ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಜಿಲ್ಲೆಯಲ್ಲಿ ಒಂದೇ ದಿನ ದಾಖಲೆಯ ಪ್ರಕರಣ!

ಲಸಿಕೆ ಅಭಾವ ಸಾಧ್ಯತೆ * ಯುವಜನರಿಗೆ ವ್ಯಾಕ್ಸಿನ್ ನೀಡಿಕೆ ಮುಂದೂಡಿಕೆ
Last Updated 2 ಮೇ 2021, 5:03 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಶನಿವಾರ ಬರೋಬ್ಬರಿ 566 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿದೆ. ರಾಮನಗರದಲ್ಲಿ ದಿನವೊಂದಕ್ಕೆ ವರದಿಯಾದ ಅತಿಹೆಚ್ಚು ಪ್ರಕರಣಗಳ ಸಂಖ್ಯೆ ಇದಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.

ದಿನವೊಂದಕ್ಕೆ ಸರಾಸರಿ 150–200ರಲ್ಲಿ ಇರುತ್ತಿದ್ದ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಪ್ರತಿ ತಾಲ್ಲೂಕಿನಲ್ಲೂ ದಿನವೊಂದಕ್ಕೆ ಸೋಂಕಿತರ ಸಂಖ್ಯೆ ಶತಕದ ಗಡಿ ದಾಡಿದೆ. ಶನಿವಾರ ರಾಮನಗರ 173, ಚನ್ನಪಟ್ಟಣ 104, ಕನಕಪುರ 182 ಹಾಗೂ ಮಾಗಡಿಯಲ್ಲಿ 107 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಲಸಿಕೆ ಕೊರತೆ: ಸದ್ಯ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ದಾಸ್ತಾನು ಮುಗಿಯುತ್ತಾ ಬಂದಿದ್ದು, ಭಾನುವಾರ ರಾಜ್ಯ ಸರ್ಕಾರದಿಂದ ಲಸಿಕೆ ಪೂರೈಕೆ ಆಗದಿದ್ದಲ್ಲಿ ಸೋಮವಾರದಿಂದ ಈ ಅಭಿಯಾನ ಮುಂದುವರಿಯುವುದು ಅನುಮಾನವಾಗಿದೆ. ಶನಿವಾರದ ಅಂತ್ಯಕ್ಕೆ ಜಿಲ್ಲೆಯಲ್ಲಿ 3,990 ಡೋಸ್‌ ಮಾತ್ರವೇ ಉಳಿದುಕೊಂಡಿದೆ.

ಜನರಲ್ಲಿ ಲಸಿಕೆ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಈ ಹೊತ್ತಿನಲ್ಲಿ ಲಸಿಕೆ ದಾಸ್ತಾನು ಖಾಲಿ ಆಗುತ್ತಿರುವುದು ಅಧಿಕಾರಿಗಳ ನಿದ್ದೆ ಕೆಡಿಸಿದೆ.

ಯುವಜನರಿಗಿಲ್ಲ ಲಸಿಕೆ: ಮೇ 1ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಕಾರ್ಯಕ್ರಮ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ
ಮಾಡಿಕೊಂಡಿತ್ತು.

ಜಿಲ್ಲೆಯಲ್ಲಿ 100 ಕೇಂದ್ರಗಳನ್ನು ಈ ಅಭಿಯಾನಕ್ಕಾಗಿ ಗುರುತಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ 5 ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು.
ಕೋವಿಡ್ ವ್ಯಾಕ್ಸಿನ್ ನೀಡಲು 840 ಆಶಾ ಕಾರ್ಯಕರ್ತೆಯರು, 422 ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಪ್ರತಿ ಆರೋಗ್ಯ ಕೇಂದ್ರ, ಉಪ ಕೇಂದ್ರ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳನ್ನು ಇದಕ್ಕಾಗಿ ಗುರುತಿಸಲಾಗಿತ್ತು. ಆದರೆ, ಇನ್ನೂ ಸರ್ಕಾರದಿಂದ ಆದೇಶ ಮತ್ತು ಲಸಿಕೆಗಳು ಬರದ ಕಾರಣ ಸದ್ಯ ಈ ಪ್ರಕ್ರಿಯೆ ಅಷ್ಟಕ್ಕೇ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT