ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡಿ: ಡಾ.ಕೆ. ರಾಕೇಶ್ ಕುಮಾರ್

ಜಿಲ್ಲೆ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 19 ಏಪ್ರಿಲ್ 2021, 3:42 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್‌ ನಿಯಂತ್ರಿಸುವ ಕೆಲಸಗಳಿಗೆ ತಾಲ್ಲೂಕು ಆಡಳಿತ ಮೊದಲ ಆದ್ಯತೆ ನೀಡಬೇಕು. ಅಗತ್ಯ ಸಿಬ್ಬಂದಿ ನಿಯೋಜಿಸಿಕೊಂಡು ಕೆಲಸವನ್ನು ಕ್ಷಿಪ್ರವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.

ಶನಿವಾರ ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿ ಅವರು ಮಾತನಾಡಿದರು.

ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಸೋಂಕು ಪರೀಕ್ಷೆಯನ್ನು ಹೆಚ್ಚಳಗೊಳಿಸಬೇಕು. ಸ್ವ್ಯಾಬ್ ಕಲೆಕ್ಟ್ ಮಾಡಲು ಸಿಬ್ಬಂದಿ ಕೊರತೆ ಇದ್ದಲ್ಲಿ ನಿಯಮಾವಳಿಗಳಂತೆ ನಿಯೋಜಿಸಿಕೊಳ್ಳಿ, ವಾಹನದ ವ್ಯವಸ್ಥೆ ಮಾಡಿಕೊಳ್ಳಿ. ಜಿಲ್ಲೆಯಲ್ಲಿ ಅನುದಾನದ ಕೊರತೆ ಇಲ್ಲ. ಪ್ರತಿ ತಾಲ್ಲೂಕಿಗೆ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಜನಸಂದಣಿ ಇರುವ ಪ್ರದೇಶಗಳಲ್ಲಿ ಮೊಬೈಲ್ ಪರೀಕ್ಷಾ ಕೇಂದ್ರ ಆರಂಭಿಸಿ ಸ್ವ್ಯಾಬ್ ಸಂಗ್ರಹಿಸಿ. ಶೀಘ್ರ ಪತ್ತೆಯಿಂದ ರೋಗ ಹರಡುವುದನ್ನು ನಿಯಂತ್ರಿಸಬಹುದು. ಖಾಸಗಿ ಆಸ್ಪತ್ರೆ, ಕ್ಲಿನಿಕ್ ಅವರಿಗೆ ಸೂಚನೆ ನೀಡಿ ಐಎಲ್ ಐ ಹಾಗೂ ಎಸ್‌ಎಆರ್‌ಐ ಪ್ರಕರಣಗಳ ಪಟ್ಟಿ ಪಡೆದು ಪರೀಕ್ಷೆಗೆ ಒಳಪಡಿಸಿ. ಅಂತಹವರು ಸಹಕರಿಸದೇ ಇದ್ದರೆ ನೋಟಿಸ್‌ ಜಾರಿ ಮಾಡಿ ಎಂದರು.

ಕೋವಿಡ್ ಸೋಂಕು ಪರೀಕ್ಷೆಯ ನಂತರ ವರದಿಯನ್ನು ಶೀಘ್ರವಾಗಿ ನೀಡಲು ವ್ಯವಸ್ಥೆ ಮಾಡಿಕೊಳ್ಳಿ. ಎರಡು ಪಾಳಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಿ, ಪರೀಕ್ಷಾ ವರದಿಯನ್ನು ಶೀಘ್ರವಾಗಿ ನೀಡಬಹುದು ಎಂದರು.

ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಟ್ರೇಸಿಂಗ್ ತಂಡಗಳನ್ನು ವಾರ್ಡ್‌, ಗ್ರಾಮವಾರು ನಿಯೋಜಿಸಿಕೊಂಡು ಕೋವಿಡ್ ಸೋಂಕಿತರು, ಸಂಪರ್ಕಿತರ ಪತ್ತೆ ಕೆಲಸ ಚುರುಕುಗೊಳಿಸಬೇಕು. ಕೋವಿಡ್ ವಾರ್ ರೂಂನಲ್ಲಿ ಕ್ರಮಬದ್ಧವಾಗಿ ಉತ್ತಮ ರೀತಿಯಲ್ಲಿ ಕೆಲಸವಾಗಬೇಕು. ಪರಿಶೀಲನೆಯ ವೇಳೆ ಯಾವುದೇ ಲೋಪ ಇರಬಾರದು ಎಂದು ಎಚ್ಚರಿಕೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರವಾರು ಲಸಿಕೆ ಸಾಧನೆ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ, ಕಡಿಮೆ ಸಾಧನೆಯಾಗಿರುವ ಕೇಂದ್ರಗಳ ವ್ಯಾಪ್ತಿಯಲ್ಲಿ ಇಲಾಖೆ ಗಳು ಸಮನ್ವಯವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಆರ್.ಸಿ.ಎಚ್ ಅಧಿಕಾರಿ ಡಾ.ಪದ್ಮಾ, ಡಿಎಸ್‌ಒ ಡಾ.ಕಿರಣ್ ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT