ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ: ಸಂಕಷ್ಟದಲ್ಲಿ ಗ್ರಾಮ ಒನ್ ಕೇಂದ್ರಗಳು

ಗೋವಿಂದರಾಜು ವಿ.
Published 24 ಮೇ 2024, 4:33 IST
Last Updated 24 ಮೇ 2024, 4:33 IST
ಅಕ್ಷರ ಗಾತ್ರ

ಹಾರೋಹಳ್ಳಿ: ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ವಿವಿಧ ಯೋಜನೆ, ನಾಗರಿಕ ಸೇವೆಗಳನ್ನು ಒದಗಿಸಲು ಸರ್ಕಾರ ಆರಂಭಿಸಿದ ಗ್ರಾಮ ಒನ್ ಕೇಂದ್ರಗಳು ಸಂಕಷ್ಟ ಎದುರಿಸುತ್ತಿವೆ.

ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು ರಾಜ್ಯದ 5,963 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳಿವೆ.

ಚುನಾವಣೆ ಪರಿಣಾಮ ವ್ಯವಹಾರವಿಲ್ಲ: ಚುಣಾವಣೆ ಘೋಷಣೆಯಾದ ಬಳಿಕ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವ ಸಾರ್ವಜನಿಕರ ಪ್ರಮಾಣ ಗಣನೀಯ ಕಡಿಮೆಯಾಗಿದೆ. ಕಳೆದ ಎರಡು ತಿಂಗಳಿಂದ ವ್ಯವಹಾರವಾಗದೆ ಬಾಡಿಗೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಗ್ರಾಮ ಒನ್ ಕೇಂದ್ರಗಳ ಸಿಬ್ಬಂದಿ ಆಳಲು.

ಕಮಿಷನ್ ಹಣ ಬಂದಿಲ್ಲ: ಸರ್ಕಾರದ ಆಯುಷ್ಮಾನ್ ಭಾರತ್, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳ ಅರ್ಜಿಗಳನ್ನು ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಿದ್ದು ಇದಕ್ಕೆ ಸರ್ಕಾರ ಕಮಿಷನ್ ನೀಡುತ್ತಿತ್ತು. ಆದರೆ, ಈಚೆಗೆ ಈ ಯೋಜನೆಗಳ ಕಮಿಷನ್ ಹಣವೂ ಬಂದಿಲ್ಲ. ಇದರಿಂದ ಸಿಬ್ಬಂದಿಗೆ ಕಷ್ಟವಾಗಿದೆ.

ಭದ್ರತಾ ಠೇವಣಿಯ ಹೊರೆ: ಇತ್ತೀಚೆಗೆ ಗ್ರಾಮ ಒನ್ ಕೇಂದ್ರಗಳು ಭದ್ರತಾ ಠೇವಣಿಯಾಗಿ ₹ 5 ಸಾವಿರ ಕಟ್ಟಬೇಕು. ಒಂದು ವೇಳೆ ಪಾವತಿಸಲು ವಿಫಲವಾದರೆ ಲಾಗಿನ್ ಐಡಿ ಬಂದ್ ಮಾಡಲಾಗುವುದು ಎಂದು ಆದೇಶ ಮಾಡಲಾಗಿದೆ. ಇದು ಗ್ರಾಮ ಒನ್ ಕೇಂದ್ರಗಳ ಸಿಬ್ಬಂದಿಗೆ ಹೊರೆಯಾಗಿ ಪರಿಣಮಿಸಿದೆ.

ಬಾಡಿಗೆ ಪಾವತಿಗೂ ಕಷ್ಟ: ಸರಕಾರ ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಕೇಂದ್ರ ಮಾಡಿದ್ದು ಇಲ್ಲಿ ಕೂಡ ಹಲವು ಸೇವೆಗಳು ಲಭ್ಯವಿದೆ. ಇವು ಗ್ರಾಮ ಒನ್ ಕೇಂದ್ರಗಳ ಮೇಲೆ ಪರಿಣಾಮ ಬೀರಿದ್ದು ಕೆಲವು ಯೋಜನೆಗಳಿಗಾಗಿ  ಮಾತ್ರ  ಜನರು ಗ್ರಾಮ ಒನ್ ಕೇಂದ್ರಗಳಿಗೆ ಸೇವೆಗೆ ಬರುವಂತಾಗಿದೆ. ಹಾಗಾಗಿ, ಗ್ರಾಮ ಒನ್ ಕೇಂದ್ರಗಳ ಕಟ್ಟಡ ಬಾಡಿಗೆ ಪಾವತಿಗೂ ಕಷ್ಟವಾಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ನೊಂದು ನುಡಿಯುತ್ತಾರೆ.

ಈಗಾಗಲೇ ಕೆಲವು ಕಡೆ ಬಂದ್: ರಾಜ್ಯದಲ್ಲಿ 5,963 ಗ್ರಾಮ ಒನ್ ಕೇಂದ್ರಗಳಿದ್ದು ಕೆಲವು ಕಡೆ ವ್ಯವಹಾರ ಕಡಿಮೆಯಾಗಿ ನಡೆಸಲು ತೊಂದರೆಯಾಗಿ ಬಂದ್ ಆಗಿವೆ.

ಕನಿಷ್ಠ ವೇತನದ ಕೂಗು: ಗ್ರಾಮ ಒನ್ ಕೇಂದ್ರಗಳ ಒಬ್ಬ ಸಿಬ್ಬಂದಿಗೆ ಕನಿಷ್ಠ ವೇತನ ನೀಡಿದರೆ ಬಹಳಷ್ಟು ಯುವಕರಿಗೆ ಅನುಕೂಲ ಆಗುವುದು. ಇದರಿಂದ ಅವರ ಜೀವನ ಮಟ್ಟ ಸುಧಾರಣೆಯಾಗುವುದು ಎಂಬುದು ಗ್ರಾಮ ಒನ್ ಸಿಬ್ಬಂದಿ ಮನವಿ.

ನಾನು ಬಂದು ಕೆಲವೇ ದಿನಗಳಾಗಿವೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಪರೀಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವೆ.
–ದರ್ಶನ್, ಯೋಜನಾ ವ್ಯವಸ್ಥಾಪಕ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಸ್)
ನಾನು ಸುಮಾರು ಒಂದು ವರ್ಷ ಬಾಡಿಗೆ ಪಾವತಿ ಮಾಡಿದೆ. ವ್ಯವಹಾರ ಸರಿಯಾಗಿ ಆಗದ ಕಾರಣ ಗ್ರಾಮ ಒನ್ ಕೇಂದ್ರ ಬಂದ್ ಮಾಡಿದೆ.
–ಹೆಸರು ಹೇಳಲಿಚ್ಛಿಸದ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT