡದವರು 1935ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಬಾಪೂಜಿ ಮಾತುಗಳಿಂದ ಸ್ಫೂರ್ತಿ ಪಡೆದರು.

ಕುದೂರು, ಮಾಗಡಿಗಳಲ್ಲಿ ಹರತಾಳ ಆಚರಿಸಿದರು. 1938ರಲ್ಲಿ ಲಕ್ಷ್ಮಿಪುರದಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಗಾಂಧೀಜಿ ಅವರೊಂದಿಗೆ ಕೆಂಗಲ್ ಹನುಮಂತಯ್ಯ ನೇತೃತ್ವ ವಹಿಸಿದ್ದರು. 1942ರ ಆಗಸ್ಟ್‌ 18ರಂದು ವೀರೇಗೌಡನ ದೊಡ್ಡಿಯಲ್ಲಿ ದಬ್ಬಗುಳಿ ಹನುಮಂತಯ್ಯ, ಪೋಲೋಹಳ್ಳಿ ಚಿಕ್ಕಣ್ಣಪ್ಪ ನೇತೃತ್ವದಲ್ಲಿ ಸಾರಾಯಿ ನಾಶ ಚಳವಳಿ ನಡೆಸಿದರು. ಹಂಚಿಕುಪ್ಪೆಯಲ್ಲಿನ ಸಾರಾಯಿ ಅಂಗಡಿಗೆ ಬೆಂಕಿ ಹಚ್ಚಿ, ಅಂಚೆ ಪಟ್ಟಿಗೆ ಕದ್ದು ನಾಯಕನ ಪಾಳ್ಯ ಕೆರೆಯ ನೀರಲ್ಲಿ ಮುಳುಗಿಸಿ ಚಳವಳಿಯ ಕಿಚ್ಚುಹಚ್ಚಿ ಬಂಧನಕ್ಕೆ ಒಳಗಾದರು.

1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೆ ಮಡಿ ಚಳವಳಿಯಲ್ಲಿ ಮಾಗಡಿ, ವಿ.ಜಿ. ದೊಡ್ಡಿ, ಸೋಲೂರು, ಕುದೂರು, ತಿಪ್ಪಸಂದ್ರ, ಯಲ್ಲಾಪುರ, ಮಾಯಸಂದ್ರಗಳಲ್ಲಿ ಪಿಕಿಟಿಂಗ್ ನಡೆಸಿದ ಹರ್ತಿ ಆದಿರಾಜಯ್ಯ, ದಬ್ಬಗುಳಿ ಹನುಮಂತಯ್ಯ, ನಾರಾಯಣಸಿಂಗ್, ತಿರುಮಲೆ ಅನಂತ ರಂಗಾಚಾರ್ ತಂಡದವರು ಸೆರೆವಾಸ ಅನುಭವಿಸಿದರು.

ಗಾಂಧೀಜಿ ಅವರ ಕರೆಗೆ ಓಗೊಟ್ಟ ಟಿ.ಲಿಂಗಣ್ಣಯ್ಯ, ನಂಜಯ್ಯ ಮತ್ತು ಪಿ.ಕೆ. ತಿಮ್ಮಯ್ಯ ಅವರು 1947ರ ಸೆ.6ರಂದು ನಡೆದ ಮೈಸೂರು ಚಲೊ ಚಳವಳಿಯಲ್ಲಿ ಸಕ್ರಿಯರಾದರು.ಅವರೊಂದಿಗೆ ವರ್ತಕ ಎನ್.ಆರ್. ನಾರಾಯಣಶೆಟ್ಟಿ, ಎಂ.ಬಿ. ಸಿದ್ದಲಿಂಗಪ್ಪ, ಕೆಂಗಲ್ ಹನುಮಂತಯ್ಯ ಅವರ ಬಾಲ್ಯದ ಗೆಳೆಯ ಪೋಲೋಹಳ್ಳಿ ಪೂಜಾರಿ ಚಿಕ್ಕಣ್ಣಪ್ಪ, ಯಲ್ಲಪ್ಪಶೆಟ್ಟಿ, ಬಸ್ಸ್ಟಾಂಡ್ ರಂಗಪ್ಪ, ಬಡಗಿ ನರಸಿಂಹಯ್ಯ, ನೇಕಾರ ಚಿಕ್ಕಣ್ಣಯ್ಯ, ಎಂ.ವಿ.ಕೃಷ್ಣಯ್ಯ, ಚಿಕ್ಕತೊರೆಪಾಳ್ಯ ತಾಂಡ್ಯದ ಹನುಮಾನಾಯ್ಕ, ತಗಚಕುಪ್ಪೆ ನರಸಿಂಹಯ್ಯ, ತಗ್ಗಿಕುಪ್ಪೆ ತಿಮ್ಮೇಗೌಡ, ಕೆಂಪಸಾಗರದ ಬಸವರಾಜು, ಪಿ.ಹನುಮಂತಯ್ಯ, ಎಂ.ಆರ್.ರಾಮಮೂರ್ತಿ, ಎಂ.ಬಿ. ತೋಟದಪ್ಪ, ಬೆಳಗುಂಬ ನಾರಾಯಣಪ್ಪ, ರಂಗಮಾದಶೆಟ್ಟಿ, ಹರಿಕಥೆ ಚನ್ನರಾಯಪ್ಪ, ಗೊಲ್ಲರ ಹಟ್ಟಿ ಕಾಟೇಗೌಡ, ಹನುಮಂತ ಪುರದ ಕೆ.ಪ್ರಭಾಕರ್ ಮೈಸೂರು ಚಲೊ ಚಳವಳಿಯಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದರು.

ಹೀಗೆ ಬದುಕನ್ನು ತೃಣಸಮಾನವಾಗಿ ಕಂಡು, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು, ಮಡಿದ ತ್ಯಾಗಿಗಳ ಸ್ಮರಣೆ ನಮೆಲ್ಲರಿಗೂ ಸ್ಫೂರ್ತಿ ಆಗಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸ್ಮಾರಕ ರಚಿಸಬೇಕಿದೆ.

ಗಮನ ಸೆಳೆದಿದ್ದ ಗಾಂಧಿ ಘರ್‌

1947ರ ಆಗಸ್ಟ್ 14ರ ಮಧ್ಯರಾತ್ರಿ ಬೆಳಗುಂಬ ಗ್ರಾಮದಲ್ಲಿ ಹರಿಜನರೊಂದಿಗೆ ತಮಟೆ ಬಡಿದು ನಾರಾಯಣಪ್ಪ ಸ್ವಾತಂತ್ರ್ಯ ಹಬ್ಬ ಆಚರಿಸಿದರು. ಕೂಡೊಕ್ಕಲು ಆರಂಭಿಸಿದ ತಪ್ಪಿಗಾಗಿ ಬೆಳಗುಂಬ ತ್ಯಜಿಸಿ, ಬಗಿನಗೆರೆ ಗ್ರಾಮದಲ್ಲಿ ನೆಲೆಸಿ ಗಾಂಧಿಘರ್ ಆರಂಭಿಸಿದ್ದರು.

1957ರಲ್ಲಿ ವಿನೋಭಾ ಅವರು ಬಗಿನಗೆರೆಗೆ ಭೇಟಿ ನೀಡಿ ನಾರಾಯಣಪ್ಪ ಆರಂಭಿಸಿದ್ದ ಸ್ವಯಂ ಸೇವಾ ಗುಡಿ ಕೈಗಾರಿಕೆಗಳನ್ನು ಗಮನಿಸಿ ಮಾರ್ಗದರ್ಶನ ನೀಡಿದ್ದರು. ಅಂದಿನ ಕಾಂಗ್ರೆಸ್ ಮುಖಂಡರಾಗಿದ್ದ ಯಶೋಧರ ದಾಸಪ್ಪ ಗಾಂಧಿಘರ್‌ಗೆ ಭೇಟಿ ನೀಡಿ ಸ್ವಯಂ ಸೇವಕರಿಗೆ ತರಬೇತಿ ನೀಡಿದ್ದರು. ಸರ್ವೋದಯದ ನಾಯಕರು ಹಾಗೂ ಗಾಂಧಿವಾದಿ ಆರ್ಯಭಾನು ಗಾಂಧಿಘರ್‌ನಲ್ಲಿ ನಾರಾಯಣಪ್ಪ ಅವರ ಸಹಪಾಠಿಯಾಗಿದ್ದು, ಬಾಪೂಜಿ ಅವರ ಆದರ್ಶಗಳನ್ನು ಮುಂದುವರೆಸಿದ್ದರು.

ಬಗಿನಗೆರೆಯಲ್ಲಿ ನಾರಾಯಣಪ್ಪ ಅವರ ಸಮಾಧಿ ಮತ್ತು ಗಾಂಧಿಘರ್ ರಕ್ಷಣೆಯಿಲ್ಲದೆ ಅನಾಥವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ಇರುವ 180 ಎಕರೆ ಗಾಂಧಿ ಶತಮಾನೋತ್ಸವದ ತೋಟದ ಭೂಮಿಯನ್ನು ಅಭಿವೃದ್ದಿಪಡಿಸಿ ಉಳಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT