ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ, ಕುಟುಂಬಸ್ಥರ ಬಂಧನಕ್ಕೆ ಹಿರೇಮಠ ಆಗ್ರಹ

ದಲಿತರ ಜಮೀನು ಹಿಂತಿರುಗಿಸುವಂತೆ ಒತ್ತಾಯಿಸಿ ರಾಮನಗರದಲ್ಲಿ ಧರಣಿ
Last Updated 16 ಜನವರಿ 2021, 13:31 IST
ಅಕ್ಷರ ಗಾತ್ರ

ರಾಮನಗರ: ‘ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಅವರ ಸಂಬಂಧಿಕರ ವಶದಲ್ಲಿ ಇರುವ ಗೋಮಾಳ ಜಮೀನನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಜಮೀನು ಕಬಳಿಸಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಜೈಲಿಗೆ ಇಟ್ಟಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್‌.ಆರ್. ಹಿರೇಮಠ ಒತ್ತಾಯಿಸಿದರು.

ದಲಿತರ ಜಮೀನು ಹಿಂದಕ್ಕೆ ಪಡೆಯುವಂವಂತೆ ಆಗ್ರಹಿಸಿ ಇಲ್ಲಿನ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಶನಿವಾರ ನಡೆದ ಧರಣಿಯಲ್ಲಿ ಅವರು ಮಾತನಾಡಿದರು. ‘ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಅವರ ಪತ್ನಿ ಪ್ರಮೀಳಾ, ಅವರ ಮೂರು ಮಕ್ಕಳ ಹೆಸರಿನಲ್ಲಿ ಇಲ್ಲಿ ಇನ್ನೂರು ಎಕರೆಗೂ ಹೆಚ್ಚು ಜಮೀನು ಇದೆ. ಇದರಲ್ಲಿ 110 ಎಕರೆಗೂ ಹೆಚ್ಚು ಜಮೀನು ಗೋಮಾಳಕ್ಕೆ ಸೇರಿದ್ದು, ಇದನ್ನು ಕಾನೂನಾತ್ಮಕವಾಗಿ ಪರಭಾರೆ ಮಾಡಿದ್ದಲ್ಲಿ ಅವರು ಸರ್ಕಾರದ ಮುಂದೆ ದಾಖಲೆ ಇಡಬೇಕು. ಇಲ್ಲ ಸರ್ಕಾರವೇ ಈ ಜಮೀನು ವಶಕ್ಕೆ ಪಡೆಯಬೇಕು. ಆರೋಪಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಎಚ್‌ಡಿಕೆ ಕುಟುಂಬದವರು ಹೊಂದಿರುವ ಜಮೀನಿಗೆ ಯಾವುದಕ್ಕೂ ಅಧಿಕೃತ ಮಂಜೂರು ಆದೇಶ ಇಲ್ಲ. ಅದು ತುಳಿತಕ್ಕೆ ಒಳಗಾದ ದಲಿತರಿಗೆ ಸರ್ಕಾರ ಮಂಜೂರು ಮಾಡಿದ್ದ ಗೋಮಾಳ ಜಮೀನು. ಇದನ್ನು ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಸಂಬಂಧ ಹೈಕೋರ್ಟ್‌ 2020ರ ಜನವರಿ 14ರಂದು ಆದೇಶ ನೀಡಿ, ಲೋಕಾಯುಕ್ತ ವರದಿ ಅನ್ವಯ ಸದರಿ ಜಮೀನನ್ನು ಮೂರು ತಿಂಗಳ ಒಳಗೆ ವಶಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ ಕುಮಾರಸ್ವಾಮಿ ತಮ್ಮ ಪ್ರಭಾವ ಬಳಸಿ ಅದಕ್ಕೆ ಅವಕಾಶ ನೀಡಿಲ್ಲ’ ಎಂದು ದೂರಿದರು.

‘ಪ್ರಕರಣವನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಹೋರಾಟ ಮುಂದುವರಿಯಲಿದ್ದು, ದಲಿತರಿಗೆ ಸೇರಬೇಕಾದ ಇಂಚಿಂಚು ಜಮೀನನ್ನು ವಾಪಸ್ ಕೊಡಿಸಲಾಗುವುದು ಎಂದು ಅವರು ಹೇಳಿದರು.

ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮುಖಂಡ ರವಿಕೃಷ್ಣರೆಡ್ಡಿ ಮಾತನಾಡಿ ‘ಮಾತೆತ್ತಿದರೆ ಆಣೆ ಮಾಡುವ ಕುಮಾರಸ್ವಾಮಿ, ಈ ಜಮೀನನ್ನು ನ್ಯಾಯಬದ್ಧವಾಗಿ ಕೊಂಡುಕೊಂಡಿದ್ದೇವೆ. ದಾಖಲೆಗಳು ಬೆಂಕಿ ಬಿದ್ದು ಹಾಳಾಗಿದ್ದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಆಣೆ ಮಾಡಲಿ’ ಎಂದು ಸವಾಲು ಹಾಕಿದರು.

ಬಳಿಕ ಧರಣಿ ನಿರತರು ಎರಡು ಕಿಲೋಮೀಟರ್‌ ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಜನಾಂದೋಲನಗಳ ಮಹಾ ಮೈತ್ರಿ-ಕರ್ನಾಟಕ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಜನಸಂಗ್ರಾಮ ಪರಿಷತ್, ದಲಿತ ಸಂಘರ್ಷ ಸಮಿತಿ, ಶ್ರೀ ಲಕ್ಷ್ಮೀದೇವಿ ಪೂಜಮ್ಮ ಭೂ ಸಂತ್ರಸ್ಥರ ಹೋರಾಟ ಸಮಿತಿಯ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡರು.

ಕಾನೂನು ರೀತಿಯಲ್ಲಿ ಖರೀದಿಸಿದ್ದರೂ ಕಿರುಕುಳ: ಎಚ್‌ಡಿಕೆ

‘ಕೇತಗಾನಹಳ್ಳಿ ಜಮೀನು ವಿಚಾರದಲ್ಲಿ ರವಿಕೃಷ್ಣಾರೆಡ್ಡಿ, ಹಿರೇಮಠ್ ಮೊದಲಾದವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಭೂಮಿಯನ್ನು ಕಾನೂನು ರೀತಿ ಕೊಂಡುಕೊಂಡಿದ್ದರೂ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ‘ಈ ಸಂಬಂಧ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಈ ಭೂಮಿಯನ್ನು ಬಡವರಿಗೆ ಹಂಚಿ
ನೆಮ್ಮದಿಯಾಗಿರಬೇಕು ಎನ್ನುವಷ್ಟು ಬೇಸರ ಬಂದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT