ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಕಡೆ ಸರಣಿ ಕಳವು; ಕಂಗಾಲಾದ ಜನ

ಹೋಟೆಲ್, ಮಳಿಗೆಗಳ ನಗದು ಮಾತ್ರ ಗುರಿಯಾಗಿಸಿಕೊಂಡು ಕಳ್ಳರ ಕೈ ಚಳಕ
Published 8 ಮೇ 2024, 5:10 IST
Last Updated 8 ಮೇ 2024, 5:10 IST
ಅಕ್ಷರ ಗಾತ್ರ

ರಾಮನಗರ: ವೃತ್ತಿಪರ ಕಳ್ಳರ ಗುಂಪೊಂದು ಸೋಮವಾರ ರಾತ್ರಿ ಮದ್ಯದ ಅಂಗಡಿ, ಹೋಟೆಲ್ ಸೇರಿದಂತೆ ಐದು ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆಸಿದೆ. ಸಿಹಿ ಮಳಿಗೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿದೆ. ಈ ಕುರಿತು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಒಂದೇ ದಿನ ನಡೆದ ಅತಿ ಹೆಚ್ಚು ಸರಣಿ ಕಳ್ಳತನಕ್ಕೆ ಜನ ಕಂಗಾಲಾಗಿದ್ದಾರೆ.

ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯಲ್ಲಿರುವ ಬ್ರಿಟಿಷ್ ಲಿಕ್ಕರ್‌ನಲ್ಲಿ ₹ 1.50 ಲಕ್ಷ, ರಾಮಕೃಷ್ಣ ಆಸ್ಪತ್ರೆ ಸಮೀಪದ ಸಾಯಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್‌ ಮಳಿಗೆಯಲ್ಲಿ ₹ 60 ಸಾವಿರ, ಹೋಟೆಲ್‌ ವೈವಿಧ್ಯ ಮತ್ತು ಸರಸ್ವತಿ ಎಲೆಕ್ಟ್ರಾನಿಕ್ಸ್‌ನಲ್ಲಿ ತಲಾ ₹ 5 ಸಾವಿರ ಹಾಗೂ ಕೆಂಪೇಗೌಡ ವೃತ್ತದ ಬಳಿಯ ಮಾಗಡಿ ರಸ್ತೆಯಲ್ಲಿರುವ ಫ್ರೆಸ್‌ಲ್ಯಾಂಡ್‌ ಮಳಿಗೆಯಲ್ಲಿ ₹ 80 ಸಾವಿರ ಸೇರಿದಂತೆ ಒಟ್ಟು ₹ 3 ಲಕ್ಷ ಕಳ್ಳತನವಾಗಿದೆ. ಮಹಾಲಕ್ಷ್ಮಿ ಸ್ವೀಟ್ಸ್ ಮಳಿಗೆಯಲ್ಲೂ ಕೃತ್ಯ ಎಸಗಲು ಯತ್ನಿಸಿರುವ ಕಳ್ಳರು, ಅಲ್ಲಿನ ಬೀಗ ಒಡೆಯಲು ಸಾಧ್ಯವಾಗದೆ ವಾಪಸ್ ಹೋಗಿದ್ದಾರೆ.

ಮುಸುಕುಧಾರಿಗಳು: ‘ಐವರು ಮುಸುಕುಧಾರಿ ಕಳ್ಳರ ತಂಡ ಮಧ್ಯರಾತ್ರಿ ಎರಡು ಸ್ಕೂಟರ್‌ಗಳಲ್ಲಿ ಬಂದು ಕೃತ್ಯ ಎಸಗಿದೆ. ಎಲ್ಲರೂ ಜಾಕೆಟ್‌ ಧರಿಸಿಕೊಂಡು ಬಂದಿದ್ದರು. ಟಾರ್ಗೆಟ್ ಮಾಡಿರುವ ಎಲ್ಲಾ ಅಂಗಡಿಗಳು ರೋಲಿಂಗ್ ಶಟರ್ ಹೊಂದಿದ್ದು, ಒಳಭಾಗದಲ್ಲಿ ಗ್ಲಾಸ್‌ ಬಾಗಿಲು ಹೊಂದಿವೆ’ ಎಂದು ಪೊಲೀಸರು ತಿಳಿಸಿದರು.

‘ಬೀಗ ಹಾಕಿದ್ದ ರೋಲಿಂಗ್ ಶಟರ್ ಅನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳ ಹೋಗುವಷ್ಟು ದಾರಿ ಮಾಡಿಕೊಂಡಿರುವ ಕಳ್ಳರು, ಗ್ಲಾಸ್ ಬಾಗಿಲನ್ನು ಒಡೆದು ಒಳ ನುಗಿದ್ದಾರೆ. ಮಳಿಗೆಗಳಲ್ಲಿ ನಗದು ಇರುವ ಸ್ಥಳಕ್ಕೆ ತೆರಳಿ ಕೈಗೆ ಸಿಕ್ಕಷ್ಟು ನಗದು ದೋಚಿಕೊಂಡು, ಅಲ್ಲಿಂದ ಮುಂದಿನ ಅಂಗಡಿಗೆ ಹೋಗಿದ್ದಾರೆ’ ಎಂದು ಹೇಳಿದರು.

ಕೃತ್ಯ ನಡೆದ ಸ್ಥಳಗಳಿಗೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಟಿ.ವಿ. ಸುರೇಶ್, ಡಿವೈಎಸ್ಪಿ ದಿನಕರ ಶೆಟ್ಟಿ, ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ ಹಾಗೂ ಐಜೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ತನ್ವೀರ್ ಹುಸೇನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ, ಅಪರಾಧ ಸ್ಥಳ ತನಿಖಾ ತಂಡವು ಸ್ಥಳದಲ್ಲಿ ಮಾಹಿತಿ ಕಲೆ ಹಾಕಿತು.

ಬೀಟ್ ಪೊಲೀಸರು ಇರಲಿಲ್ಲ: ರಾಜ್ಯದಲ್ಲಿ ಮಂಗಳವಾರ ನಡೆದ 14 ಲೋಕಸಭಾ ಕ್ಷೇತ್ರಗಳ ಮತದಾನದ ಕರ್ತವ್ಯಕ್ಕಾಗಿ ನಗರದ ಪೊಲೀಸ್ ಠಾಣೆಗಳ ಸಿಬ್ಬಂದಿ ಸೇರಿದಂತೆ ಜಿಲ್ಲೆಯಿಂದ ಸುಮಾರು 400 ಪೊಲೀಸರು ತೆರಳಿದ್ದಾರೆ. ಹಾಗಾಗಿ, ನಗರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಬೀಟ್ ಪೊಲೀಸರು ಸಹ ಕರ್ತವ್ಯದಲ್ಲಿ ಇರಲಿಲ್ಲ. ಇದೇ ಅವಕಾಶ ಬಳಸಿಕೊಂಡಿರುವ ಕಳ್ಳರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬ್ರಿಟಿಷ್ ಲಿಕ್ಕರ್ ಮದ್ಯದಂಗಡಿಯ ರೋಲಿಂಗ್ ಶಟರ್ ಅನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳ ನುಗ್ಗಿರುವ ಕಳ್ಳರು
ಬ್ರಿಟಿಷ್ ಲಿಕ್ಕರ್ ಮದ್ಯದಂಗಡಿಯ ರೋಲಿಂಗ್ ಶಟರ್ ಅನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳ ನುಗ್ಗಿರುವ ಕಳ್ಳರು
ಮಾಗಡಿ ರಸ್ತೆಯಲ್ಲಿರುವ ಫ್ರೆಶ್‌ಲ್ಯಾಂಡ್ ಮಳಿಗೆಯ ಗ್ಲಾಸ್‌ ಒಡೆದು ಒಳನುಗ್ಗಿರುವುದು
ಮಾಗಡಿ ರಸ್ತೆಯಲ್ಲಿರುವ ಫ್ರೆಶ್‌ಲ್ಯಾಂಡ್ ಮಳಿಗೆಯ ಗ್ಲಾಸ್‌ ಒಡೆದು ಒಳನುಗ್ಗಿರುವುದು
ಸರಣಿ ಕಳ್ಳತನ ನಡೆದಿರುವ ಸ್ಥಳಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕೃತ್ಯ ಸೆರೆಯಾಗಿದ್ದು ಕಳ್ಳರ ಕುರಿತು ಕೆಲ ಸುಳಿವು ಸಿಕ್ಕಿವೆ. ಆ ಮೇರೆಗೆ ಬಂಧನಕ್ಕೆ ಬಲೆ ಬೀಸಲಾಗಿದೆ
– ದಿನಕರ ಶೆಟ್ಟಿ ಡಿವೈಎಸ್ಪಿ ರಾಮನಗರ

ಮದ್ಯದ ಬಾಟಲಿಯನ್ನೂ ಮುಟ್ಟಿಲ್ಲ!

‘ಐದು ಕಡೆ ಕೃತ್ಯ ಎಸಗಿರುವ ಕಳ್ಳರು ನಗದು ಹೊರತುಪಡಿಸಿ ಬೇರೇನನ್ನೂ ಮುಟ್ಟಿಲ್ಲ. ಬ್ರಿಟಿಷ್ ಲಿಕ್ಕರ್‌ ಮಳಿಗೆಗೆ ಕನ್ನ ಹಾಕಿದರೂ ಅಲ್ಲಿ ಒಂದೇ ಒಂದು ಮದ್ಯದ ಬಾಟಲಿ ಮುಟ್ಟಿಲ್ಲ. ದಿನಸಿ ಸಾಮಗ್ರಿ ಗಿಫ್ಟ್ ಐಟಂಗಳು ಸೇರಿದಂತೆ ಹಲವು ವಸ್ತುಗಳಿದ್ದ ಸೂಪರ್ ಮಾರ್ಕೆಟ್ ಫ್ರೆಶ್‌ಲ್ಯಾಂಡ್‌ನಲ್ಲಾಗಲಿ ದುಬಾರಿ ಬೆಲೆಯ ಮೊಬೈಲ್‌ ಫೋನ್‌ಗಳು ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪಿಠೋಪಕರಣಗಳಿದ್ದ ಸಾಯಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್‌ ಮಳಿಗೆಯಲ್ಲೂ ನಗದು ಬಿಟ್ಟು ಬೇರೇನೂ ಕದ್ದಿಲ್ಲ. ಮೇಲ್ನೋಟಕ್ಕೆ ಇದು ವೃತ್ತಿಪರ ಕಳ್ಳರು ಎಸಗಿರುವ ಕೃತ್ಯದಂತಿದೆ. ಆಂಧ್ರಪ್ರದೇಶ ತೆಲಂಗಾಣ ಮತ್ತು ತಮಿಳುನಾಡು ಕಡೆ ಇಂತಹ ಗ್ಯಾಂಗ್‌ಗಳು ಸಕ್ರಿಯವಾಗಿವೆ. ಬೇರೆ ರಾಜ್ಯಗಳಿಗೆ ಆಗಾಗ ಬಂದು ಈ ಗ್ಯಾಂಗ್‌ಗಳು ಕೃತ್ಯ ಎಸಗಿ ಹೋಗುತ್ತವೆ’ ಎಂದು ಪೊಲೀಸರು ತಿಳಿಸಿದರು. ಪತ್ತೆಗೆ ಮೂರು ತಂಡ ರಚನೆ ಕಳ್ಳರ ಪತ್ತೆಗೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ. ಕೃತ್ಯ ನಡೆದ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಸಿಕ್ಕ ಕೆಲ ಸುಳಿವಿನ ಮೇರೆಗೆ ಮಂಗಳವಾರವೇ ಒಂದು ತಂಡ ಕಳ್ಳರ ಬೆನ್ನತ್ತಿ ಬೆಂಗಳೂರಿಗೆ ಹೋಗಿದೆ. ಇದೇ ಮಾದರಿಯ ಕಳ್ಳತನ ನಡೆದಿರುವ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆದು ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT